ಗಾಂಧೀಜಿಗೆ ರಾಮರಾಜ್ಯ ಕಲ್ಪನೆ ನೀಡಿದ್ದು ಮಹರ್ಷಿ ವಾಲ್ಮೀಕಿ

ಹೂವಿನಹಡಗಲಿ :

       ಗಾಂಧೀಜಿಯವರಿಗೆ ರಾಮರಾಜ್ಯದ ಕಲ್ಪನೆಯನ್ನು ನೀಡಿದ್ದು ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣ ಎಂದು ನೂತನ ಸಂಸದ ವಿ.ಎಸ್.ಉಗ್ರಪ್ಪ ಅಭಿಪ್ರಾಯಪಟ್ಟರು.

       ಅವರು ತಾಲೂಕಿನ ನವಲಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಹಾಗೂ ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹರ್ಷಿ ವಾಲ್ಮೀಕಿಯವರು ರಚಿಸಿದಂತಹ ರಾಮಾಯಣ ಅಂದು ಮತ್ತು ಇಂದು ಎಂದೆಂದಿಗೂ ಕೂಡಾ ಪ್ರಸ್ತುತವಾಗಿದೆ ಎಂದ ಅವರು, ಆ ಕಾಲದಲ್ಲಿಯೇ ಸಮ, ಸಮಾಜ ಹೇಗಿರಬೇಕು ಎನ್ನುವ ಕಲ್ಪನೆಯನ್ನು ಮಹರ್ಷಿ ವಾಲ್ಮೀಕಿಯವರು ತಮ್ಮ ಗ್ರಂಥದಲ್ಲಿ ಬರೆದಿದ್ದಾರೆ ಎಂದರು.

       ಆದರ್ಶ ವ್ಯಕ್ತಿಗಳನ್ನು ಪರಿಚಯಿಸುವುದರ ಮೂಲಕ ಶ್ರೀರಾಮ ಏಕಪತ್ನಿ ವೃತಸ್ಥ ಎನ್ನುವುದನ್ನು ಬಿಂಬಿಸಿದ್ದಾರೆ. ಅಲ್ಲದೇ, ಒಂದು ರಾಜ್ಯ ರಾಮರಾಜ್ಯವಾಗಿರಬೇಕಾದರೆ ಅಲ್ಲಿ ಎಲ್ಲಾ ವರ್ಗ, ಜಾತಿ, ಮತ, ಪಂಥದವರೆಗೂ ಕೂಡಾ ಸರಿ ಸಮಾನವಾದ ಸೌಲಭ್ಯಗಳು ದೊರಕಬೇಕು ಎನ್ನುವುದನ್ನು ತಿಳಿಸಿದ ಅವರು ಆತ್ಮೀಯ ಸ್ನೇಹಿತರಾದ ಕೇಂದ್ರ ಸಚಿವ ಅನಂತಕುಮಾರರವರ ಅಗಲಿಕೆ ಅಪಾರ ನಷ್ಟವನ್ನು ತಂದಿದೆ ಎಂದು ಹೇಳಿದರು.

      ಇದೇ ಸಂದರ್ಭದಲ್ಲಿ ಚುನಾವಣೆಯ ಗೆಲುವಿನ ನಂತರ ಪ್ರಥಮ ಬಾರಿಗೆ ಹೂವಿನಹಡಗಲಿ ಕ್ಷೇತ್ರಕ್ಕೆ ಆಗಮಿಸಿದ್ದೇನೆ ನನ್ನ ಪೂರ್ವಜನ್ಮದ ಪುಣ್ಯ ಎನ್ನುವಂತೆ ಅತ್ಯಂತ ಪ್ರಚಂಡ ಬಹುಮತದಿಂದ ನನ್ನನ್ನು ಗೆಲ್ಲಿಸಿದ್ದೀರಿ ಜನ್ಮ ದುದ್ದಕ್ಕೂ ನಿಮ್ಮ ಋಣವನ್ನು ಸ್ಮರಿಸುತ್ತೇನೆ ಎಂದು ಉಗ್ರಪ್ಪ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.

        ಆಶೀರ್ವಚನ ನೀಡಿ ಮಾತನಾಡಿದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನನ್ನಾನಂದಪುರಿ ಮಹಾಸ್ವಾಮಿಗಳು ನವಲಿ ಗ್ರಾಮದಲ್ಲಿ ಅತ್ಯಂತ ಅರ್ಥಪೂರ್ಣವಾದ ವಾಲ್ಮೀಕಿ ಜಯಂತಿಯನ್ನು ಆಚರಿಸಿದ್ದೀರಿ. ವಾಲ್ಮೀಕಿ ಸಮಾಜದ ಸಂಘಟನೆಗಾಗಿ ಇಂತಹ ಜಯಂತಿಗಳ ಅಗತ್ಯವಿದೆ ಎಂದ ಅವರು, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಮಾಜ ಒಗ್ಗಟ್ಟನ್ನು ಪ್ರದರ್ಶಿಸಬೇಕು, ಇನ್ನೊಂದು ಜಾತಿಯನ್ನು ದೂರುವುದಕ್ಕಿಲ್ಲ ಎಂದು ಹೇಳಿದರು

       ಇದೇ ಸಂದರ್ಭದಲ್ಲಿ ನೂತನ ಸಂಸದರು ಹಾಗೂ ಶಾಸಕ ಪಿ.ಟಿ.ಪರಮೇಶ್ವರನಾಯ್ಕರಲ್ಲಿ ವಿನಂತಿಸಿಕೊಂಡ ಶ್ರೀಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಈಗಾಗಲೇ ಶೇಕಡ 3 ರಷ್ಟು ಮೀಸಲಾತಿ ಕಲ್ಪಿಸಿದ್ದು ಇನ್ನೂ ಹೆಚ್ಚಿನ ಅಭಿವೃದ್ದಿಗಾಗಿ ಶೇಕಡ 7ರಷ್ಟು ಮೀಸಲಾತಿಯನ್ನು ಕಲ್ಪಿಸಬೇಕು ತಾವಿಬ್ಬರು ಕೂಡಾ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬೇಕು ಎಂದು ಹೇಳಿದರು.

        ಶಾಸಕ ಪಿ.ಟಿ.ಪರಮೇಶ್ವರನಾಯ್ಕರು ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗವಿಮಠದ ಡಾ.ಹಿರಿಶಾಂತವೀರ ಶ್ರೀಗಳು, ಹಂಪಸಾಗರ ಶಿವಲಿಂಗ ರುದ್ರಮುನಿ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೀರೇಶ ಸ್ವಾಗತಿಸಿ, ಪರಸಪ್ಪ ಕಾರ್ಯಕ್ರಮ ನಿರೂಪಿಸಿದರು.

       ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಎಲ್.ಜಿ.ಹೊನ್ನಪ್ಪನವರ್, ಪುರಸಭೆ ಸದಸ್ಯರಾದ ಯು.ಹನುಮಂತಪ್ಪ, ಲಲಿತಮ್ಮ ಪರಸಪ್ಪ, ತಾ.ಪಂ.ಸದಸ್ಯೆ ರೇಣುಕಮ್ಮ, ಜಿ.ಪಂ. ಮಾಜಿ ಸದಸ್ಯ ಜಿ.ವಸಂತ, ಮುಖಂಡರಾದ ಊಳಿಗದ ಹನುಮಂತಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಚಿಂತಿ ಮಾಲತಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link