ಬಾಲ್ಯವಿವಾಹ ಪ್ರಕರಣದಲ್ಲಿ ಶಿಕ್ಷೆಯಾಗಲು ಸಾಕ್ಷಿ ಅಗತ್ಯ: ನ್ಯಾ. ರಾಜೇಂದ್ರ ಬಾದಾಮಿಕರ್

ತುಮಕೂರು 

      ಮಕ್ಕಳ ಹಕ್ಕುಗಳ ಬಗ್ಗೆ ಸಂವಿಧಾನದಲ್ಲಿ ಹಲವಾರು ಕಾನೂನುಗಳನ್ನು ರೂಪಿಸಿದ್ದರೂ, ಮಕ್ಕಳ ಮೇಲೆ ದೌರ್ಜನ್ಯ, ಬಾಲ್ಯವಿವಾಹಗಳು ನಿರಂತರವಾಗಿ ನಡೆಯುತ್ತಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ. ರಾಜೇಂದ್ರ ಬಾದಾಮಿಕರ್ ಅವರು ಆತಂಕ ವ್ಯಕ್ತಪಡಿಸಿದರು.

        ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು ಹಾಗೂ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

        ಮಕ್ಕಳಿಗೆ ಸಂವಿಧಾನದಲ್ಲಿ ಹಲವು ಹಕ್ಕುಗಳನ್ನು ನೀಡಲಾಗಿದೆ. ಮಕ್ಕಳಿಗೆ ರಕ್ಷಣೆ ನೀಡುತ್ತಿದ್ದರೂ ಸಹ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿವೆ. ಮೌಡ್ಯದಿಂದ ಬಾಲ್ಯವಿವಾಹದ ಮೂಲಕ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವ ಪ್ರಯತ್ನಗಳು ಜರುಗುತ್ತಿವೆ. ಇನ್ನೂ ದೇಹವು ಪರಿಪೂರ್ಣವಾಗಿ ಹೊಂದಿಕೊಳ್ಳದ ಸಮಯದಲ್ಲಿ ಬಾಲ್ಯ ವಿವಾಹಗಳು ನಡೆದರೆ ಆ ದಂಪತಿಗಳ ಸ್ಥಿತಿ ಯಾವ ರೀತಿ ಇರುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಅವರು ತಿಳಿಸಿದರು.

        ಬಾಲ್ಯ ವಿವಾಹದ ಬಗ್ಗೆ ಪ್ರಕರಣ ದಾಖಲಿಸಿದರೆ, ಅದು ಅಲ್ಲಿಗೆ ಮುಕ್ತಾಯವಾಗುವುದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಸರ್ಕಾರಿ ಅಭಿಯೋಜಕರು ಸಾಕ್ಷಿಗಳನ್ನು ಕ್ರೂಢೀಕರಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸಾಕ್ಷ್ಯಗಳು ಇಲ್ಲದಿದ್ದರೆ ಆದೇಶ ಹೊರಡಿಸಲು ಕಷ್ಟವಾಗುತ್ತದೆ ಎಂದು ಅವರು ಹೇಳಿದರು.

        ಬಾಲ್ಯ ವಿವಾಹ ನಿಷೇಧ ಕುರಿತು ವಿಸ್ತತವಾಗಿ ಚರ್ಚಿಸಲು ಈ ಕಾರ್ಯಾಗಾರ ಸದಾವಕಾಶ ಕಲ್ಪಿಸಿದೆ. ಈ ಕಾರ್ಯಾಗಾರ ಸದುಪಯೋಗವನ್ನು ನ್ಯಾಯಾಧೀಶರು ಹಾಗೂ ಅಭಿಯೋಜಕರು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

         ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಕಳೆದ 6 ತಿಂಗಳಲ್ಲಿ ತುಮಕೂರು ಜಿಲ್ಲೆಯಲ್ಲಿ 34 ಬಾಲ್ಯ ವಿವಾಹಗಳನ್ನು ತಡೆಯಲಾಗಿದ್ದು, ಈ ಪೈಕಿ 2 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಾಗಿದೆ. ತುಮಕೂರು ಜಿಲ್ಲೆಯು ಬೆಂಗಳೂರು ನಗರಕ್ಕೆ ಸಮೀಪದಲ್ಲಿದ್ದರೂ ಬಾಲ್ಯ ವಿವಾಹ ಪ್ರಕರಣಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ನ್ಯಾಯಾಲಯಗಳು, ಜಿಲ್ಲಾ ಪಂಚಾಯತಿ ಹಾಗೂ ಮಾಧ್ಯಮಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಬಾಲ್ಯವಿವಾಹವನ್ನು ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

         ಬಾಲ್ಯವಿವಾಹ ಪ್ರಕರಣಗಳು ದಕ್ಷಿಣ ಕರ್ನಾಟಕದ ಜಿಲ್ಲೆಗಳಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ. ತುಮಕೂರು ಜಿಲ್ಲೆಯಲ್ಲಿ ಕೆಲವೊಂದು ನಿರ್ಧಿಷ್ಠ ಸಮುದಾಯಗಳಲ್ಲಿ ಮಾತ್ರ ಬಾಲ್ಯ ವಿವಾಹಗಳು ಜರುಗುತ್ತಿವೆ. ಈಗಾಗಲೇ ಆ ಸಮುದಾಯಗಳ ಮುಖಂಡರು, ಜನಪ್ರತಿನಿಧಿಗಳಿಗೆ, ಮಾಧ್ಯಮ ಪ್ರತಿನಿಧಿಗಳ ಜತೆಯಲ್ಲಿ ಅರಿವು ಮೂಡಿಸಲಾಗಿದೆ ಎಂದು ಅವರು ಹೇಳಿದರು.

         ಬಾಲ್ಯ ವಿವಾಹ ತಡೆಗಟ್ಟಲು ಜನರಿಗೆ ಸಾಕಷ್ಟು ಅರಿವು ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ 5 ಏಜೆನ್ಸಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಅವರು ತಿಳಿಸಿದರು.

          ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ತುಮಕೂರು ನಗರ ಡಿವೈಎಸ್‍ಪಿ ನಾಗರಾಜ ಅವರು, ಆರ್ಥಿಕ ಸಮಸ್ಯೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವಿಕೆ, ಕುಲ ಪದ್ಧತಿ, ಅನಕ್ಷರತೆಯಿಂದಾಗಿ ಬಾಲ್ಯವಿವಾಹ ಪ್ರಕರಣಗಳು ನಡೆಯುತ್ತಿವೆ. ಇಂತಹ ಪ್ರಕರಣಗಳಿಂದ ಮಕ್ಕಳ ಬಾಲ್ಯ ಕಸಿದುಕೊಂಡಂತಾಗಿದೆ. ಸಾಮಾಜಿಕ ಜಾಲತಾಣ ಹಾಗೂ ಇಂಟರ್‍ನೆಟ್‍ನಿಂದಾಗಿ ಮಕ್ಕಳು ಸಣ್ಣಪುಟ್ಟ ಅನಾಹುತ ಮಾಡಿಕೊಳ್ಳುವ ಪ್ರಕರಣಗಳು ಜರುಗುತ್ತಿವೆ ಎಂದರು.

          ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್.ನಟರಾಜ್ ಅವರು, ಬಾಲ್ಯವಿವಾಹ ಸಾಮಾಜಿಕ ಪಿಡುಗು ಆಗಿದ್ದು, ಬಾಲ್ಯವಿವಾಹಗಳು ನಿರಂತರವಾಗಿ ಕಡಿಮೆಯಾಗುತ್ತಾ ಬಂದಿವೆ. ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ತಡೆಗಟ್ಟಲು ಪೊಲೀಸರು, ನ್ಯಾಯಾಂಗ ಇಲಾಖೆಗಳು ಅವಿರತ ಪ್ರಯತ್ನ ಮಾಡುತ್ತಿವೆ ಎಂದು ಅವರು ಹೇಳಿದರು.

          ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ವಾಸದೇವಶರ್ಮಾ ಅವರು, ಬಾಲ್ಯವಿವಾಹ ತಡೆಗಟ್ಟುವುದು ಸವಾಲಿನ ಕೆಲಸವಾಗಿದ್ದು, ಈ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬಾಲ್ಯವಿವಾಹ ತಡೆಗೆ ಜನಪ್ರತಿನಿಧಿಗಳೇ ಅಡ್ಡಿಯಾಗಿರುತ್ತಾರೆ. ಎಷ್ಟೋ ಪ್ರಕರಣಗಳು ಪೊಲೀಸ್ ಠಾಣೆಗೆ ಬರಲು ಬಿಡುವುದಿಲ್ಲ ಎಂದು ಅವರು ತಿಳಿಸಿದರು.

         ಕಾರ್ಯಾಗಾರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಾಬಾ ಸಾಹೇಬ್ ಜಿನರಾಳ್ಕರ್, ಪ್ರಭಾರ ಜಿಲ್ಲಾ ಸರ್ಕಾರಿ ಅಭಿಯೋಜಕರಾದ ಕೆ.ಹೆಚ್. ಶ್ರೀಮತಿ, ನ್ಯಾಯಾಧೀಶರುಗಳು, ಸರ್ಕಾರಿ ಅಭಿಯೋಜಕರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link