ಮಿಡಿಗೇಶಿ
ಗ್ರಾಮಾಂತರ ಪ್ರದೇಶಗಳಲ್ಲಿನ ದೀನ, ದಲಿತ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದ ಜನಾಂಗಗಳಲ್ಲಿ ಕೆಲವರು ಕೂಲಿ ನಾಲಿ, ಸಣ್ಣಪುಟ್ಟ ವ್ಯಾಪಾರ, ಇನ್ನೂ ಕೆಲವು ಮಹಿಳೆಯರು ಗಾರ್ಮೆಂಟ್ಸ್ಗಳಲ್ಲಿ ಕೆಲಸ, ಮತ್ತೆ ಕೆಲವು ಮಹಿಳೆಯರು ಉಳ್ಳವರ ಮನೆಗೆಲಸಗಳಿಗೆ ಹೋಗಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ಇವರುಗಳು ನಿವೇಶನವಿಲ್ಲದೆ, ವಾಸಕ್ಕೆ ಮನೆಯಿಲ್ಲದೆ ಬಾಡಿಗೆ ಮನೆಗಳಲ್ಲಿ ಪಡಿಪಾಟಲು ಪಡುತ್ತಿದ್ದಾರೆ.
ಸದರಿಯವರಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ ಸರ್ಕಾರವು ಉಚಿತ ನಿವೇಶನ ಹಾಗೂ ಗೃಹ ನಿರ್ಮಾಣ ಮಾಡಿಕೊಳ್ಳಲೆಂದು ವಿವಿಧ ಯೋಜನೆಗಳಡಿಯಲ್ಲಿ ಮನೆಗಳ ಮಂಜೂರಾತಿ ನೀಡುತ್ತೀರುವುದು ಶ್ಲಾಘನೀಯ ಕಾರ್ಯಕ್ರಮವಾಗಿರುತ್ತದೆ. ಆದರೆ ಸ್ಥಳೀಯ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಲ್ಲಿನ ಅಧಿಕಾರಿಗಳ ಬೇಜಾವಾಬ್ದಾರಿತನ, ನಿರ್ಲಕ್ಷ್ಯ, ಕಪ್ಪದ ದುರಾಶೆಗಳಿಂದ ಗ್ರಾಮ ಪಂಚಾಯಿತಿಯಲ್ಲಿನ ಕಂಪ್ಯೂಟರ್ ಆಪರೇಟರ್ ಇರಬಹುದು, ಕಾರ್ಯದರ್ಶಿ ಇರಬಹುದು, ಲೆಕ್ಕ ಸಹಾಯಕರಿರಬಹುದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿರಬಹುದು ಈ ಮೇಲ್ಕಂಡವರು ಇಲ್ಲಿನ ಚುನಾಯಿತ ಜನಪ್ರತಿನಿಧಿಗಳನ್ನು ಬಳಸಿಕೊಂಡು ಮನೆ ಮಂಜೂರಾತಿಗೆ ಒಪ್ಪಿಗೆ ಪಡೆದುಕೊಳ್ಳುತ್ತಾರೆ.
ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಿಕೊಳ್ಳದೆ, ತಮಗೆ ಇಷ್ಟ ಬಂದ ಕಡೆ ಇಷ್ಟ ಬಂದವರನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಆದರೆ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕಚೇರಿಗಳಿಗೆ ಅನುಮೋದನೆಗಾಗಿ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಕಳುಹಿಸಿಕೊಡುವ ಸಂದರ್ಭದಲ್ಲಿ ತಮ್ಮ ಜವಾಬ್ದಾರಿಯನ್ನು ಮರೆತು ಫಲಾನುಭವಿಗಳ ಜಾತಿಗಳ, ವರ್ಗಗಳ ಹೆಸರನ್ನು ಅದಲು-ಬದಲು ಮಾಡಿ ಕಳುಹಿಸುತ್ತಿದ್ದಾರೆ. ನಂತರ ಮನೆಗಳ ಮಂಜೂರಾತಿ ಅನುಮೋದನೆ ಆಯ್ಕೆ ಪಟ್ಟಿ ಸಿದ್ದಗೊಂಡು ತಾಲ್ಲೂಕು ಪಂಚಾಯಿತಿಗೆ ಬಂದು, ಗ್ರಾಮ ಪಂಚಾಯಿತಿಗೆ ಬಂದಾಗ ಫಲಾನುಭವಿಗಳ ಪಟ್ಟಿ ನೋಡಿದಾಗ ಶಾಕ್ ಆಗುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಮ ಪಂಚಾಯಿತಿಗೆ ಸೇರಿದ ಕ್ಯಾತಗೊಂಡನಹಳ್ಳಿಯ 2018-2019 ನೇ ಸಾಲಿನ ಮನೆಯ ಫಲಾನುಭವಿಗಳ ಹತ್ತು ಹೆಸರಲ್ಲಿ ನಾಲ್ಕು ಜನರ ಜಾತಿ ಬದಲಾವಣೆಯಾಗಿದೆ. ಫಲಾನುಭವಿಗಳೇನಾದರೂ ಮನೆಯನ್ನು ನಿರ್ಮಾಣಮಾಡಿಕೊಂಡಲ್ಲಿ ಯಾವ ವರ್ಗದಲ್ಲಿ ಮಂಜೂರಾತಿ ಹಣವನ್ನು ಬ್ಯಾಂಕಿನಲ್ಲಿ ಡ್ರಾ ಮಾಡಿಕೊಳ್ಳಬೇಕು ಎಂಬುದು ಸಮಸ್ಯೆಯಾಗಿದೆ. ಗ್ರಾಮಗಳಲ್ಲಿ ಜಾತಿ ಜಾತಿಗಳಿಗೆ ಇಲ್ಲಿನ ನೌಕರರೇ ವೈರತ್ವ ಬೆಳೆಸುತ್ತಿದ್ದಾರೆಂಬುದಾಗಿ ಇಲ್ಲಿನ ಪ್ರಜ್ಞಾವಂತರು ಆರೋಪಿಸುತ್ತಿದ್ದಾರೆ.