ಚಿತ್ರದುರ್ಗ:
ಸ್ವ-ಸಹಾಯ ಸಂಘದಲ್ಲಿ ಮಹಿಳೆಯರು ತಯಾರಿಸುವ ವಸ್ತುಗಳಿಗೆ ಚಿತ್ರದುರ್ಗದಲ್ಲಿ ಮಾರುಕಟ್ಟೆ ಸ್ಥಾಪಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ನಿರ್ದೇಶಕ ಗಣೇಶ್ ತಿಳಿಸಿದರು.
ಕೋಟೆ ರಸ್ತೆಯಲ್ಲಿರುವ ಚಿಕ್ಕಪೇಟೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಿರಿ ಹಬ್ಬ ಸಿರಿ ಸಿದ್ದ ಉಡುಪು ಮಾರಾಟ ಮಳಿಗೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಸ್ವಾವಲಂಭಿಗಳನ್ನಾಗಿಸುವುದು ನಮ್ಮ ಯೋಜನೆಯ ಮುಖ್ಯ ಉದ್ದೇಶ. ಸಿರಿ ಸಿದ್ದ ಉಡುಪು ಮಾರಾಟ ಮಳಿಗೆ ಹಾಗೂ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಆರಂಭಗೊಂಡಿರುವುದನ್ನು ಬೇರೆಯವರಿಗೆ ತಿಳಿಸಿ ಮಹಿಳೆಯರೆ ತಯಾರಿಸುವ ವಸ್ತುಗಳು ಮಾರಾಟವಾಗಬೇಕಾದರೆ ಮಾರುಕಟ್ಟೆ ಅನುಕೂಲವಿರಬೇಕು. ದಿನಬಳಕೆ ಅಡುಗೆ ಮನೆಗೆ ಬೇಕಾಗುವ ಅಗತ್ಯ ವಸ್ತುಗಳು ಇಲ್ಲಿ ದೊರಕುತ್ತದೆ. ಅತ್ಯುತ್ತಮ ಗುಣಮಟ್ಟದ ಸಿರಿಶೈನ್ ಹಾಗೂ ಶ್ರಮಿಕ್ ಶರ್ಟ್ಗಳು ನೈಟಿ, ಚುಡಿದಾರ್, ಸ್ಯಾರಿ, ಸ್ಕರ್ಟ್, ಉಪ್ಪಿನಕಾಯಿ, ಸೋಪ್, ಅಗರ್ಬತ್ತಿ, ಫಿನಾಯಿಲ್, ಲಿಕ್ವಿಡ್ಸೋಪ್, ಬ್ಲೀಚಿಂಗ್ ಪೌಡರ್ ದೊರೆಯುತ್ತದೆ, ಒಬ್ಬರಿಂದ ಒಬ್ಬರಿಗೆ ಪಸರಿಸುವ ಕೆಲಸವನ್ನು ಸ್ವಸಹಾಯ ಸಂಘದ ಮಹಿಳೆಯರು ಮಾಡುವ ಮೂಲಕ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಿ ಎಂದು ಹೇಳಿದರು.
ಕೆನರಾ ಬ್ಯಾಂಕ್ನ ಹಿರಿಯ ವ್ಯವಸ್ಥಾಪಕ ನಾಗಪ್ಪ ಮಾತನಾಡುತ್ತ ಮಹಿಳೆಯರು ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸುತ್ತಾರೆಂಬ ನಂಬಿಕೆಯಿಂದ ಅತಿ ಕಡಿಮೆ ಬಡ್ಡಿ ದರದಲ್ಲಿ ನಮ್ಮ ಬ್ಯಾಂಕಿನಿಂದ ಸಾಲ ನೀಡುತ್ತಿದ್ದೇವೆ. ನಮಗಿಂತಲೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಧಿಕಾರಿಗಳ ಶ್ರಮ ಜಾಸ್ತಿಯಿದೆ. ಇವೆಲ್ಲವನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಭಿಗಳಾಗಿ ಎಂದು ಮಹಿಳೆಯರಿಗೆ ಕರೆ ನೀಡಿದರು.
ತಾಲೂಕು ಯೋಜನಾಧಿಕಾರಿ ಉಮೇಶ್, ನಗರಸಭೆ ಸದಸ್ಯ ಹರೀಶ್, ವೀಣಗೌರಣ್ಣ, ಜೈರಾಂ ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ