ಬೆಂಗಳೂರು:
ತಮ್ಮ ವಿರುದ್ಧ ನಟಿ ಶೃತಿ ಹರಿಹರನ್ ನೀಡಿರುವ ದೂರು ದುರುದ್ದೇಶದಿಂದ ಕೂಡಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಬಹುಭಾಷಾ ನಟ ಅರ್ಜುನ್ ಸರ್ಜಾ ಸ್ಪಷ್ಟಪಡಿಸಿದ್ದಾರೆ.
ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟಕರಣ ನೀಡಿದ ಅವರು, ಶೃತಿ ಹರಿಹರನ್ ಅವರ ಎಲ್ಲಾ ಆರೋಪಗಳು ನಿರಾಧಾರ, ವಿಸ್ಮಯ ಸಿನೆಮಾದ ಚಿತ್ರೀಕರಣ ನಡೆದು ಎರಡು ವರ್ಷಗಳ ನಂತರ ಆರೋಪ ಮಾಡಿರುವುದರ ಹಿಂದೆ ದುರುದ್ದೇಶವಿದೆ. ಅಲ್ಲದೇ ಪ್ರಚಾರದ ಕಾರಣಕ್ಕೆ ಶೃತಿ ಇಲ್ಲಸಲ್ಲದ ಆರೋಪಮಾಡಿ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.
ಶೃತಿ ಹರಿಹರನ್ ನೀಡಿದ ದೂರಿನ ಪ್ರತಿಯನ್ನಿಟ್ಟುಕೊಂಡು ಮಹಜರು ಮಾಡಿದ ಯುಬಿಸಿಟಿ ಇನ್ನಿತರ ಅಂಶಗಳನ್ನಿಟ್ಟುಕೊಂಡು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಹೇಳಿಕೆ ದಾಖಲಿಸಿದ ಸರ್ಜಾ ಅವರು ಶೃತಿ ನೀಡಿರುವ ದೂರಿನ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದೇನೆ ನನಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದರು.
ನಟಿ ಶೃತಿ ಹರಿಹರನ್ ನೀಡಿದ್ದ ದೂರು ಮೇಕಪ್ ಮನ್ ಕಿರಣ್ ಮತು ಸಹ ನಿರ್ಮಾಪಕಿ ಮೋನಿಕಾ ಹೇಳಿಕೆ ಆಧರಿಸಿ ಅರ್ಜುನ್ ಸರ್ಜಾ ಅವರಿಗೆ ಸುಮಾರು 50 ಪ್ರಶ್ನೆಗಳನ್ನು ಸಿದ್ದಪಡಿಸಿಕೊಂಡಿದ್ದ ಕಬ್ಬನ್ ಪಾರ್ಕ್ ಪೊಲೀಸ್ ಇನ್ಸ್‍ಪೆಕ್ಟರ್ ಹಾಗೂ ತನಿಖಾಧಿಕಾರಿ ಅಯ್ಯಣ್ಣ ರೆಡ್ಡಿ ಅವರು ಒಂದೊಂದಾಗಿ ಕೇಳಿ ಹೇಳಿಕೆ ದಾಖಲಿಸಿಕೊಂಡರು.ಲೈಂಗಿಕ ಕಿರುಕುಳ ದೂರಿನ ಬಗ್ಗೆ ಈಗಾಗಲೇ ನಾನು ಸ್ಪಷ್ಟಪಡಿಸಿದ್ದೇನೆ. ಇದು ಉದ್ದೇಶ ಪೂರ್ವಕವಾದ ಕೃತ್ಯ ನಾನು ಶೃತಿ ಹರಿಹರನ್ ಅವರ ಜೊತೆ ಅಸಭ್ಯವಾಗಿ ನಡೆದುಕೊಂಡಿಲ್ಲ.ನನ್ನ ಮೇಲೆ ಸುಮ್ಮನೆ ಆರೋಪ ಮಾಡಲಾಗಿದೆ ಎಂದು ಅರ್ಜನ್ ಸರ್ಜಾ ಹೇಳಿದರು.
ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದ ಚಿತ್ರೀಕರಣದ ವೇಳೆ ನೀವು ಅಸಭ್ಯವಾಗಿ ವರ್ತಿಸಿರುವುದು ನಿಜವೇ ಶೃತಿ ಹರಿಹರನ್ ದೇಹದ ಹಿಂಭಾಗ, ಎದೆ, ತೊಡೆಯನ್ನು ಸ್ಪರ್ಶಿಸ್ನಿ ಗಟ್ಟಿಯಾಗಿ ತಬ್ಬಿಕೊಂಡ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ನಾನು ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿಲ್ಲ. ಆಕೆಯನ್ನು ನಾನು ತಬ್ಬಿಕೊಂಡಿಲ್ಲ. ದೇಹದ ಹಿಂಭಾಗ, ಎದೆ, ತೊಡೆಯನ್ನು ಸ್ಪರ್ಶಿಸಿಲ್ಲ. ಸಹ ನಿರ್ದೇಶಕ ಭರತ್ ನೀಲಕಂಠ, ಸಹ ನಿರ್ದೇಶಕಿ ಮೋನಿಕಾ ಕೂಡಾ ಈ ಸಂಬಂಧ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಹೇಳಿಕೆ ನೀಡಿದರು.
ಮುಖಾಮುಖಿ ನಿಜ: ದೇವನಹಳ್ಳಿ ಆಸ್ಪತ್ರೆಯಲ್ಲಿ ಶೂಟಿಂಗ್ ನಡೆಯುವ ವೇಳೆ ಕೆಟ್ಟದಾಗಿ ನಡೆದುಕೊಂಡಿರುವುದು ರೆಸಾರ್ಟ್‍ಗೆ ಬಾ, ನಾವಿಬ್ಬರು ಕಾಲ ಕಳೆಯೋಣ ಎಂದು ಶೃತಿ ಹರಿಹರನ್‍ಗೆ ಕರೆದಿರುವುದು ನಿಜವೇ ಎಂದು ಕೇಳಿದಾಗ ನಾನು ಶೃತಿ ಹರಿಹರನ್ ಜೊತೆ ಕೆಟ್ಟದಾಗಿ ನಡೆದುಕೊಂಡಿಲ್ಲ, ರೆಸಾರ್ಟ್ ಬಾ ಎಂದು ಕರೆದಿಲ್ಲ. ಚಿತ್ರೀಕರಣದಲ್ಲಿದ್ದವರು ಈಗಾಗಲೇ ಹೇಳಿಕೆಯನ್ನು ಕೊಟ್ಟಿದ್ದಾರೆ. ಶೃತಿ ಹರಿಹರನ್ ಹೇಳಿಕೆ ದುರುದ್ದೇಶದಿಂದ ಕೂಡಿದ್ದಾಗಿದೆ ಎಂದರು.
ದೇವನಹಳ್ಳಿ ಟ್ರಾಫಿಕ್ ಸಿಗ್ನಲ್ ಬಳಿ ನೀವು ಶೃತಿ ಹರಿಹರನ್ ಮುಖಾಮುಖಿಯಾಗಿದ್ದು ನಿಜವೇ ಇನ್ನೊಂದು ಕಾರಿನಲ್ಲಿ ಬಂದ ನೀವು ಶೃತಿ ಹರಿಹರನ್‍ರನ್ನು ರೆಸಾರ್ಟ್ ಗೆ ಕರೆದಿದ್ದೀರಾ ಶೃತಿ ಬರಲು ನಿರಾಕರಿಸಿದ್ದಕ್ಕೆ ಬೆದರಿಕೆ ಹಾಕಿದ್ದೀರಾ ಬರದೇ ಇದ್ದರೆ ನಿನ್ನ ಸಿನಿಮಾ ಕೆರಿಯರ್ ಭವಿಷ್ಯ ಮುಗಿಸುತ್ತೇನೆ ಹಿದರಿಸಿರುವ ಶೃತಿ ಹರಿಹರನ್ ಆರೋಪದ ಬಗ್ಗೆ ಹೇಳಿಕೆ ನೀಡಿದ ಅವರು ದೇವನಹಳ್ಳಿ ಟ್ರಾಫಿಕ್ ಸಿಗ್ನಲ್ ಬಳಿ ನಾನು-ಶೃತಿ ಹರಿಹರನ್ ಮುಖಾಮುಖಿಯಾಗಿಲ್ಲ. ನಾನು ಆಕೆಗೆ ಯಾವುದೇ ಬೆದರಿಕೆಯನ್ನೂ ಹಾಕಿಲ್ಲ. ಆಕೆಯನ್ನು ರೆಸಾರ್ಟ್ ಆಗಲಿ ಅಥವಾ ಬೇರೆ ಎಲ್ಲಿಗೂ ಕರೆದಿಲ್ಲ. ಶೃತಿ ಹರಿಹರನ್ ಆರೋಪ ಸುಳ್ಳು, ದುರುದ್ದೇಶದಿಂದಲೇ ಶೃತಿ ಆರೋಪ ಮಾಡಿದ್ದಾರೆ.
ಕೆಟ್ಟದಾಗಿ ವರ್ತಿಸಿಲ್ಲ: ಯುಬಿ ಸಿಟಿಯ ಲಾಂಜ್ ನಲ್ಲಿ ಏಕಾಂಗಿಯಾಗಿ ಕುಳಿತಿದ್ದ ನನ್ನನ್ನು ಹಿಂದಿನಿಂದ ಬಂದು ಗಟ್ಟಿಯಾಗಿ ತಬ್ಬಿಕೊಂಡು ರೂಂನಲ್ಲಿ ನಾನೊಬ್ಬನೇ ಇದ್ದೇನೆ ಕಾಲ ಕಳೆಯೋಣ ಬಾ ಅಂದಿದ್ದರು ದೇಹದ ಮೇಲೆ ಕೈ ಹಾಕಿದ್ದರು ನಾನು ಬರಲ್ಲ ಅಂದಿದ್ದಕ್ಕೆ ನೀನೇ ನನ್ನ ರೂಂಗೆ ಬರುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಅರ್ಜುನ್ ಸರ್ಜಾ ಯುಬಿ ಸಿಟಿಯಲ್ಲಿ ಲಾಂಜ್ ನಲ್ಲಿ ಕುಳಿತಿದ್ದ ಶೃತಿ ಜೊತೆ ನಾನು ಕೆಟ್ಟದಾಗಿ ನಡೆದುಕೊಂಡಿಲ್ಲ. ನಾನು ಆಕೆಯೊಂದಿಗೆ ಮಾತನಾಡಿದ್ದು ಸತ್ಯ. ಆದರೆ ರೂಂಗೆ ಬಾ, ಕಾಲ ಕಳೆಯೋಣ ಎಂದು ಕರೆದಿಲ್ಲ ಎಂದು ಹೇಳಿಕೆ ನೀಡಿದರು.
ಶೃತಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಠಾಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಬೆಳಿಗ್ಗೆ ನಟರಾದ ಧೃವಸರ್ಜಾ ಮತ್ತು ಚಿರಂಜೀವಿ ಸರ್ಜಾ ಅವರೊಂದಿಗೆ ಅರ್ಜುನ್ ಸರ್ಜಾ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಅರ್ಜುನ್ ಸರ್ಜಾ ವಿಚಾರಣೆಗೆ ಆಗಮಿಸುವ ವಿಷಯ ತಿಳಿದು ಸಾವಿರಾರು ಮಂದಿ ಅಭಿಮಾನಿಗಳ ಠಾಣೆಯ ಬಳಿ ಜಮಾಯಿಸಿದ್ದು ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ನಟ ಅರ್ಜುನ್ ಸರ್ಜಾ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಇಂದು ವಿಚಾರಣೆಗೆ ಹಾಜರಾಗಿದ್ದ ವೇಳೆ ಬಿಜೆಪಿ ಮುಖಂಡರಾದ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಕಾಣಿಸಿಕೊಂಡರು.
ಎಡಪಂಥಿಯರು ಅರ್ಜುನ್ ಸರ್ಜಾ ಮೂಲಕ ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಸಿಕೊಂಡಿದ್ದಾರೆ ಅರ್ಜುನಾ ಸರ್ಜಾ ತಂದೆ ಮೂಲತಃ ಆರೆಸ್‍ಎಸ್ ನವರಾಗಿದ್ದಾರೆ. ಅರ್ಜುನ್ ಸರ್ಜಾ ಕೂಡ ಆಂಜನೇಯನ ಪರಮ ಭಕ್ತರಾಗಿದ್ದಾರೆ. ಚೆನ್ನೈನಲ್ಲಿ ಆಂಜನೇಯನ ಬೃಹತ್ ಪ್ರತಿಮೆ ಪ್ರತಿಷ್ಠಾಪಿಸುತ್ತಿದ್ದಾರೆ. ತಮಿಳುನಾಡಿನ ಹಲವೆಡೆ ಗೋಶಾಲೆ ದತ್ತು ಪಡೆದಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಮಕ್ಕಳು ಗೋವನ್ನು ಉಡುಗೊರೆಯಾಗಿ ಕೊಟ್ಟಿದ್ದರು.
ಪೊಲೀಸರೇ ನೀವು ಗಮನಿಸಬಹುದು, ಶೃತಿ ಬೆಂಬಲಕ್ಕೆ ನಿಂತಿರುವವರೆಲ್ಲ ಎಡಪಂಥಿಯರು ಆಗಿದ್ದಾರೆ. ಪ್ರಕಾಶ್ ರೈ, ಚೇತನ್, ಕವಿತಾ ಲಂಕೇಶ್ ಎಲ್ಲರೂ ಮೋದಿ ವಿರೋಧಿಗಳೇ ಆಗಿದ್ದಾರೆ. ಇವರೆಲ್ಲಾ ಸೇರಿಕೊಂಡು ಅರ್ಜುನ್ ಸರ್ಜಾ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದು ತೇಜಸ್ವಿನಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.