ದಾವಣಗೆರೆ
2019 ರ ಜನವರಿ 25 ರ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಯುವ ಮತದಾರರದಲ್ಲಿ ಚುನಾವಣೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ 9 ನೇ ತರಗತಿ ಮೇಲ್ಪಟ್ಟ, ಪದವಿಪೂರ್ವ, ಪಾಲಿಟೆಕ್ನಿಕ್, ಪದವಿ, ಸ್ನಾತಕೋತ್ತರ ಹಾಗೂ ಆಟ್ರ್ಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಬಂಧ ರಚನೆ, ಕ್ವಿಜ್, ಪೋಸ್ಟರ್ ರಚನೆಯಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಹೇಳಿದರು.
ರಾಷ್ಟ್ರೀಯ ಮತದಾರರ ದಿನಾಚರಣೆ ಮತ್ತು ಭಾವಚಿತ್ರವಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲು ಜಿಲ್ಲಾಡಳಿತ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಚುನಾವಣಾಧಿಕಾರಿಗಳ ಆದೇಶದ ಮೇರೆಗೆ 9 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಚುನಾವಣೆ ಕುರಿತು ಒಟ್ಟು 3 ವಿಷಯಗಳನ್ನು ನೀಡಿ ಪ್ರಬಂಧ ಸ್ಪರ್ಧೆ, ಪದವಿಪೂರ್ವ ಕಾಲೇಜಿನ ಮಕ್ಕಳಿಗೆ 7 ವಿಷಯಗಳನ್ನು ನೀಡಿ ಪ್ರಬಂಧ ಸ್ಪರ್ಧೆ, ಪದವಿ, ತಾಂತ್ರಿಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 6 ವಿಷಯಗಳನ್ನು ನೀಡಿ ಪ್ರಬಂಧ ಸ್ಪರ್ಧೆಗಳನ್ನು ಹಾಗೂ ಆಟ್ರ್ಸ್ ಮತ್ತು ಡ್ರಾಯಿಂಗ್ ಶಾಲಾ ಮಕ್ಕಳಿಗೆ ಕೊಲ್ಯಾಜ್ ಮತ್ತು ಕ್ವಿಜ್ ಎಲ್ಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲು ಸೂಚಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನಕ್ಕೆ ರೂ. 750, ಎರಡನೇ ಬಹುಮಾನಕ್ಕೆ ರೂ.500 ಮತ್ತು ಮೂರನೇ ಬಹುಮಾನಕ್ಕೆ ರೂ. 250 ಗಳನ್ನೊಳಗೊಂಡಂತೆ ಪುಸ್ತಕಗಳನ್ನು ನೀಡಲು ಸೂಚಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಈ ಸ್ಪರ್ಧೆಗಳನ್ನು ನಡೆಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಒಬ್ಬ ವಿದ್ಯಾರ್ಥಿಯನ್ನು ರಾಜ್ಯಮಟ್ಟದಲ್ಲಿ ನಡೆಯುವ ಸ್ಪರ್ಧಾತ್ಮಕ ಚಟುವಟಿಕೆಗೆ ಅವಕಾಶ ನೀಡಲಾಗುತ್ತದೆ.
ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ಕ್ರಮ ಜರುಗಿಸಬೇಕು. ಮುಖ್ಯ ಚುನಾವಣಾ ಕಚೇರಿಯ ಸುತ್ತೋಲೆಯಲ್ಲಿ ಈಗಾಗಲೇ ಪ್ರಬಂಧ, ಕ್ವಿಜ್, ಕೊಲ್ಯಾಜ್ ವಿಷಯಗಳು ಮತ್ತು ವೇಳಾಪಟ್ಟಿಯನ್ನು ನಿಗದಿಪಡಿಸಿರುವಂತೆ ನವೆಂಬರ್ ಮಾಹೆಯಲ್ಲಿ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಶಾಲಾ ಮತ್ತು ಕಾಲೇಜು ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರಾರಂಭಿಸಬೇಕು. ಅಲ್ಲಿ ಆಯ್ಕೆಯಾದ ಮಕ್ಕಳ ವಿವರಗಳನ್ನು ಜಿಲ್ಲಾ ಮಟ್ಟದಲ್ಲಿ ಪಡೆದು ಡಿಸೆಂಬರ್ 2 ನೇ ವಾರದಲ್ಲಿ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ನಡೆಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಚುನಾವಣಾ ಸಾಕ್ಷರತಾ ಕ್ಲಬ್: ಯುವ ಮತದಾರರಲ್ಲಿ ಚುನಾವಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಜಿಲೆಯ ಪ್ರತಿ ಕಾಲೇಜುಗಳಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳನ್ನೊಳಗೊಂಡ ಚುನಾವಣಾ ಸಾಕ್ಷರತಾ ಕ್ಲಬ್(ಎಲೆಕ್ಷನ್ ಲಿಟರೆಸಿ ಕ್ಲಬ್)ಗಳನ್ನು ಕಡ್ಡಾಯವಾಗಿ ರಚಿಸಬೇಕು. ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸಮಾಜ ವಿಜ್ಞಾನದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನೊಳಗೊಂಡ ಚುನಾವಣಾ ಪಾಠಶಾಲೆಗಳನ್ನು ರಚಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಚುನಾವಣಾ ತಹಶೀಲ್ದಾರ್ ಎಸ್.ಎ.ಪ್ರಸಾದ್ ಮಾತನಾಡಿ, ಅರ್ಹತಾ ದಿನಾಂಕ 01-01-2019 ಕ್ಕೆ ಸಂಬಂಧಿಸಿದಂತೆ ಭಾವಚಿತ್ರವಿರುವ ಮತದಾರರ ಪಟ್ಟಿಗಳ ವಿಶೆಷ ಸಂಕ್ಷಿಪ್ತ ಸಮಗ್ರ ಸ್ವರೂಪದ ಪರಿಷ್ಕರಣೆ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ. ಅ. 10 ರಿಂದ ನವೆಂಬರ್ 20 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಕಾಲಾವಧಿಯಾಗಿರುತ್ತದೆ. ಡಿಸೆಂಬರ್ 21 ರೊಳಗೆ ಹ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ ಮಾಡುವುದು. 2019 ರ ಜ.3 ರೊಳಗೆ ಡಾಟಾಬೇಸ್ ಅಪ್ಡೇಟ್ ಮಾಡಿ ಪೂರಕಗಳನ್ನು ಮುದ್ರಿಸುವುದು. 2019 ರ ಜ. 4 ಕ್ಕೆ ಛಾಯಾಚಿತ್ರಸಹಿತ ಮತದಾರರ ಪಟ್ಟಿಯ ಅಂತಿಮ ಪ್ರಕಟಣೆ ಮಾಡಲಾಗುವುದು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನಮೂನೆ-6 ಹೆಸರು ತೆಗೆದುಹಾಕುವುದು/ಆಕ್ಷೇಪಣೆಗೆ ನಮೂನೆ-7 ತಿದ್ದುಪಡಿಗೆ ನಮೂನೆ-8 ಸ್ಥಳಾಂತರಕ್ಕೆ ನಮೂನೆ-8ಎ ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ನಾಗರೀಕರು ಹೆಸರು ಸೇರ್ಪಡೆಗೆ ನಮೂನೆ-6ಎ ಆಗಿದ್ದು, ಬೂತ್ಮಟ್ಟದ ಅಧಿಕಾರಿಗಳಲ್ಲಿಯೂ ಸಹ ಅರ್ಜಿ ಪಡೆದು ನಿಗದಿತ ದಿನಾಂಕದೊಳಗೆ ಪರಿಷ್ಕರಿಸಿಕೊಳ್ಳಬಹುದು.
ಅರ್ಜಿಗಳನ್ನು ಆನ್ಲೈನ್ ಮುಖಾಂತರ ಸಲ್ಲಿಸಬಹುದು. ವಿದೇಶಗಳಲ್ಲಿ ಉದ್ಯೋಗ/ಶಿಕ್ಷಣದ ನಿಮಿತ್ತ ನೆಲೆಸಿರುವ ಭಾರತೀಯ ಪ್ರಜೆಗಳಿಗೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ನಮೂನೆ-6ಎ ರಲ್ಲಿ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ಮತದಾರರ ನೋಂದಣಾಧಿಕಾರಿಗಳಿಗೆ ಅಂಚೆ/ಆನ್ಲೈನ್ ಮೂಲಕ ಸಲ್ಲಿಸಿ, ಹೆಸರನ್ನು ನೋಂದಾಯಿಸಿಕೊಳ್ಳಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಭಾರತ ಚುನಾವಣಾ ಆಯೋಗದ ವೆಬ್ಸೈಟ್ ಮತ್ತು ಮುಖ್ಯ ಚುನಾವಣಾಧಿಕಾರಿಗಳ ವೆಬ್ಸೈಟ್ ಸಂಪರ್ಕಿಸಬಹುದೆಂದು ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯಸ್ಥರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ