ಪೊಲೀಸರ ಜೀಪ್ ಮೇಲೆ ಗುಂಡು ಹಾರಿಸಿ ಪುಂಡರು ಅಂದರ್

ಬೆಂಗಳೂರು

           ಪೊಲೀಸರ ಜೀಪ್ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ ನವೀನ್‍ಕುಮಾರ್ ಅಲಿಯಾಸ್ ಅಪ್ಪು ಹಾಗೂ ಗಿರಿ ಅಲಿಯಾಸ್ ಗಿರೀಶ್ ಸೇರಿ ಇಬ್ಬರು ಖತರ್ನಾಕ್ ರೌಡಿಗಳ ಕಾಲಿಗೆ ಕೆಆರ್ ಪುರಂ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

           ಪೊಲೀಸರ ಗುಂಡೇಡು ತಗುಲಿ ಗಾಯಗೊಂಡಿರುವ ಕೆಆರ್‍ಪುರಂನ ದೇವಸಂದ್ರ ನವೀನ್‍ಕುಮಾರ್ ಅಲಿಯಾಸ್ ಅಪ್ಪು(29) ಹಾಗೂ ಗಿರಿ ಅಲಿಯಾಸ್ ಗಿರೀಶ್(23) ಕೆಆರ್‍ಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ .

          ಬಂಧಿಸಲು ಬೆನ್ನಟ್ಟಿ ಹೋದಾಗ ರೌಡಿ ಗಿರಿ ಡ್ರ್ಯಾಗರ್‍ನಿಂದ ಇರಿದಿದ್ದರಿಂದ ಕೈಗೆ ಗಾಯಗೊಂಡಿರುವ ಮುನಿರಾಜ್ ಸತ್ಯಸಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಕಳೆದ ಅಕ್ಟೋಬರ್ 14 ರಂದು ವಿರೋಧಿ ಹರೀಶ್ ಅಲಿಯಾಸ್ ಪಕ್ಕನಿಗೆ ತಾನಿರುವ ಮಾಹಿತಿ ನೀಡಲು ಬಂದಿದ್ದಾನೆ ಎಂದು ಭಾವಿಸಿ ವಿಳಾಸ ಕೇಳಿದ ಚೇತನ್ ಎಂಬಾತನನ್ನು ಅಪಹರಿಸಿ ಮನೆಯಲ್ಲಿ ಕೂಡಿಹಾಕಿ ದೊಣ್ಣೆ ಮಚ್ಚುಗಳಿಂದ ಹೊಡೆದು ಹಿಂಸಿಸಿ, ಕೊಲೆ ಮಾಡಿ ಹೊಸಕೋಟೆಯ ದೊಡ್ಡ ದೇವನಹಳ್ಳಿಯ ನೀಲಗಿರಿ ತೊಪ್ಪಿನಲ್ಲಿ ಮೃತದೇಹವನ್ನು ಎಸೆದು ಬೆಂಕಿ ಹಚ್ಚಿ ಸುಟ್ಟು ಪರಾರಿಯಾಗಿದ್ದ ಪ್ರಕರಣದ ಪತ್ತೆಗೆ ರಚಿಸಲಾಗಿದ್ದ 3 ವಿಶೇಷ ತಂಡಗಳು 6 ಮಂದಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

         ವಿಚಾರಣೆಯಲ್ಲಿ ಆರೋಪಿಗಳು ಕೃತ್ಯದಲ್ಲಿ ರೌಡಿಗಳಾದ ಅಪ್ಪು ಹಾಗೂ ನವೀನ್ ಭಾಗಿಯಾಗಿರುವ ಮಾಹಿತಿ ನೀಡಿದ್ದರು ಅವರನ್ನು ಬಂಧಿಸಲು ಪೊಲೀಸ್ ತಂಡಗಳು ಸತತ ಕಾರ್ಯಾಚರಣೆ ಕೈಗೊಂಡಿದ್ದರು.

ಬೈಕ್‍ನ ಮಾಹಿತಿ

           ರೌಡಿಗಳಾದ ಅಪ್ಪು ಹಾಗೂ ನವೀನ್ ಭಾನುವಾರ ಮುಂಜಾನೆ 6ರ ವೇಳೆ ಕಾಟಿನಲ್ಲೂರು ಗೇಟ್ ಬಳಿ ಸ್ಪೈಂಡರ್ ಬೈಕ್ ನಲ್ಲಿ ಹೋಗುತ್ತಿರುವ ಮಾಹಿತಿಯು ಕೆ.ಆರ್.ಪುರಂ ಪೊಲೀಸ್ ಇನ್ಸ್‍ಪೆಕ್ಟರ್ ಜಯರಾಜ್ ಅವರಿಗೆ ಬಂದಿದ್ದು ಕೂಡಲೇ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಕೈಗೊಂಡರು.

           ಜೀಪ್‍ನಲ್ಲಿ ಹೊರಟ ಜಯರಾಜ್ ಮತ್ತವರ ಸಿಬ್ಬಂದಿ ರೌಡಿಗಳ ಬೈಕನ್ನು ಹೊಸ ಕೋಟೆ ಕಾಡುಗೋಡಿ ಮುಖ್ಯರಸ್ತೆಯಲ್ಲಿ ಅಡ್ಡಗಟ್ಟಲು ಹೋದಾಗ ಖಾಜಿ ಸೊನ್ನೇನಹಳ್ಳಿ ರಸ್ತೆ ಬದಿಗೆ ಬೈಕ್‍ತಿರುಗಿಸಿದ್ದಾರೆ. ಕೂಡಲೇ ಬೈಕ್ ಬೆನ್ನಟ್ಟಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ಬೈಕ್ ನಿಂದ ಇಳಿದ ಅಪ್ಪು ಪೊಲೀಸ್ ಜೀಪ್‍ಗೆ ಪಿಸ್ತೂಲ್ ನಿಂದ 3 ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದ ಜೀಪಿನ ಹಿಂಭಾಗ ಜಖಂಗೊಂಡಿದ್ದು ಕೂಡಲೇ ಜಯರಾಜ್ ಸ್ವಯಂ ರಕ್ಷಣೆಗೆ ಅಪ್ಪು ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

            ಮತ್ತೊಬ್ಬ ರೌಡಿ ಗಿರೀಶ್ ನನ್ನು ಪೊಲೀಸ್ ಸಿಬ್ಬಂದಿ ಮುನಿರಾಜು ಹಿಡಿಯಲು ಹೋದಾಗ ಅವರಿಗೆ ಡ್ರ್ಯಾಗರ್ ನಿಂದ ಚುಚ್ಚಿ ಪರಾರಿಯಾಗಲು ಯತ್ನಿಸಿದಾಗ ಜಯರಾಜ್ ಮತ್ತೊಂದು ಗುಂಡು ಹಾರಿಸಿದ್ದು ಅದು ಕಾಲಿಗೆ ತಗುಲಿ ಗಿರೀಶ್ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು ಆತನನ್ನು ಬಂಧಿಸಿದ್ದಾರೆ.

             ಗಾಯಗೊಂಡಿರುವ ಆರೋಪಿಗಳನ್ನು ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪೊಲೀಸ್ ಪೇದೆ ಮುನಿರಾಜುನನ್ನು ಸತ್ಯಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

ಕೊಲೆನಂತರ ಜಗಳ

            ಗುಂಡೇಟು ತಿಂದಿರುವ ರೌಡಿ ಅಪ್ಪು ಕೆಆರ್‍ಪುರಂನ ಮಾಜಿ ಪಾಲಿಕೆ ಸದಸ್ಯೆಯ ಪತಿ ಸಿರಪುರ ಶ್ರೀನಿವಾಸ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ತನ್ನೊಂದಿಗೆ ಕೃತ್ಯದಲ್ಲಿ ಕೈಜೋಡಿಸಿದ್ದ ಹರೀಶ್ ಆಲಿಯಾಸ್ ಪಕ್ಕ ನೊಂದಿಗೆ ಇತ್ತೀಚೆಗೆ ಜಗಳ ಮಾಡಿಕೊಂಡಿದ್ದು ಇಬ್ಬರ ನಡುವ ವೈಮನಸ್ಸು ಉಂಟಾಗಿತ್ತು.

            ಕಳೆದ ಅಕ್ಟೋಬರ್ 9 ರಂದು ಇಬ್ಬರ ನಡುವೆ ಜೋರು ಜಗಳ ನಡೆದಿದ್ದು ಪಕ್ಕನಿಂದ ದೂರ ಉಳಿದಿದ್ದ ಅಪ್ಪು ತನ್ನ ಬಗ್ಗೆ ಯಾವುದೇ ಮಾಹಿತಿ ಆತನಿಗೆ ದೊರಕದಂತೆ ನೋಡಿಕೊಂಡಿದ್ದ ಅದೇ ದಿನ ಚೇತನ್ ಎಂಬ ಯುವಕ ಸ್ನೇಹಿತ ವಿನಯ್ ನನ್ನು ಹೆಬ್ಬಾಳದಿಂದ ಕೆಆರ್ ಪುರನ ಬಸವನಪುರಕ್ಕೆ ಬಿಟ್ಟು ವಾಪಸ್ಸು ಬರುವಾಗ ದಾರಿ ತಪ್ಪಿ ಆರೋಪಿ ಅಪ್ಪು ಮನೆಯ ಬಳಿ ಹೋಗಿದ್ದರು.

            ಅಪ್ಪುನನ್ನು ಹೆಬ್ಬಾಳದ ಕಡೆಗೆ ಹೋಗುವ ದಾರಿಯನ್ನು ಚೇತನ್ ಕೇಳಿದ್ದು ಇದನ್ನು ತಪ್ಪಾಗಿ ಭಾವಿಸಿದ್ದ ರೌಡಿ ಅಪ್ಪು ತನ್ನ ಇರುವಿಕೆಯ ಮಾಹಿತಿ ಪಡೆಯಲು ಎದುರಾಳಿ ಹರೀಶ್ ಆಲಿಯಾಸ್ ಪಕ್ಕ ಚೇತನ್ ನನ್ನು ಕಳುಹಿಸಬಹುದೆಂದು ಭಾವಿಸಿ ಆತನನ್ನು ಅಪಹರಿಸಿ ತನ್ನ ಮನೆಯಲ್ಲಿ ಇಟ್ಟುಕೊಂಡು ಮರುದಿನ ಮುಂಜಾನೆ ಮಚ್ಚು, ದೊಣ್ಣೆ ಗಳಿಂದ ಹೊಡೆದು ಕೊಲೆ ಮಾಡಿ ದೊಡ್ಡ ದೇವನಹಳ್ಳಿಯ ನೀಲಗಿರಿ ತೊಪ್ಪಿನಲ್ಲಿ ಎಸೆದು ಬೆಂಕಿ ಹಚ್ಚಿ ಪರಾರಿಯಾಗಿದ್ದರು.

           ರೌಡಿ ಅಪ್ಪು ವಿರುದ್ಧ 2 ಕೊಲೆ 2 ಹಲ್ಲೆ, 3 ಕೊಲೆ ಯತ್ನ, ಬೆದರಿಕೆ ಸೇರಿ 9 ಅಪರಾಧ ಪ್ರಕರಣಗಳು ಭಾಗಿಯಾಗಿದ್ದು ಕೆಆರ್ ಪುರಂ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದಾನೆ.

ಜೈಲಿನಲ್ಲಿ ಪರಿಚಯ

            ಮತ್ತೊಬ್ಬ ರೌಡಿ ಗಿರಿ, ಸುಪಾರಿ ಪಡೆದು ಬನಶಂಕರಿ 3ನೇ ಹಂತದ ಉದ್ಯಮಿ ನವ ಮಣಿ ಎಂಬುವರ ಕೊಲೆ ಮಾಡುವುದರಲ್ಲದೇ ಒಂದು ಹಲ್ಲೆ, ಬೆದರಿಕೆ ಸೇರಿ ಇತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕೆಆರ್ ಪುರ ಪೊಲೀಸ್ ಠಾಣೆಯ ರೌಡಿ ಪಟ್ಟಿ ಸೇರಿದ್ದಾನೆ. ಬಂಧಿತ ಇಬ್ಬರು ರೌಡಿಗಳಿಂದ ಪಿಸ್ತೂಲ್, ಜೀವಂತ ಗುಂಡುಗಳು, ಡ್ರ್ಯಾಗರ್, ಬೈಕ್ ಅನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.ಇಬ್ಬರು ಅಪರಾದ ಪ್ರಕರಣಗಳಲ್ಲಿ ಬಂಧಿತರಾಘಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವಾಗ ಪರಿಚಯವಾಗಿ ಜಾಮೀನು ಪಡೆದು ಹೊರಬಂದ ನಂತರ ಸುಲಿಗೆ ಕೃತ್ಯಗಳನ್ನು ನಡೆಸುತ್ತಿದ್ದರು.

           ಒಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿಕೊಂಡು ಬೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿಗಳು ಕೆಲವೇ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡಿ ಮೋಜಿನ ಜೀವನ ನಡೆಸುತ್ತಿದ್ದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದರು.

           ರೌಡಿ ಅಪ್ಪು ಪಿಸ್ತೂಲ್ ಅನ್ನು ಎಲ್ಲಿಂದ ತಂದಿದ್ದ ಎನ್ನುವುದರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ರೌಡಿಗಳಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗ ಇನ್ಸ್ ಪೆಕ್ಟರ್ ಜಯರಾಜ್ ಮತ್ತು ಅವರ ಸಿಬ್ಬಂದಿಯನ್ನು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಭಿನಂದಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link