ತುರುವೇಕೆರೆ
ಸ್ವ-ಉದ್ಯೋಗದಡಿ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಇನ್ನಿತರ ಕಾರ್ಯಕ್ರಮಗಳು ಮಹಿಳೆಯರಿಗೆ ಅನುಕೂಲವಾಗಿರುವುದರಿಂದ ಹಲವಾರು ಮಹಿಳೆಯರು ಇಂತಹ ಕಾರ್ಯಕ್ರಮಗಳಿಂದ ಪ್ರೇರಿತರಾಗಿ ಸ್ವ-ಉದ್ಯೋಗ ಕೈಗೊಂಡು ಆರ್ಥಿಕ ಸ್ವಾವಲಂಬನೆಯೊಂದಿಗೆ ಕುಟುಂಬದ ಪ್ರಗತಿಗೂ ಕಾರಣೀಭೂತರಾಗಿದ್ದಾರೆ ಎಂದು ತಾಲ್ಲೂಕು ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೇಮಾವತಿ ಜ್ಞಾನವಿಕಾಸ ಕೇಂದ್ರದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಗೊಟ್ಟಿಕೆರೆ ಗ್ರಾಮದ ಸಮುದಾಯಭವನ ಆವರಣದಲ್ಲಿ ನಡೆದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಅಮ್ಮನವರ ಕನಸಿನ ಕೂಸಾದ ಜ್ಞಾನವಿಕಾಸ ಕಾರ್ಯಕ್ರಮವೂ ಮಹಿಳೆಯರ ಸಂಪೂರ್ಣ ಪ್ರಗತಿಗೆ ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟಿದೆ ಎಂದು ತಿಳಿಸಿದರು.
ಆಯುರ್ವೇದಿಕ ವೈದ್ಯಾಧಿಕಾರಿಗಳಾದ ಲೋಕೇಶ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಎದುರಾಗುತ್ತಿರುವ ಸಣ್ಣ ಪುಟ್ಟ ಕಾಯಿಲೆಗಳಿಗೆ ಅಂಗೈಯಲ್ಲೇ ಮನೆಮದ್ದು ಇದೆ. ಇದನ್ನು ಉಪಯೋಗಿಸಿಕೊಂಡು ಸಣ್ಣ ಪುಟ್ಟ ಕಾಯಿಲೆಗಳನ್ನು ಗುಣಮುಖ ಮಾಡಿಕೊಳ್ಳಬೇಕು. ಮನೆ ಸೇರಿದಂತೆ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ವೈಯಕ್ತಿಕ ಶುಚಿತ್ವದ ಕಡೆ ಹೆಚ್ಚಿನ ಗಮನವನ್ನು ನೀಡುವುದು ಮುಖ್ಯ ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ರಂಗಮ್ಮ, ಮುಖಂಡರಾದ ಜೆ.ಸಿ.ಶಂಕರೇಗೌಡ, ಕೃಷ್ಣಪ್ಪ, ಕಾಂತರಾಜು, ಗೋವಿಂದಪ್ಪ, ಕೃಷಿ ಮೇಲ್ವಿಚಾರಕರಾದ ಅಶೋಕ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಚಿಕ್ಕದೇವಮ್ಮ, ವಲಯ ಮೇಲ್ವಿಚಾರಕರಾದ ಮಂಜುಳ, ಸೇವಾಪ್ರತಿನಿಧಿ ಗೀತಾ, ಪ್ರಗತಿಬಂಧು ಮತ್ತು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
