ತಾಲ್ಲೂಕಿನಲ್ಲಿ ಸರ್ಕಾರಿ-ಖಾಸಗಿ ಶೌಚಾಲಯಗಳ ಸ್ಥಿತಿ-ಗತಿ..!

ಕೊರಟಗೆರೆ

         ಪಟ್ಟಣ ಪಂಚಾಯ್ತಿ ಜನತೆಯನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಹಾಗೂ ತಾಲ್ಲೂಕು ಕೇಂದ್ರಕ್ಕೆ ಬರುವ ಗ್ರಾಮೀಣ ಜನತೆಗೆ ಸುಸಜ್ಜಿತ ಶೌಚಾಲಯ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ 50 ಲಕ್ಷ ರೂ.ಗೂ ಹೆಚ್ಚು ವೆಚ್ಚದಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ನಿರ್ವಹಣೆ ಲೋಪದಿಂದ ಬಳಕೆಗೆ ಬಾರದೆ, ಸಾರ್ವಜನಿಕರು ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರಟಗೆರೆ ಪಟ್ಟಣದ ಅರಣ್ಯ ಇಲಾಖೆ, ಬಸ್ ನಿಲ್ದಾಣ, ಸಂತೆ ಮೈದಾನದಲ್ಲಿ ನಿರ್ಮಾಣವಾದ ಶೌಚಾಲಯಗಳು ಉದ್ಘಾಟನೆ ಭಾಗ್ಯವನ್ನೆ ಕಂಡಿಲ್ಲ. ಮತ್ತೊಂದೆಡೆ ಗ್ರಾಮೀಣ ಪ್ರದೇಶದ ಜನ ಪ್ರತಿ ದಿನ ಮಿನಿ ವಿಧಾನಸೌಧ, ಕಂದಾಯ, ಇಂದಿರಾ ಕ್ಯಾಂಟೀನ್, ತಾ ಪಂ, ಆಹಾರ, ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಸೇರಿದಂತೆ ಹಲವಾರು ಇಲಾಖೆಗೆ ಬರುತ್ತಾರೆ. ಅವರಲ್ಲಿ ಪುರುಷರಿಗೆ ಇಲಾಖೆಯ ಗೋಡೆ ಮತ್ತು ಬೇಲಿಯೆ ಗತಿಯಾದರೆ, ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಅರಿಯುವಲ್ಲಿ ತಾಲ್ಲೂಕ್ ಮಟ್ಟದ ಅಧಿಕಾರಿಗಳು ಪೂರ್ಣ ವಿಫಲರಾಗಿದ್ದಾರೆ.

          ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಬರುವ ಶೌಚಾಲಯಗಳ ನಿರ್ಮಾಣದ ಉಸ್ತುವಾರಿ ಹೊತ್ತ ಪಟ್ಟಣ ಪಂಚಾಯ್ತಿ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಸಾರ್ವಜನಿಕರ ಹಿತದೃಷ್ಟಿಯಿಂದ 50 ಲಕ್ಷ ರೂ.ಗೂ ಹೆಚ್ಚು ಅನುದಾನದಲ್ಲಿ ಶೌಚಾಲಯ ನಿರ್ಮಾಣ ಮಾಡಿದೆ. ಇದರ ನಿರ್ವಹಣೆಯ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ. ಅಲ್ಲದೇ ಪಟ್ಟಣ ಪಂಚಾಯ್ತಿಯು ಕೇವಲ ಅನುದಾನ ಬಳಕೆ ಹಾಗೂ ಕಮಿಷನ್ ಆಸೆಯಿಂದ ಬೇಕಾಬಿಟ್ಟಿಯಾಗಿ ಶೌಚಾಲಯ ನಿರ್ಮಾಣ ಮಾಡಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾದಂತಾಗಿದೆ.

            ಪಟ್ಟಣದ ಅರಣ್ಯ ಇಲಾಖೆ ಬಳಿ 8 ವರ್ಷದ ಹಿಂದೆ 8.5 ಲಕ್ಷರೂ. ವೆಚ್ಚದಲ್ಲಿ ನಿರ್ಮಾಣವಾದ ಶೌಚಾಲಯದ ಮಾಹಿತಿಯೇ ಸಾರ್ವಜನಿಕರಿಗೆ ಇಲ್ಲದಾಗಿದೆ. ಮಧ್ಯದ ಬಸ್ ನಿಲ್ದಾಣದ ಮುಂಭಾಗದ ಶೌಚಾಲಯವು ನದಿಯ ಮಣ್ಣಿನೊಂದಿಗೆ ಮಣ್ಣಾಗಿದೆ. ಮಾರಮ್ಮನ ದೇವಸ್ಥಾನದ ಬಳಿ ನಿರ್ಮಾಣವಾದ ಶೌಚಾಲಯವೇ ಕಾಣೆಯಾಗಿದೆ. ಇನ್ನೂ ಸಂತೆ ಮೈದಾನದಲ್ಲಿನ ಶೌಚಾಲಯ ನಿರ್ವಹಣೆ ಇಲ್ಲದೆ, ಕಿಟಕಿ-ಬಾಗಿಲು ಕಳ್ಳಕಾಕರ ಪಾಲಾಗಿವೆ. ಇಷ್ಟೆಲ್ಲಾ ದುರವಸ್ಥೆಗಳ ನಡುವೆ ಶೌಚಾಲಯಗಳ ನಿರ್ವಹಣೆ ಹೊತ್ತ ಪಟ್ಟಣ ಪಂಚಾಯ್ತಿ ಜಪ್ಪಯ್ಯ ಎಚಿದರೂ ತಲೆ ಕೆಡಿಸಿಕೊಳ್ಳದೆ ಜಾಣ ಕಿವುಡುತನ ಮೆರೆದಿರುವುದನ್ನು ಸಾರ್ವಜನಿಕರು ಟೀಕಿಸುತ್ತಿದ್ದಾರೆ.

            ಕಂದಾಯ ಇಲಾಖೆ ಸೇರಿದಂತೆ ಹತ್ತಾರು ಸರ್ಕಾರಿ ಇಲಾಖೆಗಳಿರುವ ಸಾರ್ವಜನಿಕ ವಲಯಗಳಲ್ಲಿ ಬಹುತೇಕ ಶೌಚಾಲಯಗಳು ಶಿಥಿಲವಾಗಿವೆ. ಕೆಲವು ಶೌಚಾಲಯಕ್ಕೆ ಬೀಗ ಹಾಕಿದ್ದರೆ ಮತ್ತು ಕೆಲ ಶೌಚಾಲಯಗಳು ದುರ್ವಾಸನೆಯಿಂದ ನಾಗರಿಕರ ಬಳಕೆಗೆ ನಿರುಪಯುಕ್ತವಾಗಿವೆ. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣವಾದ ಶೌಚಾಲಯಗಳ ನಿರ್ವಹಣೆಯಲ್ಲಿ ಪಟ್ಟಣ ಪಂಚಾಯ್ತಿ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಯಲ್ಲೂ ಶೌಚಾಲಯ ನಿರ್ಮಿಸಬೇಕೆಂದು ಹೊರಟಿರುವ ತಾಪಂಗೇ ಸೂಕ್ತ ಶೌಚಾಲಯವಿಲ್ಲದಿರುವುದು ತಾಪಂನ ಆಡಳಿತ ವೈಖರಿಗೆ ಕೈಗನ್ನಡಿಯಾಗಿದೆ.

ತಾಲ್ಲೂಕಿನ 24 ಗ್ರಾಪಂಗಳ ಶೌಚಾಲಯಗಳ ಮಾಹಿತಿ;-

       ಕೊರಟಗೆರೆ ತಾಲ್ಲೂಕಿನ 24 ಗ್ರಾಪಂ ವ್ಯಾಪ್ತಿಯ 321 ಗ್ರಾಮಗಳ ಪೈಕಿ, 30,527 ಕುಟುಂಬದಲ್ಲಿ 30,364 ಕುಟುಂಬಗಳು ಶೌಚಾಲಯಗಳನ್ನು ನಿರ್ಮಿಸಿಕೊಂಡಿವೆ. ಇನ್ನುಳಿದ 163 ಕುಟುಂಬಗಳ ಶೌಚಾಲಯಗಳು ನಿರ್ಮಾಣ ಹಂತದಲ್ಲಿವೆ. 24 ಗ್ರಾಪಂನಲ್ಲಿ 16 ಗ್ರಾಪಂಗಳು ಶೌಚಾಲಯ ನಿರ್ಮಾಣ ಪೂರ್ಣಗೊಳಿಸಿದ ಗ್ರಾಪಂಗಳಾದರೆ, ಇನ್ನುಳಿದ 8 ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕಲ್ಲುಬಂಡೆಯ ಜಾಗ ಮತ್ತು ಜಾಗದ ಕೊರತೆಯಿಂದ ಶೌಚಾಲಯ ನಿರ್ಮಾಣ ಕುಂಠಿತವಾಗಿದೆ.

ಕೊರಟಗೆರೆ ವ್ಯಾಪ್ತಿಯ ಸ್ಥಿತಿಗತಿ;-

           ರಾಜ್ಯದ ಎರಡನೇ ಕಾಶಿ ಎಂದೇ ಕರೆಸಿಕೊಳ್ಳುವ ಸಿದ್ದರಬೆಟ್ಟದಲ್ಲಿನ ಎರಡೂ ಶೌಚಾಲಯಕ್ಕೆ ಬೀಗ ಹಾಕಿ, ಪ್ರವಾಸಿಗರಿಗೆ ಬಯಲು ಶೌಚಾಲಯವೆ ಗತಿಯಾದರೆ, ಚನ್ನರಾಯನದುರ್ಗ ಪ್ರವಾಸಿಗರ ತಾಣವಾದರೂ ಬೆಟ್ಟದ ಜೊತೆ ಶೌಚಾಲಯಕ್ಕೂ ಗ್ರಹಣ ಹಿಡಿದಂತಾಗಿದೆ. ಉಳಿದಂತೆ ಕೊರಟಗೆರೆ ಪಟ್ಟಣದ ಗಂಗಾಧರೇಶ್ವರ ಸನ್ನಿಧಿಯಲ್ಲಿ ಶೌಚಾಲಯವೇ ಮಾಯವಾಗಿದೆ. ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದ ಶೌಚಾಲಯದ ನಿರ್ವಹಣೆ ಇಲ್ಲದೆ ದನಗಳ ಜಾತ್ರೆಯಲ್ಲಿ ಹಾಗೂ ಪ್ರತಿದಿನ ಬರುವ ಭಕ್ತಾದಿಗಳಿಗೆ ಶೌಚಾಲಯ ನಿರ್ವಹಣೆಯಿಲ್ಲದೆ ಪಾಳುಬಿದ್ದಿದೆ. ಗೊರವನಹಳ್ಳಿ ಲಕ್ಷ್ಮಿದೇವಸ್ಥಾನದ ಪ್ರಮುಖರಸ್ತೆಗೆ ಹೊಂದಿಕೊಂಡಿರುವ ಬಸ್ ನಿಲ್ದಾಣದ ಬಳಿ ಇದ್ದ ಶೌಚಾಲಯ ಗ್ರಾಪಂನ ನಿರ್ವಹಣೆ ಕೊರತೆಯಿಂದ ಹಾಳಾಗಿದೆ. ಕಳೆದ 8-10 ವರ್ಷಗಳಿಂದ ಇಲ್ಲಿಗೆ ಬರುವ ಭಕ್ತಾದಿಗಳು ಕಿರಿಕಿರಿ ಅನುಭವಹಿಸಿ ಇಲ್ಲಿನ ಪರಿಸ್ಥಿತಿಯ ವಿರುದ್ದ ಬೇಸರ ವ್ಯಕ್ತಪಡಿಸುತ್ತಿರುವುದು ಸಾಮಾನ್ಯವಾಗಿದೆ.

ತಾಲ್ಲೂಕಿನ ಸರ್ಕಾರಿ ಶಾಲೆಗಳ ಪರಿಸ್ಥಿತಿ ;-

           ಕೊರಟಗೆರೆ ತಾಲ್ಲೂಕಿನಲ್ಲಿ ಒಟ್ಟು 279 ಸರ್ಕಾರಿ ಕಿರಿಯ ಮತ್ತು ಹಿರಿಯ ಪಾಠಶಾಲೆಗಳಿವೆ. ಇವಲ್ಲದೆ 50 ಕ್ಕೂ ಹೆಚ್ಚು ಖಾಸಗಿ ಅನುದಾನ, ಅನುದಾನರಹಿತ ಶಾಲೆಗಳಿವೆ. ಅದರಲ್ಲಿ 46 ಸರ್ಕಾರಿ ಶಾಲೆಯಲ್ಲಿ ಶೌಚಾಲಯಗಳು ಶಿಥಿಲವಾಗಿ ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿವೆ. ಖಾಸಗಿಯ 50 ಶಾಲೆಗಳ ಪೈಕಿ 30 ಕ್ಕೂ ಹೆಚ್ಚು ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯಗಳಿಲ್ಲದೆ ಹಾಗೂ ವ್ಯವಸ್ಥಿತವಾದ ಶೌಚಾಲಯಗಳಿಲ್ಲದೆ ವಿದ್ಯಾರ್ಥಿಗಳು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇನ್ನು 18 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯದ ಜೊತೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದಾಗಿದೆ. 50 ಕ್ಕೂ ಹೆಚ್ಚು ಶಾಲೆಗಳಲ್ಲಿ ಬಾಲಕ ಮತ್ತು ಬಾಲಕಿಯರ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯಿಲ್ಲದೆ, ಸಾವಿರಾರು ವಿದ್ಯಾರ್ಥಿಗಳು ಬಯಲು ಶೌಚಾಲಯವನ್ನೆ ಬಳಸುತ್ತಿರುವುದು ತಾಲ್ಲೂಕಿನ ಅಧಿಕಾರಿಗಳ ನಿರ್¯ಕ್ಷ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.

          ಇನ್ನಾದರು ಇಷ್ಟು ಸಮಸ್ಯೆ ಹೊತ್ತ ಕೊರಟಗೆರೆ ತಾಲ್ಲೂಕಿನ ಶೌಚಾಲಯಗಳ ಸಮಸ್ಯೆಯ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಜಿಪಂ ಸಿಇಒ, ಕೊರಟಗೆರೆ ಪಟ್ಟಣ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸಿ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಜಯರಾಮ್, ಗ್ರಾಪಂ ಸದಸ್ಯ, ಹೊಳವನಹಳ್ಳಿ.

        ಪ್ರತಿನಿತ್ಯ ನೂರಾರು ಜನ ಗ್ರಾಮೀಣ ಪ್ರದೇಶದಿಂದ ಹಲವು ಕಾರ್ಯನಿಮಿತ್ತ ಸರ್ಕಾರಿ ಕಚೇರಿಗಳಿಗೆ ಪಟ್ಟಣಕ್ಕೆ ಬರುತ್ತಾರೆ. ಅವರಿಗೆ ಸಮರ್ಪಕ ಶೌಚಾಲಯವಿಲ್ಲದೆ ಬಯಲು ಬಳಕೆ, ಇಲ್ಲವೆ ಸರ್ಕಾರಿ ಕಚೇರಿಗಳ ತೆರೆಮರೆ ಜಾಗ ಹುಡುಕುವ ಪರಿಸ್ಥಿತಿಯು ತಾಲ್ಲೂಕ್ ಮಟ್ಟದ ಕಚೇರಿಗಳ ಬಳಿ ನಿರ್ಮಾಣವಾಗಿರುವುದು ವಿಷಾದನೀಯ ಸಂಗತಿಯಾಗಿದೆ. ಮಹಿಳೆಯರು ಶೌಚಾಲಯಗಳಿಲ್ಲದೆ ಅನೇಕ ಬಾರಿ ದುರಸ್ಥಿಯಲ್ಲಿರುವ ಶೌಚಾಲಯಗಳನ್ನೆ ಬಳಸಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ದ ಶಾಪ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಬೇಸರದ ಸಂಗತಿಯಾಗಿದೆ.

ನಂಜುಂಡಯ್ಯ, ತಾಲ್ಲೂಕ್ ಅಹಿಂದ ಅಧ್ಯಕ್ಷ, ಕೊರಟಗೆರೆ.

        ಧಾರ್ಮಿಕ ಕ್ಷೇತ್ರಗಳಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ವಡ್ಡಗೆರೆ ವೀರನಾಗಮ್ಮ ದೇವಸ್ಥಾನ, ಸಿದ್ದರಬೆಟ್ಟದ ಸಿದ್ದೇಶ್ವರ ಸನ್ನಿಧಿ ಸೇರಿದಂತೆ, ತಾಲ್ಲೂಕಿನ ಹತ್ತು ಹಲವು ಧಾರ್ಮಿಕ ಕ್ಷೇತ್ರಗಳಲ್ಲಿ ಮುಜರಾಯಿ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯದಿಂದ ಲ ತರ ರೂ. ವೆಚ್ಚದಲ್ಲಿ ಶೌಚಾಲಯಗಳ ನಿರ್ಮಾಣವಾಗಿವೆ. ಆದರೆ ನಿರ್ವಹಣೆಯ ಲೋಪದಿಂದ ಶೌಚಾಲಯಗಳು ಪಾಳು ಬಿದ್ದು, ಭಕ್ತಾದಿಗಳ ಬಳಕೆಗೆ ಬಾರದೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ರಾಜ್ಯದ ವಿವಿಧ ಭಾಗಗಳಿಂದ ಬಂದ ಭಕ್ತಾದಿಗಳು ಬೇಸರ ವ್ಯಕ್ತಪಡಿಸುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link