ಚಾಮರಾಜಪೇಟೆ ಬೆನ್ನಲ್ಲೇ ಮೈಸೂರಿನಲ್ಲಿ ಕರುವಿನ ಮೇಲೆ ದಾಳಿ….!

ಮೈಸೂರು

    ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕನಗರದಲ್ಲಿ ಆಗಂತುಕರು ಹಾಲು ತುಂಬಿದ ಮೂರು ಹಸುಗಳ ಕೆಚ್ಚಲು ಕೊಯ್ಯುವ ಮೂಲಕ ಅಟ್ಟಹಾಸ ಮೆರೆದಿದ್ದರು. ಈ ಕ್ರೌರ್ಯಕ್ಕೆ ಕರ್ನಾಟಕದಲ್ಲಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿತ್ತು. ಸದ್ಯ ಈ ಘಟನೆ ಮಾಸುವ ಮುನ್ನವೇ ಇಂತಹದೊಂದು ಘಟನೆ ಮೈಸೂರಿನಲ್ಲಿ  ನಡೆದಿದ್ದು, ಮಾರಕಾಸ್ತ್ರದಿಂದ ಕರುವಿನ ಬಾಲವನ್ನು ದುಷ್ಕರ್ಮಿಗಳು ತುಂಡರಿಸಿದ್ದಾರೆ.

   ಮಾರಕಾಸ್ತ್ರದಿಂದ ಹರಕೆಗಾಗಿ ಬಿಟ್ಟ ಕರುವಿನ ಬಾಲವನ್ನು ದುಷ್ಕರ್ಮಿಗಳು ತುಂಡರಿಸಿ ಪರಾರಿಯಾಗಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ಘಟನೆ ನಡೆದಿದೆ. ಸದ್ಯ ದಾಳಿ ಮಾಡಿದವರ ಬಗ್ಗೆ ಮಾಹಿತಿ ಸಿಕ್ಕಿಲ್ಲ. 

   ಈ ಕರುವನ್ನು ಭಕ್ತರು ನಂಜನಗೂಡಿನ ನಂಜುಂಡೇಶ್ವರನಿಗೆ ಹರಕೆ ರೂಪದಲ್ಲಿ ಅರ್ಪಿಸಿದ್ರು. ಇದೇ ರೀತಿ ಸಾಕಷ್ಟು ಭಕ್ತರು ಧನ ಕರುಗಳನ್ನ ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ಒಪ್ಪಿಸುವ ಪದ್ಧತಿ ಜಾರಿಯಲ್ಲಿದೆ. ಇದೇ ರೀತಿ ಹರಕೆಯ ಕರುಗೆ ಬೆಳಗಿನಜಾವ ಪರಶುರಾಮ ದೇಗುಲದ ರಸ್ತೆಯಲ್ಲಿ ಯಾರೋ ಕಿಡಿಗೇಡಿಗಳು ದಾಳಿ ಮಾಡಿ ಪರಾರಿಯಾಗಿದ್ದಾರೆ. 

   ರಕ್ತಸಿಕ್ತವಾಗಿದ್ದ ಕರುವನ್ನ ನೋಡಿದ ಸ್ಥಳೀಯರು ಅದಕ್ಕೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ನಂಜನಗೂಡಿನ ಹಳ್ಳದ ಕೇರಿಯ ರಾಮಮಂದಿರದ ಬಳಿ ಕರುವನ ತೆಗೆದುಕೊಂಡು ಬಂದು ಇರಿಸಿದ್ದಾರೆ. ಈ ಹಿಂದೆ ಸಹ ಹಸು, ಕರುಗಳಿಗೆ ರಾಡಿನಿಂದ ಹಲ್ಲೆ ಮಾಡಿದ್ದಿದೆ. ಆದರೆ ಇದೇ ಮೊದಲ ಬಾರಿಗೆ ಮಾರಕಸ್ತ್ರವನ್ನು ಬಳಸಿ ಕರುವಿನ ಮೇಲೆ ದಾಳಿ ಮಾಡಲಾಗಿದೆ. ಇದು ಸಹಜವಾಗಿ ಶ್ರೀಕಂಠೇಶ್ವರ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

   ಕರುವನ್ನ ತೆಗೆದುಕೊಂಡು ಹೋಗಿ ದೇವಸ್ಥಾನದ ಮುಂದೆ ಇಟ್ಟು ಪ್ರತಿಭಟನೆ ಮಾಡಲು ಭಕ್ತರು ಮುಂದಾಗಿದ್ದರು. ಘಟನೆಗೆ ದೇವಸ್ಥಾನದ ಆಡಳಿತ ಮಂಡಳಿಯ ನಿರ್ಲಕ್ಷ ಕಾರಣ ಅನ್ನೋದು ಭಕ್ತರ ಆರೋಪವಾಗಿತ್ತು. ಈ ಬಗ್ಗೆ ಟಿವಿ 9 ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ದೇವಸ್ಥಾನದ ಜಗದೀಶ್ ಸ್ಥಳಕ್ಕೆ ದೌಡಾಯಿಸಿದ್ದಾರೆ.

  ಸ್ಥಳಕ್ಕೆ ಆಗಮಿಸಿದ ಇಓ ಜಗದೀಶ್ ಅವರನ್ನು ಸ್ಥಳೀಯರು ಹಾಗೂ ಭಕ್ತರು ತರಾಟೆಗೆ ತೆಗೆದುಕೊಂಡರು. ಈ‌ ರೀತಿ ಕೃತ್ಯವೆಸಗಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ದೇವಸ್ಥಾನದ ಹಸು, ಕರುಗಳಿಗೆ ಮೊದಲಿನಂತೆ ದೇವಸ್ಥಾನದ ಶಿವಲಿಂಗದ ಮುದ್ರೆ ಹಾಕಬೇಕು ಅಂತಾ ಒತ್ತಾಯಿಸಿದ್ದಾರೆ. 

  ಕೊನೆಗೆ ಸ್ಥಳೀಯರ ಒತ್ತಡಕ್ಕೆ ಮಣಿದ ಜಗದೀಶ್, ಇಂದು ಸಂಜೆಯೊಳಗೆ ತಾತ್ಕಾಲಿಕ ಗೋಶಾಲೆಯನ್ನು ತೆರೆಯುವುದಾಗಿ ಟಿವಿ9 ಮೂಲಕ ಭರವಸೆ ನೀಡಿದರು. ಅಷ್ಟೇ ಅಲ್ಲ ಮುಂದೆ ಭಕ್ತರು ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ನೀಡುವ ಹಸು, ಕರುಗಳ ಬಗ್ಗೆ ಅಧಿಕೃತವಾಗಿ ದೇವಸ್ಥಾನಕ್ಕೆ ಮಾಹಿತಿ ನೀಡಿ ರಶೀದಿ ಪಡೆಯುವಂತೆ ಸಹ ಮನವಿ ಮಾಡಿದ್ದಾರೆ. 

   ಅಷ್ಟೇ ಅಲ್ಲ ದೇವಸ್ಥಾನಕ್ಕೆ ಇದುವರೆಗೂ ನೀಡಿರುವ ಹಸು, ಕರುಗಳ ಬಗ್ಗೆ ಅಧಿಕೃತ ಮಾಹಿತಿಯೇ ಇರಲಿಲ್ಲ. ಈ ಬಗೆಯು ಸಹ ಗಮನಹರಿಸಿ ದೇವಸ್ಥಾನದ ಸುತ್ತಮುತ್ತ ಇರುವ ಬೀಡಾಡಿ ದನಗಳ ಹಾಗೂ ಕರುಗಳ ಸಂಪೂರ್ಣ ಮಾಹಿತಿ ಕಲೆ ಹಾಕುವ ಭರವಸೆ ನೀಡಿದರು ಇದು ಸಹಜವಾಗಿ ಸ್ಥಳೀಯರಿಗೆ ಖುಷಿ ನೀಡಿದೆ. ಇದಕ್ಕೆ ಕಾರಣವಾದ ಟಿವಿ9ಗೆ ಸ್ಥಳೀಯರು ಕೃತಜ್ಞತೆಯನ್ನು ಅರ್ಪಿಸಿದರು.

  ಈ ಬಗ್ಗೆ ದೂರು ಸಹ ನೀಡಿದ್ದೆವು, ಆದರೆ ಯಾವುದೇ ಕ್ರಮ ಆಗಿರಲಿಲ್ಲ ಯಾವಾಗ ಟಿವಿ9 ಈ ಬಗ್ಗೆ ವರದಿ ಪ್ರಸಾರ ಮಾಡ್ತು, ಆಗ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದೆಲ್ಲ ಏನೇ ಇರಲಿ ಮಾತು ಬಾರದ ಮೂಕ ಪ್ರಾಣಿ ಮೇಲೆ ಈ ರೀತಿ ಪೈಸಾಚಿಕವಾಗಿ ಹಲ್ಲೆ ನಡೆಸಿರುವವರು ಕಿಡಿಗೇಡಿಗಳು ಹಾಗೂ ಮಾನಸಿಕ ಅಸ್ವಸ್ಥರೇ ಸರಿ. ಇಂಥವರಿಗೆ ಕಠಿಣಾತಿ ಕಠಿಣ ಶಿಕ್ಷೆ ನೀಡಬೇಕು ಅನ್ನುವುವು ಎಲ್ಲರ ಒತ್ತಾಯವಾಗಿದೆ.

Recent Articles

spot_img

Related Stories

Share via
Copy link