ಬೆಂಗಳೂರು
ರಾಜ್ಯಾದ್ಯಂತ ಕುಡಿಯುವ ನೀರಿನ ಕೊರತೆಯನ್ನು ನೀಗಿಸುವ ಸಲುವಾಗಿ ಬ್ಯಾರೇಜ್ ಮತ್ತು ಆಣೆಕಟ್ಟುಗಳನ್ನು ಕಟ್ಟಲು 3000 ಕೋಟಿ ರೂ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು,ಬಜೆಟ್‍ನಲ್ಲಿ ಸಣ್ಣ ನೀರಾವರಿ ಇಲಾಖೆಗೆ ಎರಡು ಸಾವಿರ ಕೋಟಿ ರೂಗಳಷ್ಟು ಅನುದಾನ ನೀಡಿದ್ದು,ಈಗ ರಾಜ್ಯಾದ್ಯಂತ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗುವಂತೆ ನೀರು ಸಂಗ್ರಹಿಸಲು ಆಣೆಕಟ್ಟುಗಳು ಮತ್ತು ಬ್ಯಾರೇಜುಗಳನ್ನು ನಿರ್ಮಿಸಬೇಕಾದ ಅಗತ್ಯವಿದೆ ಎಂದರು.
ಹೀಗಾಗಿ ಈಗಾಗಲೇ ಕೆರೆಗಳ ಅಭಿವೃದ್ಧಿಗೆ ಒದಗಿಸಿರುವ ಎರಡು ಸಾವಿರ ಕೋಟಿ ರೂಗಳ ಜತೆ ಹೆಚ್ಚುವರಿಯಾಗಿ ಮೂರು ಸಾವಿರ ಕೋಟಿ ರೂ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 3600 ಕೆರೆಗಳಿದ್ದು ಇವುಗಳಲ್ಲಿರುವ ಹೂಳನ್ನೆತ್ತಲು ಕೆರೆ ಸಂಜೀವಿನಿ ಕಾರ್ಯಕ್ರಮದಡಿ ಕ್ರಮ ಕೈಗೊಳ್ಳಲಾಗಿದೆ.ಹಾಗೆಯೇ ಇದಕ್ಕೆ ಪೂರ್ವಭಾವಿಯಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಎಲ್ಲ ಜಿಲ್ಲಾಧಿಕಾರಿಗಳಿಗೂ ಆದೇಶ ನೀಡಿ ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಕೆರೆಗಳ ವ್ಯಾಪ್ತಿ,ಅಚ್ಚುಕಟ್ಟು ಪ್ರದೇಶವನ್ನು ಗುರುತಿಸಿ ಒತ್ತುವರಿಯಾಗಿದ್ದರೆ ತೆರವು ಮಾಡಿಸಲು ಹೇಳಲಾಗಿದೆ.
ಅದೇ ರೀತಿ ಕೆರೆ ಸಹಕಾರ ಸಂಘಗಳನ್ನು ಸಕ್ರಿಯಗೊಳಿಸುವ ಕಾರ್ಯ ನಡೆದಿದ್ದು ಒಂದು ವೇಳೆ ನಿಮ್ಮ ವ್ಯಾಪ್ತಿಯಲ್ಲಿ ಯಾವುದಾದರೂ ಕೆರೆ ಭೂಮಿ ಒತ್ತುವರಿಯಾಗಿದ್ದರೆ,ಕಲ್ಮಶಗೊಳಿಸುವ ಕೆಲಸ ನಡೆದಿದ್ದರೆ ತಕ್ಷಣ ಮಾಹಿತಿ ನೀಡುವಂತೆ ಅವುಗಳಿಗೆ ಸೂಚಿಸಲಾಗಿದೆ.
ಇಂತಹ ನಿರ್ವಹಣೆಗಾಗಿಯೇ ಪ್ರತಿ ಕೆರೆ ಸಹಕಾರ ಸಂಘಗಳಿಗೆ ಐದರಿಂದ ಹತ್ತು ಸಾವಿರ ಕೋಟಿ ರೂಗಳನ್ನು ಒದಗಿಸಲಾಗಿದ್ದು ಒಟ್ಟಾರೆ ಎಂಟು ಕೋಟಿ ರೂಗಳನ್ನು ಬಿಡುಗಡೆ ಮಾಡಿರುವುದಾಗಿ ಅವರು ವಿವರ ನೀಡಿದರು.
ಮೈಸೂರಿನ ಹೆಬ್ಬಾಳ ಕೆರೆಯನ್ನು ಹದಿನೈದು ಕೋಟಿ ರೂಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಇನ್‍ಫೋಸಿಸ್ ಪ್ರಸ್ತಾವನೆ ಸಲ್ಲಿಸಿದ್ದು ಇದೇ ರೀತಿ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಹಲವು ಖಾಸಗಿ ಕಂಪನಿಗಳು ಮುಂದೆ ಬಂದಿವೆ ಎಂದು ನುಡಿದರು.
ಕೆರೆ ಒತ್ತುವರಿ ಸಂಬಂಧ ಈಗಾಗಲೇ ಕೆ.ಬಿ.ಕೋಳಿವಾಡ್ ಅಧ್ಯಕ್ಷತೆಯ ಸಮಿತಿ ನೀಡಿದ ವರದಿಯಲ್ಲದೆ,ಹಿಂದೆ ಎ.ಟಿ.ರಾಮಸ್ವಾಮಿ ಸಮಿತಿ ನೀಡಿದ್ದ ವರದಿಯನ್ನೂ ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮೂರು ಸುತ್ತಿನ ಸಭೆಗಳನ್ನು ನಡೆಸಲಾಗಿದೆ.
ಹೀಗಾಗಿ ಯಾವುದೇ ಕ್ಷಣದಲ್ಲಿ ಕೆರೆ ಭೂಮಿಯ ಒತ್ತುವರಿ ತೆರವು ಕಾರ್ಯ ಆರಂಭವಾಗಲಿದ್ದು ಅಭಿವೃದ್ಧಿ ಯೋಜನೆಗಳಿಗಾಗಿ ಸರ್ಕಾರ ಮಂಜೂರು ಮಾಡಿದ ಜಾಗವನ್ನು ಹೊರತುಪಡಿಸಿ ಸ್ವಂತಕ್ಕೆ ಕೆರೆ ಭೂಮಿಯನ್ನು ಒತ್ತುವರಿ ಮಾಡಿರುವ ಪ್ರಭಾವಿಗಳ ಕೈಲಿರುವ ಭೂಮಿಯನ್ನು ಯಾವ ಮುಲಾಜೂ ಇಲ್ಲದೆ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದರು.
ಕೆರೆ ಒತ್ತುವರಿಯನ್ನು ತೆರವುಗೊಳಿಸಲು ವಿಧಾನಮಂಡಲದಲ್ಲಿ ಕಾನೂನು ಅಂಗೀಕರಿಸಿದ್ದು ಇದಕ್ಕೆ ಪೂರಕವಾಗಿ ನಿಯಾಮಗಳಿಗಳನ್ನು ರೂಪಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟ ಪಡಿಸಿದರು.
ಇಷ್ಟಾದರೂ ಚುನಾವಣೆಗಳು ಸೇರಿದಂತೆ ಮೂರ್ನಾಲ್ಕು ತಿಂಗಳುಗಳ ಕಾಲ ನೀತಿ ಸಂಹಿತೆ ಅಡ್ಡಿ ಬಂದಿದ್ದರಿಂದ ಕೆರೆ ಭೂಮಿ ಒತ್ತುವರಿ ಕಾರ್ಯ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಲಿಲ್ಲ.ಆದರೆ ಇನ್ನು ಈ ವಿಷಯದಲ್ಲಿ ತಡ ಮಾಡುವ ಪ್ರಶ್ನೆಯಿಲ್ಲ ಎಂದು ಹೇಳಿದರು.
ಈ ಮಧ್ಯೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿ ಪಡಿಸುವಂತೆ ಆಯಾ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದ್ದು ಉಳಿದಂತೆ ಸಣ್ಣ ನೀರಾವರಿ ಇಲಾಖೆಯೇ ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆರೆ ಸಹಕಾರ ಸಂಘಗಳ ನೆರವಿನಿಂದ ಕೆರೆಗಳನ್ನು ಅಭಿವೃದ್ಧಿಪಡಿಸಲಿದೆ ಎಂದು ವಿವರಿಸಿದರು.
ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಎಷ್ಟೇ ಹಣದ ಅಗತ್ಯ ಬಿದ್ದರೂ ಸರ್ಕಾರ ಅದನ್ನು ಒದಗಿಸಲಿದೆ ಎಂದ ಅವರು,ಯಾವ ಕಾರಣಕ್ಕೂ ಬೇಡಿಕೆಗಿಂತ ಕಡಿಮೆ ಹಣ ಒದಗಿಸುವ ಪ್ರಶ್ನೆಯೇ ಇಲ್ಲ ಎಂದರು.
ಈ ಹಿಂದೆ ಜಲ ಸಂವರ್ಧನ ಯೋಜನೆಯಡಿಯಲ್ಲಿ ಕೆರೆಗಳ ಹೂಳೆತ್ತಲು ವಿಶ್ವಬ್ಯಾಂಕ್ ನೆರವಿನಡಿ ಸಾವಿರ ಕೋಟಿ ರೂಗಳಿಗೆ ಹೆಚ್ಚಿನ ಹಣ ಪಡೆಯಲಾಗಿತ್ತು.ಆದರೆ ಆ ಹಣ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂಬ ದೂರುಗಳಿದ್ದು ತ್ವರಿತವಾಗಿ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








