ಹಾವೇರಿ :
ಅನುದಾನಿತ ವಿದ್ಯಾಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಕಾಲ್ಪನಿಕ ವೇತನ ಸೌಲಭ್ಯ ಮತ್ತ ಪಿಂಚಣಿ ಸೌಲಭ್ಯ ಜಾರಿಗಾಗಿ ಸರ್ಕಾರದ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳದೇ ಇದ್ದರೆ ಚಳಿಗಾಲದ ಅಧಿವೇಶ ಸಮಯದಲ್ಲಿ ಅಮರಣಾಂತ ಉಪವಾಸ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ ಹನಮಂತಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಸರಿಸುಮಾರು 1500ಕ್ಕೂ ಹೆಚ್ಚು ನೌಕರರು ಕೊನೆಯ ತಿಂಗಳ ಸಂಬಳ ಮಾತ್ರ ಪಡೆದು ಬರಿಗೈಯಲ್ಲಿ ನಿವೃತ್ತಿಯಾಗಿದ್ದಾರೆ.ಅನೇಕರು ಸೇವೆಯಲ್ಲಿರುವಾಗಲೇ ಅಕಾಲಿಕವಾಗಿ ಮರಣಹೊಂದಿದ್ದಾರೆ, ಇವರ ಕುಟುಂಬಗಳಿಗೆ ಯಾವುದೇ ಆರ್ಥಿಕ ಸೌಲಭ್ಯ ದೊರೆತಿಲ್ಲ.ನೌಕರರು ವೇತನಾನುದಾನಕ್ಕೆ ಒಳಪಡುವುದಕ್ಕೂ ಪೂರ್ವದ ಸೇವೆಯನ್ನು, ಸೇವೆಗೆ ಸೇರಿದ ದಿನಾಂಕದಿಂದಲೇ ಪರಿಗಣಿಸಿ ವಿವಿಧ ಸೌಲಭ್ಯಗಳನ್ನು ನಿಡಬೇಕೆಂದು ಸರ್ವೋಚ್ಚ ನ್ಯಾಯಾಲಯವೇ ತೀರ್ಪು ನಿಡಿದರೂ ಸಹ ಸರ್ಕಾರ ಮಾತ್ರ ಬೇಡಿಕೆ ಈಡೇರಿಸುತ್ತಿಲ್ಲ.ಒಂದು ವೇಳೆ ಕಾಲ್ಪನಿಕ ವೇತನ ಸೌಲಭ್ಯ ದೊರೆತರೆ ಅರ್ಧದಷ್ಟು ಅನುದಾನಿತ ನೌಕರರು ನಿಶ್ಚತ ಪಿಂಚಣಿ ಯೋಜನೆಯ ವ್ಯಪ್ತಿಗೊಳಪಡುವ ಮೂಲಕ ಸಂಧ್ಯಾಕಾಲದ ಭದ್ರತೆ ಸಾದ್ಯವಾಗುತ್ತದೆ.
ದಿ 01-04-2006ಕ್ಕೂ ಪೂರ್ವದಲ್ಲಿ ಸರ್ಕಾರಿ ಮತ್ತು ಅನುದಾನಿತ ವಿದ್ಯಾಸಂಸ್ಥೆಗಳ ನೌಕರರ ಮಧ್ಯೆ ನಿವೃತ್ತಿ ವೇತನ ನೀಡುವ ವಿಚಾರದಲ್ಲಿ ಯಾವುದೇ ತಾರತಮ್ಯ ಇದ್ದಿಲ್ಲ.
ಆದರೆ ದಿ:1-4-2006ರಿಂದ ಜಾರಿಗೆ ಬಂದ ನೂತನ ಪಿಂಚಣಿ ಯೋಜನೆಯಲ್ಲಿ ಪಿಂಚಣಿ ನಿಧಿಗೆ ವಂತಿಕೆಯನ್ನು ನೀಡುವ ಹೊಣೆಗಾರಿಕೆಯನ್ನು ಸರ್ಕಾರದ ಬದಲಿಗೆ ಆಡಳಿತ ಮಂಡಳಿಗಳಿಗೆ ವಹಿಸುವ ಮೂಲಕ ಘೋರ ಅನ್ಯಾಯ ಮಾಡಲಾಗಿದೆ.ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲದೆ, ಕೇವಲ ಕರ್ನಾಟಕದಲ್ಲಿ ಮಾತ್ರ ಈ ತಾರತಮ್ಯ ಇರುವುದು ಮತ್ತೊಂದು ದುರಂತ.ಸರ್ಕಾರದ ಈ ಅನ್ಯಾಯವನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟ ಮಾಡಲು ಮುಂದಾಗುತ್ತೇವೆ ಎಂದರು.
ಸಂಘದ ರಾಜ್ಯ ಸಂಚಾಲಕರಾದ ವ್ಹಿ ನಾಗೇಂದ್ರಪ್ಪ ಮಾತನಾಡಿ ಅಕ್ಟೋನರ್11 ರಿಂದ21 ರ ವರೆಗೆ ಪ್ರಾಣ ಬಿಟ್ಟೇವು , ಪಿಂಚಣಿ ಬಿಡೆವು ಎಂಬ ಘೋಷ ವಾಕ್ಯದೊಂದಿಗೆ, ನಾಡಿನ ಪವಿತ್ರ ಹಬ್ಬವಾಗಿರುವ ದಸರಾ ಹಬ್ಬವನ್ನು ಸಂಸಾರದೊಂದಿಗೆ ಆಚರಿಸದೇ 20,000ಷ್ಟು ನೌಕರರು ಸತತ 11 ದಿನಗಳ ಕಾಲ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹೋರಾಟ ಮಾಡಿದ್ದು, ಮುಖ್ಯಮಂತ್ರಿಗಳು ಉಪ ಚುನಾವಣೆ ಮುಗಿದ ಕೂಡಲೇ ಬೇಡಿಕೆ ಈಡೇರಿಸುವ ಭರವಸೆ ನೀಡಿ ಹೋರಾಟ ಕೈಬಿಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೋರಾಟವನ್ನು ಹಿಂಪಡೆಯಲಾಗಿದೆ.
ದಿ 15 ಒಂದು ದಿನ ಮುಖ್ಯಮಂತ್ರಿ ಯವರ ಅಧ್ಯಕ್ಷತೆಯಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡಲಾಗುವುದೆಂದು ಮುಖ್ಯಮಂತ್ರಿಗಳ ಕಾರ್ಯಾಲಯ ನಮಗೆ ತಿಳಿಸಿರುತ್ತದೆ. ನಮ್ಮ ಬೇಡಿಕೆ ಇಡೇರಿಸದಿದ್ದರೆ ಹೋರಾಟಕ್ಕೆ ಮುಂದಾಗುತ್ತೇವೆ ಎಂದರು. ಜಿಲ್ಲಾಧ್ಯಕ್ಷ ಎಂಎನ್ ಮಲ್ಲಾಡದ ಮಾತನಾಡಿ ಕಾಲ್ಪನಿಕ ವೇತನ ಸೌಲಭ್ಯಕ್ಕೆ ಸಂಬಂಧಿಸಿದಂತೆ ಬಸವರಾಜ ಹೊರಟ್ಟಿಯವರ ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟ ಸದನ ಉಪ ಸಮಿತಿ ನೀಡಿರುವ ಕಾಲ್ಪನಿಕ ವೇತನ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂದರು. ಈ ಸಂದರ್ಭದಲ್ಲಿ ಶಿಕ್ಷಕರುಗಳಾದ ರಾಕೇಶ ಜಿಗಳಿ.ವೀರುಪಾಕ್ಷಪ್ಪ ಮಂತ್ರೋಡಿ.ರವಿ ಬಂಕಾಪೂರ ಅನೇಕ ಶಿಕ್ಷಕ ಬಳಗದವರು ಇದ್ದರು.