ಮಧುಗಿರಿ :
ದೇಶ ಹಾಗೂ ರಾಜ್ಯದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಕಾರ್ಯಕರ್ತರ ಪ್ರಾಮಾಣಿಕ ಪ್ರಯತ್ನದಿಂದಾಗಿ ಎಲ್ಲೇ ಚುನಾವಣೆಗಳು ನಡೆದರೂ ಅದು ಬಿಜೆಪಿಯ ಗೆಲುವು ಹಾಗೂ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಸೋಲು ಎಂಬಂತಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಯಾದವ ಸಮುದಾಯ ಭವನದಲ್ಲಿ ನಡೆದ ಗ್ರಾಮ ಸ್ವರಾಜ್ಯ ಹಾಗೂ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರ ನೀಡುವ ಏಕೈಕ ಪಕ್ಷ ಬಿಜೆಪಿಯಾಗಿದೆ. ನಮ್ಮಲ್ಲಿ ಕುಟುಂಬ ರಾಜಕಾರಣವಿಲ್ಲ. ಎಲ್ಲೇ ಚುನಾವಣೆ ನಡೆದರೂ ಕಾರ್ಯಕರ್ತರ ಗೆಲುವಿಗಾಗಿ ಅವರಿಗೆ ಉತ್ತಮ ಸ್ಥಾನಮಾನ ನೀಡುವುದೇ ಪಕ್ಷದ ಗುರಿಯಾಗಿದೆ. ಅದಕ್ಕೆ ಜಿಲ್ಲೆಯ ಸಂಸದ ಸ್ಥಾನ ಹಾಗೂ ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಗೆಲುವೇ ಸಾಕ್ಷಿಯಾಗಿದೆ. ಈಗ ಕಾರ್ಯಕರ್ತರಿಗೂ ನಿಗಮದಲ್ಲಿ ಸ್ಥಾನ ದೊರಕಿದ್ದು, ವಿಧಾನ ಪರಿಷತ್ತಿಗೂ ಬಿಜೆಪಿಯ ಕಾರ್ಯಕರ್ತರೆ ಆಯ್ಕೆಯಾಗಿದ್ದಾರೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಂತೆ ಗ್ರಾ.ಪಂ.ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಕಾರ್ಯಕರ್ತರನ್ನು ಗೆಲ್ಲಿಸಲು ಬಿಜಾಪುರದಲ್ಲಿ ಇತರೆ ಕಾರ್ಯಕರ್ತರು ದುಡಿಯಲು ಮುಂದಾಗಿರುವುದು ಬಿಜೆಪಿಯ ಸಂಘಟನೆಯ ಶಕ್ತಿ ಸೂಚಿಸುತ್ತದೆ ಎಂದರು.
ಸಂಘಟನೆಯಲ್ಲಿರುವ ಕೂಲಿ ಕಾರ್ಮಿಕರು ಕೂಡ ದೇಶಭಕ್ತಿಯನ್ನು ಹೊಂದಿದ್ದು, ಬಿಜೆಪಿಯ ಗೆಲುವಿಗೆ ಪರಿಶ್ರಮ ಹಾಕಿದ ಕಾರಣ ಇಂದು ಬಿಜೆಪಿ 25 ಸಂಸದರನ್ನು ಹೊಂದಿದ್ದು, ರಾಜ್ಯದಲ್ಲೂ ಅಧಿಕಾರ ಪಡೆದಿದೆ. ಪ್ರಸ್ತುತ ಮೋದಿಯ ಹೆಸರು ದೇಶದಲ್ಲಿ ಕೇಳಲು ಕಾರ್ಯಕರ್ತರ ಶ್ರಮ ಕಾರಣವಾಗಿದೆ. ಈಗ ಜಿ.ಪಂ., ತಾ.ಪಂ. ಚುನಾವಣೆ ಮುಂದಿದೆ. ಪ್ರಸ್ತುತ ಗ್ರಾ.ಪಂ. ಚುನಾವಣೆ ಬಂದಿದೆ. ಇವುಗಳಲ್ಲಿ ಬಿಜೆಪಿಯ ಶಕ್ತಿಯನ್ನು ಯುವಕರು ಹಾಗೂ ಕಾರ್ಯಕರ್ತರು ಹೆಚ್ಚಿಸಬೇಕು.
ಗ್ರಾ.ಪಂ. ಚುನಾವಣೆಯು ಕಾರ್ಯಕರ್ತರ ಚುನಾವಣೆಯಾಗಿದ್ದು, ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಆದರೆ ನಮ್ಮಲ್ಲೇ ವಿರೋಧ ಮಾಡಿಕೊಂಡು ಇತರರು ಗೆಲುವು ಸಾಧಿಸಲು ಅವಕಾಶ ನೀಡದಂತೆ ಎಚ್ಚರ ವಹಿಸಿ ರಾಜ್ಯದ 5808 ಗ್ರಾ.ಪಂ.ಗಳಲ್ಲಿ ಶೇ.80 ರಷ್ಟು ಬಿಜೆಪಿ ಅಧಿಕಾರ ಹಿಡಿಯಲು, ಕಾರ್ಯಕರ್ತರೆ ಜನಪ್ರತಿನಿಧಿಯಾಗಲು ಶ್ರಮವಹಿಸಿ ಎಂದರು.
ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಪ್ರಸ್ತುತ ಗ್ರಾಮ ಸ್ವರಾಜ್ಯ ಕಲ್ಪನೆ ಬಿಜೆಪಿಯದ್ದು. ಇದರಿಂದಾಗಿ ಗ್ರಾ.ಪಂ. ವ್ಯವಸ್ಥೆಯು ಬಲಿಷ್ಠಗೊಳ್ಳಲಿದ್ದು, ಜನಸಾಮಾನ್ಯರಿಗೆ ಅಧಿಕಾರ ಹಾಗೂ ಸರ್ಕಾರಿ ಸೌಲಭ್ಯವು ಸರಳವಾಗಿ ಕೈಗೆಟುಕಲಿದೆ. ಈಗಿನ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದರೆ ಶಾಸಕ, ಸಂಸದರಂತೆಯೇ ಜನಸಾಮಾನ್ಯರ ಸೇವೆಯನ್ನು ಮಾಡಬಹುದಾಗಿದೆ. ಅಂತಹ ಅವಕಾಶ ಈ ಕ್ಷೇತ್ರದಲ್ಲಿ ಲಭ್ಯವಿದೆ. ಹಲವಾರು ಯೋಜನೆಯಲ್ಲಿ ಅನುದಾನ ಬರಲಿದ್ದು, ಜನಸೇವೆಗೆ ಮುಕ್ತ ಅವಕಾಶವಿದೆ. ಇದು ಬಿಜೆಪಿಯ ಸಾಧನೆ. ಬಿಜೆಪಿಯಿಲ್ಲದ ಕಡೆ ಇಂದು ಕಮಲ ಅರಳುತ್ತಿದೆ. ಚುನಾವಣೆಯನ್ನು ಬೆಟ್ಟ ಎಂದು ಎದೆಗುಂದದೆ ಹತ್ತಲು ಪ್ರಯತ್ನಿಸಿ. ಆಗ ಬೆಟ್ಟವೇ ನಿಮ್ಮ ಕಾಲ ಕೆಳಗಿರುತ್ತದೆ. ಅದಕ್ಕಾಗಿ ಸಂಘಟನೆಯು ನಿಮ್ಮ ಜೊತೆಗಿರಲಿದ್ದು, ಸಾಮಾನ್ಯ ಕಾರ್ಯಕರ್ತರ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಇದಕ್ಕೆ ಶಿರಾ ಉಪಚುನಾವಣೆ ಹಾಗೂ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವೇ ಸಾಕ್ಷಿಯಾಗಿದೆ.
ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಿಕೊಂಡು ರಾಜಕೀಯದ ಭದ್ರ ಬುನಾದಿಯ ಈ ಗ್ರಾ.ಪಂ. ಚುನಾವಣೆಯಲ್ಲಿ ಸಮರ್ಥವಾಗಿ ತೊಡಗಿಸಿಕೊಂಡು ಹೆಚ್ಚಿನ ಗೆಲುವನ್ನು ಬಿಜೆಪಿಗೆ ಸಿಗುವಂತೆ ಕೆಲಸ ಮಾಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲೆ ಬಿಜೆಪಿ ಅಧ್ಯಕ್ಷ ಸುರೇಶ್‍ಗೌಡ, ಎಂಎಲ್‍ಸಿ ಚಿದಾನಂದಗೌಡ, ಮಾಜಿ ಎಂಎಲ್‍ಸಿ ಹುಲಿನಾಯ್ಕರ್, ಶಿರಾ ಶಾಸಕ ರಾಜೇಶ್‍ಗೌಡ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಎಂ.ಬಿ.ನಂದೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾಜೇಗೌಡ, ನಿಗಮ ಮಂಡಳಿ ಅಧ್ಯಕ್ಷರಾದ ಎಸ್.ಆರ್.ಗೌಡ, ಬಿ.ಕೆ.ಮಂಜುನಾಥ್, ತಾಲ್ಲೂಕು ಮಂಡಲ ಅಧ್ಯಕ್ಷ ಪಿ.ಎಲ್.ನರಸಿಂಹಮೂರ್ತಿ, ಉಪಾಧ್ಯಕ್ಷ ರಾಮಚಂದ್ರಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಹುಚ್ಚಯ್ಯ, ಮಾಜಿ ಪುರಸಭಾ ಸದಸ್ಯ ಆದಿಶೇಷ, ಜಿಪಂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಯುವಮೋರ್ಚಾ ಅಧ್ಯಕ್ಷ ಕಾರ್ತಿಕ್ ಆರಾಧ್ಯ, ಪ್ರಧಾನ ಕಾರ್ಯದರ್ಶಿ ಸೀತಾರಾಂ, ನಾಗೇಂದ್ರ, ನಾಗರಾಜು, ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
