ಬ್ಯಾಡಗಿ:
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಪುರಾತತ್ವ ಇಲಾಖೆ ಆಯುಕ್ತ ಡಾ.ವೆಂಕಟೇಶ್ ಹಾಗೂ ಸಿಬ್ಬಂದಿ ನೆಲಸಮಗೊಳಿಸಿದ್ದ ತಾಲೂಕಿನ ಶಿಡೇನೂರ ಗ್ರಾಮದ ಈಶ್ವರ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಈಶ್ವರ ದೇವಸ್ಥಾನ ಜಿರ್ಣೋದ್ಧಾರ (ಪುನರ್ ನಿರ್ಮಾಣ) ಕಾಮಗಾರಿ ಕಳೆದ 2 ವರ್ಷಗಳಿಂದ ಸಂಪೂರ್ಣ ಸ್ಥಗಿತಗೊಂಡಿತ್ತು, ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಗಜೇಂದ್ರಗಡ-ಸೊರಬ ಹೆದ್ದಾರಿ ತಡೆದು ಪ್ರತಿಭಟನೆಯನ್ನೂ ಸಹ ಮಾಡಲು ನಿರ್ಧರಿಸಿದ್ದರು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಇಲಾಖೆಯ ಆಯುಕ್ತ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆಗಾಗಿ ಮೈಸೂರಿನಿಂದ ಶಿಡೇನೂರ ಗ್ರಾಮಕ್ಕೆ ಆಗಮಿಸಿದರು.
ಕಾಮಗಾರಿ ಆರಂಭಿಸುವೆ ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತ ಡಾ.ವೆಂಕಟೇಶ್, ಕೆಲಸದ ಒತ್ತಡ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಆರಂಭಿಸುವಲ್ಲಿ ವಿಳಂಬವಾಗಿದೆ ಹೊರತು, ನಿರ್ಲಕ್ಷ್ಯ ಮನೋಭಾವನೆ ಹೊಂದಿಲ್ಲ ಸಿಬ್ಬಂದಿಗಳ ಕೊರತೆಯಿಂದ ಇಲಾಖೆಯಡಿ ಸಾಕಷ್ಟು ಕಾಮಗಾರಿಗಳು ಮಂದಗತಿಯಲ್ಲಿ ಸಾಗಿದ್ದು ಇದಕ್ಕಾಗಿ ವಿಷಾದವಿರಲಿ ಎಂದರು..
ಒಟ್ಟು 95 ಲಕ್ಷ ರೂ.ಗಳಲ್ಲಿ ದೇವಸ್ಥಾನ: ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು ಒಟ್ಟು 95 ಲಕ್ಷ ರೂ.ಗಳಲ್ಲಿ ದೇವಸ್ಥಾನ
ನಿರ್ಮಿಸಲಾಗುವುದು, ದೇವಸ್ಥಾನ ನಿರ್ಮಿಸುವ ಪರಿಣಿತ ಶಿಲ್ಪಿಗಳ ತಂಡಕ್ಕೆ ಟೆಂಡರ್ ಕೂಡ ನೀಡಲಾಗಿದ್ದು ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಈಗಾಗಲೇ ಮುಕ್ತಾಯಗೊಂಡಿವೆ ಎಂದರು.
15 ದಿನಗಳಲ್ಲಿ ಕಾಮಗಾರಿ ಆರಂಭ: ಸದರಿ ದೇವಸ್ಥಾನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಲಭ್ಯವಿದೆ, ಯಾವುದೇ ತೊಂದರೆ ಬಾರದಂತೆ ಹಣಕಾಸಿನ ವ್ಯವಸ್ಥೆ ಮಾಡಲಾಗುವುದು, ಬರುವ 15 ದಿನಗಳಲ್ಲಿ ಭೂಮಿಪೂಜೆ ನೆರವೇರಿಸಲು ನಿರ್ಧರಿಸಲಾಗಿದೆ, ಅದಕ್ಕಾಗಿ ಎಲ್ಲ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿದ್ದು, ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬವಾಗುವುದಿಲ್ಲ ಮಾನ್ಯ ಶಾಸಕರು ಹಾಗೂ ಸಚಿವರ ದಿನಾಂಕಗಳನ್ನು ಪಡೆಯುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.
ಶಾಸಕರು ದೂರವಾಣಿಯಲ್ಲಿ ಚರ್ಚಿಸಿದ್ದಾರೆ: ಸ್ಥಳೀಯ ಶಾಸಕರಾದ ಮಾನ್ಯ ವಿರೂಪಾಕ್ಷಪ್ಪ ಬಳ್ಳಾರಿ ಇವರು, ದೇವಸ್ಥಾನ ನಿರ್ಮಾಣದ ಕುರಿತು ದೂರವಾಣಿಯಲ್ಲಿ ಎಲ್ಲ ಮಾಹಿತಿಗಳನ್ನು ಪಡೆದುಕೊಂಡಿದ್ದು, ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕೆಂಬ ಒತ್ತಡವೂ ಸಹ ಅವರಿಂದ ಬಂದಿದೆ ಎಂದರು..
ಈ ಸಂದರ್ಭದಲ್ಲಿ ಧಾರವಾಡದ ಇಂಜಿನೀಯರ್ ವಾಸುದೇವನ್, ಸಂಶೋಧಕ ಪಂಚಾಕ್ಷರಯ್ಯ, ತಹಸೀಲ್ದಾರ ಕೆ.ಗುರುಬಸವರಾಜ , ಗ್ರಾ.ಪಂ.ಉಪಾಧ್ಯಕ್ಷ ಪರಮೇಶಗೌಡ ತೆವರಿ, ಎಪಿಎಂಸಿ ಮಾಜಿ ಅಧ್ಯಕ್ಷ ಚನ್ನಬಸಪ್ಪ ಹುಲ್ಲತ್ತಿ, ರುದ್ರಪ್ಪ ಗಡಿಗೋಳ, ಕೆಂಚಪ್ಪ ಹಲಗಣ್ಣನವರ, ರೈತ ಮುಖಂಡ ಕಿರಣ ಗಡಿಗೋಳ, ಅಜ್ಜನಗೌಡ ದೊಡ್ಡಗೌಡ್ರ, ಶಿವಯೋಗೆಪ್ಪ ಕೋಡಿಗದ್ದಿ, ಮಹದೇವಪ್ಪ ವಡೆಯನಪುರ, ಚನ್ನಬಸಪ್ಪ ದ್ಯಾವನಗೌಡ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ