ಹಾನಗಲ್ಲ :
ಬಾಳಂಬೀಡ ಏತ ನೀರಾವರಿ ಯೋಜನೆ ಜಾರಿ ಮಾಡಿ, ಇಲ್ಲವೆ ರೈತರಿಗೆ ವಿಷ ಕೊಡಿ, ಸರಕಾರಗಳ ಡೊಂಬರಾಟ ಸಾಕು, ವಿಧಾನಸಭೆ, ಸಂಸತ್ತಿನಲ್ಲಿ ರೈತರ ಪರವಾದ ಜನ ಪ್ರತಿನಿಧಿಗಳೇ ಇಲ್ಲ, ಇನ್ನೂ ಹೋರಾಟದ ಹಾದಿ ತೀವ್ರಗೊಳ್ಳುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಚಾಲಕ ಮಾಲತೇಶ ಪೂಜಾರ ಎಚ್ಚರಿಸಿದರು.
ಹಾನಗಲ್ಲ ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕ ಉದ್ಘಾಟಿಸಿ, ರೈತರಿಗೆ ಆತ್ಮಸ್ಥೈರ್ಯ ತುಂಬುವ ಹಾಗೂ ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಬೇಡಿ ಎಂಬ ಅರಿವು ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ಸರಕಾರ ನಮಗೆ ಕೊಡುವ ಸೌಲಭ್ಯಗಳು ಭಿಕ್ಷೆಯಲ್ಲ. ನಮ್ಮ ತೆರಿಗೆ ಹಣದಲ್ಲಿ ತಮ್ಮ ಮನೆತನ ನಡೆಸುವ ಜನಪ್ರತಿನಿಧಿಗಳಿಗೆ ರೈತರ ಪರ ಕಾಳಜಿ ಇಲ್ಲ. 15-20 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಾಳಂಬೀಡ ಏತ ನೀರಾವರಿ ಯೋಜನೆ ಜಾರಿಗೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರುತ್ತಿಲ್ಲ. ಚುನಾವಣೆಯಲ್ಲಿ ಮತ ಕೇಳಲು ಬರುವಾಗಿನ ಆಸಕ್ತಿ ಮತ್ತೆ ಚುನಾವಣೆ ಬರುವವರೆಗೆ ಹೋಲ್ಡನಲ್ಲಿರುತ್ತದೆ ಎಂದು ವ್ಯಂಗ್ಯವಾಡಿದ ಅವರು, ರೈತರೆ ಸಾಲಕ್ಕಾಗಿ ಹೆದರಿ ಆತ್ಮಹತ್ಯೆಗೆ ಹೋಗಬೇಡಿ. ಸಾವಿರಾರು ಕೋಟಿ ಹಣ ನುಂಗಿ ಪರದೇಶಕ್ಕೆ ಪರಾರಿ ಆಗುವ ಶ್ರೀಮಂತರನ್ನು ಸರಕಾರಗಳು ರಕ್ಷಿಸುತ್ತವೆ. ನಾವು ರೈತರನ್ನು ರಕ್ಷಿಸುತ್ತೇವೆ. ಇದಕ್ಕೆ ನಾವು ಬದ್ಧ ಭಯಬೀಳಬೇಡಿ ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯರು ಮಾತನಾಡಿ, ಭೂಮಿ ವಿಷ ಹಾಕುವುದನ್ನು ನಿಲ್ಲಿಸಿ. ಸಾವಯವ ಕೃಷಿಗೆ ಮುಂದಾಗಿರಿ. ಸಂಘಟನೆಗಳು ರೈತನ ಸಂಕಷ್ಟಕ್ಕೆ ನಿಲ್ಲುವಂತಾಗಬೇಕು. ಬಾಳಂಬೀಡ ಏತ ನೀರಾವರಿ ಯೋಜನೆ ಜಾರಿಯಾಗಿ ಎರಡುಮೂರು ದಶಕಗಳೇ ಆಗಬೇಕಾಗಿತ್ತು. ಇಲ್ಲಿಂದ ಸವಣೂರು-ಶಿಗ್ಗಾಂವಿಯ ಕೃಷಿ ಭೂಮಿಗೆ ನೀರು ಕೊಂಡೊಯ್ಯಲು ಸಾಧ್ಯವಾಗುತ್ತದೆ. ಆದರೆ ಇಲ್ಲಿಯ ನೀರು ಇಲ್ಲಿಯ ರೈತರ ಪ್ರಯೋಜನೆ ನೆರವಾಗುತ್ತಿಲ್ಲ ಎಂಬ ಬೇಸರವಿದೆ. ರೈತ ಗುಳೆ ಹೋಗುವುದನ್ನು ನಿಲ್ಲಿಸಲು ಈ ಭಾಗದ ರೈತನಿಗೆ ಬಾಳಂಬೀಡ ಏತ ನೀರಾವರಿ ಜಾರಿಯಾಗಬೇಕು ಎಂದರು.
ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನ್ಯಾಯವಾದಿ ಎಸ್.ಎಂ.ಕೋತಂಬರಿ ಮಾತನಾಡಿ, ಬಾಳಂಬೀಡ ಏತ ನೀರಾವರಿ ಯೋಜನೆ ಕೂಡಲೇ ಕಾಮಗಾರಿ ಆರಂಭಿಸದಿದ್ದರೆ ಮುಂಬರುವ ಯಾವುದೆ ಚುನಾವಣೆಯಲ್ಲಿ ಮತದಾನ ಭಹಿಷ್ಕರಿಸುವ ದೃಢ ಸಂಕಲ್ಪ ರೈತರದಾಗುವ ಮೂಲಕ ಸರಕಾರವನ್ನು ಎಚ್ಚರಿಸಬೇಕು. ಚಾಕಲೇಟ್ ಬೆಲೆ ನಿರ್ಧಾರಾಗುತ್ತದೆ. ಹೆಂಡ ಸರಾಯಿ ಬಲೆ ನಿರ್ಧಾರವಾಗುತ್ತದೆ. ರೈತನ ಬೆಳೆಗೆ ಬೆಲೆ ನಿಗದಿ ಆಗುವುದಿಲ್ಲ. ಸರಕಾರ ಘೋಷಿಸಿದ ಬೆಲೆಗೆ ಖರೀದಿಯೂ ಆಗುವುದಿಲ್ಲ. ಈ ದೇಶದಲ್ಲಿ ರೈತನನ್ನು ತುಳಿಯುವವರಿದ್ದಾರೆ. ರೈತನ ಸಂಕಷ್ಟ ತಿಳಿಯುವವರಿಲ್ಲ ಎಂದು ಕಿಡಿ ಕಾರಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಮಾತನಾಡಿ, ನೀರಾವರಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕಾದ ಸರಕಾರ ರೈತರ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿದೆ. ರೈತನನ್ನು ಭರವಸೆಗಳ ಮೂಲ ಅರೆ ಬೆಂದ ಕಾಳಾಗಿ ಹಾಳು ಮಾಡುತ್ತಿರುವ ಸರಕಾರದ ನೀತಿಗೆ ಧಿಕ್ಕಾರವಿರಲಿ. ರೈತ ಒಗ್ಗಟ್ಟಾದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗಬಲ್ಲದು. ಪಕ್ಷ ಜಾತಿಗಳನ್ನು ಬಿಡಿ ರೈತ ಧರ್ಮ ಪಾಲಿಸಲು ಮುಂದಾಗಿ ಎಂದು ಕರೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರಪ್ಪ ಬಳಿಗಾರ ಮಾತನಾಡಿ ಈ ಕೂಡಲೇ ಬಾಳಂಬೀಡ ಏತ ನೀರಾವರಿ ಯೋಜನೆ ಜಾರಿಗೆ ಸಭೆ ಕರೆದು ಹೋರಾಟದ ರೂಪುರೇಷೆ ರೂಪಿಸಲಾಗುವುದು. ಹಾನಗಲ್ಲ ತಾಲೂಕಿನ ಉತ್ತರ ಭಾಗಕ್ಕೆ ನೀರಾವರಿ ವೈಫಲ್ಯದಿಂದಾಗ ತಾರತಮ್ಯವನ್ನು ಪ್ರತಿಭಟಿಸುತ್ತೇವೆ. ರೈತರೇ ಒಂದಾಗಿ ನೀರು ತರೋಣ. ಸರಕಾರಕ್ಕೆ ಸಾಲ ಕೊಡೋಣ ಎಂದರು.
ಸಾಂವಸಗಿ ಗ್ರಾಮ ಘಟಕದ ಅಧ್ಯಕ್ಷ ಬಾಪುಗೌಡ ಪಾಟೀಲ ಅಧ್ಯಕ್ಷತೆವಹಿಸಿದ್ದರು. ಸಂಗೂರು ಸಹಕಾರಿ ಸಕ್ಕರೆ ಕಾರಖಾನೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ಜಿಲ್ಲಾ ಮುಖಂಡ ಬಸವಂತಪಪ್ಪ ಮೆಳ್ಳಳ್ಳಿ, ನರೇಗಲ್ಲ ಗ್ರಾಮ ಘಟಕದ ಅಧ್ಯಕ್ಷ ವೀರಭದ್ರಪ್ಪ ಅಗಡಿ, ಚನ್ನಬಸಪ್ಪ ಹಾವಣಗಿ, ಬಸವರಾಜ ತಳವಾರ, ಚನ್ನಬಸಪ್ಪ ಹಾವಣಗಿ, ಷಣ್ಮುಖಯ್ಯ ಹಿರೇಮಠ ವೇದಿಕೆಯಲ್ಲಿದ್ದರು. ಮಂಜು ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ