ಕೆಎಲ್‍ಇ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ

ಹಾನಗಲ್ಲ :

         ಕೆಎಲ್‍ಇ ಎಂಬ ಶೈಕ್ಷಣಿಕ ಸಂಸ್ಥೆ ಗ್ರಾಮೀಣ ಮಕ್ಕಳ ಶೈಕ್ಷಣಿಕ ಉನ್ನತಿಗೆ ಮೊದಲ ಆದ್ಯತೆಯಾಗಿ ನೀಡಿದ ಸೇವೆ, ಸಂಸ್ಥೆ ಕಟ್ಟಿ ಬೆಳೆಸಿದ ಸಪ್ತರ್ಷಿಗಳ ಶ್ರಮದ ಸಾರ್ಥಕತೆ ಶೈಕ್ಷಣಿಕ ಲೋಕದಲ್ಲಿ ಮಾದರಿಯಾಗಿರುವಂತಹದ್ದು ಎಂದು ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ನುಡಿದರು.

         ಮಂಗಳವಾರ ಹಾನಗಲ್ಲಿನ ಕೆಎಲ್‍ಇ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಕೆಎಲ್‍ಇ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಆಂಗವಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸಪ್ತರ್ಷಿಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಧನ ಸಂಪತ್ತಿಗಿಂತ ವಿದ್ಯಾ ಸಂಪತ್ತು ನೀಡುವ ಮೂಲಕ ಸದೃಢ ವ್ಯವಸ್ಥೆಯನ್ನು ಕಟ್ಟುವಲ್ಲಿ ಸರಕಾರಿ ವ್ಯವಸ್ಥೆಗಿಂತ ಭಿನ್ನವಾಗಿ ಕೆಎಲ್‍ಇ ಸಂಸ್ಥೆ ಯಶಸ್ವಿಯಾಗಿದೆ.

          ಕೇವಲ ಪಟ್ಟಣ ಪ್ರದೇಶಗಳಿಗೆ ಸೀಮಿತವಾಗದೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾ ಸಂಸ್ಥೆ ತೆರೆಯುವ ಮೂಲಕ ಬಡ ಹಿಂದುಳಿದ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸಿದೆ. ವಿದೇಶಗಳಲ್ಲಿಯೂ ವಿದ್ಯಾ ಸಂಸ್ಥೆ ಆರಂಭಿಸಿರುವ ಕೆಎಲ್‍ಇ ಈಗ ಜಗತ್ತಿನೆಲ್ಲೆಡೆ ಶೈಕ್ಷಣಿಕ ದಾಪುಗಾಲು ಹಾಕುವ ಇಚ್ಛಾಶಕ್ತಿ ಹೊಂದಿರುವುದು ಒಂದು ಹೆಮ್ಮೆಯ ಸಂಗತಿಯಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳು, ಯುವ ಸಮುದಾಯಕ್ಕೆ ಅತ್ಯುತ್ತಮ ಅವಕಾಶಗಳನ್ನು ನೀಡಿ ಬದುಕಿನ ಪಥಕ್ಕೆ ಬೆನ್ನು ತಟ್ಟಿದ ಈ ಕೆಎಲ್‍ಇ ಸಾರ್ಥಕತೆಯ ಉತ್ತುಂಗದಲ್ಲಿದೆ ಎಂದರು.

            ನೂರಾರು ಶಿಕ್ಷಣ ಸಂಸ್ಥೆಗಳು, ಲಕ್ಷಾಂತರ ವಿದ್ಯಾರ್ಥಿಗಳು, ಸಾವಿರಾರು ಬೋಧಕ ಸಿಬ್ಬಂದಿ ಈ ಸಂಸ್ಥೆಯ ಮೂಲಕ ಶೈಕ್ಷಣಿಕ ಸೇವೆ ನಡೆದಿದೆ. ವೈದ್ಯಕೀಯ, ಇಂಜನಿಯರಿಂಗ್ ಕ್ಷೇತ್ರದಲ್ಲಿಯೂ ಮಾದರಿಯಾಗಿರುವ ಈ ಸಂಸ್ಥೆಯು ಸಪ್ತರ್ಷಿಗಳಾದ ಜಿ.ಎಸ್.ಹಂಚಿನಾಳ, ಎಸ್.ಎಫ್.ಕಟ್ಟಿಮನಿ, ಬಿ.ಜಿ.ಮಮದಾಪುರ, ಎಂ.ಆರ್.ಸಾಖರೆ, ಎಸ್.ಎಸ್.ಬಸವನಾಳ, ಟಿ.ಆರ್.ಚಿಕ್ಕೋಡಿ, ವಿ.ವಿ.ಪಾಟೀಲ ಹಾಗೂ ಮಹಾದಾನಿಗಳಾದ ಲಿಂಗರಾಜ ಸರದೇಸಾಯಿ, ಸರದಾರ ರಾಜಾ ಲಖಮನಗೌಡ ಸರದೇಸಾಯಿ. ಬಿ.ವಿ..ಭೂಮರಡ್ಡರ ಅವರ ಸೇವೆ ಸಾರ್ಥಕವಾಗಿದೆ. ಸಂಸ್ಥೆಯನ್ನು ಹುಟ್ಟು ಹಾಕಿದ ಸರದಾರ ವಿ.ಜಿ.ನಾಯಕ ಬಹದ್ದೂರ ದೇಸಾಯಿ, ರಾವಬಹಾದ್ದೂರ ಅರಟಾಳ ರುದ್ರಗೌಡ್ರು, ರಾವಬಹದ್ದುರ ವಿ.ವಿ.ಅನಿಗೋಳ ಅವರ ದಾನ, ಸೇವಾ ಶ್ರೇಷ್ಟ ನಡೆ ದೂರದೃಷ್ಠಿಯಿಂದ ಶೈಕ್ಷಣಿಕ ಫಲ ನೀಡಿದೆ ಎಂದರು.

            ಪ್ರಾಚಾರ್ಯ ಎಸ್.ಎಸ್.ಉರಣಕರ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಬದುಕು ತಾವು ಶಿಕ್ಷಣ ಪಡೆದ ಸಂಸ್ಥೆಯ, ಗುರುಗಳನ್ನು ಮರೆಯಬಾರದು. ಜೀವನಕ್ಕೆ ಬೆಳಕು ತೋರಿದವರನ್ನು ನೆನೆಯಬೇಕು. ನಾನು ಒಳ್ಳೆಯವನಾದರೆ ನಾಡೆಲ್ಲ ಒಳ್ಳೆಯದು, ಅಂಥ ಒಳ್ಳೆಯತನವನ್ನು ಇಂಥ ಮಹಾತ್ಮರ ಜೀವನಾದರ್ಶದ ಮೂಲಕ ಅರಿಯಬೇಕು. ಹಾನಗಲ್ಲಿನಂತಹ ಗ್ರಾಮೀಣ ಪ್ರದೇಶದಲ್ಲಿ ಕೆ.ಎಲ್.ಇ ಶಿಕ್ಷಣ ಸಂಸ್ಥೆ ತೆರೆದು ಪ್ರತಿಭಾವಂತ ಮಕ್ಕಳಿಗೆ ಒಳ್ಳೆಯ ಅವಕಾಶ ನೀಡಿರುವುದು ಅಭಿನಂದನೀಯ ಕಾರ್ಯ ಎಂದರು.ಮುಖ್ಯ ಅತಿಥಿಗಳಾಗಿ ಉಪನ್ಯಾಸಕರಾದ ಗುಡದಯ್ಯ, ಕೆ.ಎಸ್.ಅಜಿತಕುಮಾರ, ಶಿವಕುಮರ ಯತ್ತಿನಹಳ್ಳಿ, ಮಂಜುನಾಥ, ಹೊನ್ನಪ್ಪ ಭೋವಿ, ಮಹಮ್ಮದ್‍ರಫಿಕ್ ಹೊಸೂರ, ಚೇತನ್ ನಾಗಜ್ಜನವರ ಪಾಲ್ಗೊಂಡಿದ್ದರು.ವರ್ಷಿಣಿ ಹಾಗೂ ರಾಧಿಕಾ ಪ್ರಾರ್ಥನೆ ಹಾಡಿದರು. ಸಂಪತ್‍ಕುಮಾರ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link