ಚಿತ್ರದುರ್ಗ:
ನಗರೋತ್ಥಾನ ಯೋಜನೆಯಡಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಟೆಂಡರ್ ನಿಬಂಧನೆಯಂತೆ ಗುಣಮಟ್ಟದ ರಸ್ತೆ ಮಾಡಲಾಗುವುದು. ಕಾಮಗಾರಿಯಲ್ಲಿ ಎಲ್ಲಿಯೂ ಲೋಪವಾಗದಂತೆ ನೋಡಿಕೊಳ್ಳುವುದು ಸಾರ್ವಜನಿಕರ ಹಾಗೂ ಇಂಜಿನಿಯರ್ಗಳ ಜವಾಬ್ದಾರಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ಐಶ್ವರ್ಯಫೋರ್ಟ್ ಪಕ್ಕದಲ್ಲಿ ನಗರೋತ್ಥಾನ ಯೋಜನೆಯಡಿ ಎಂಬತ್ತು ಲಕ್ಷ ರೂ.ಗಳ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಐಶ್ವರ್ಯಫೋರ್ಟ್ ಪಕ್ಕದ ರಸ್ತೆಯಿಂದ ಏರೋಪ್ಲೇನ್ ಬಿಲ್ಡಿಂಗ್, ಹೊರಪೇಟೆ, ಮಟನ್ಮಾರ್ಕೆಟ್ ರಸ್ತೆ, ಸಂತೆಹೊಂಡದ ಹಿಂಭಾಗವಿರುವ ಗುಜರಿ ಅಂಗಡಿ ಸಮೀಪದ ರಸ್ತೆಯಿಂದ ಮೆದೇಹಳ್ಳಿಗೆ ರಸ್ತೆಗೆ ಕೂಡಲಿದೆ. ಗುರುವಾರ ಬಾಬಣ್ಣ ಗ್ಯಾರೇಜ್ ಬಳಿ 40 ಲಕ್ಷ ರೂ.ವೆಚ್ಚದಲ್ಲಿ ಮೂರು ರಸ್ತೆ, ಯೂನಿಟಿ ಹೆಲ್ತ್ ಕಾಂಪ್ಲೆಕ್ಸ್ ಸಮೀಪದಿಂದ ಎಸ್.ಪಿ.ಕಚೇರಿ ಮುಂಭಾದಿಂದ ಸಿ.ಕೆ.ಪುರಕ್ಕೆ ಹೋಗುವ ಗಣೇಶ ದೇವಸ್ಥಾನದ ರಸ್ತೆಯನ್ನು ಅರವತ್ತು ಲಕ್ಷ ರೂ.ವೆಚ್ಚದಲ್ಲಿ ಡಾಂಬರೀಕರಣಗೊಳಿಸಲಾಗುವುದು ಎಂದರು.
ನಗರೋತ್ಥಾನ ಯೋಜನೆಯಡಿ ಬರುವ ರಸ್ತೆಗಳನ್ನು ಗುತ್ತಿಗೆದಾರರು ಅಗೆಯುತ್ತಿರುವುದನ್ನು ನೋಡಿಕೊಂಡು ಇನ್ನು ಮುಂದೆ ಸಹಿಸುವುದಿಲ್ಲ. ಅಗೆದಿರುವ ರಸ್ತೆಗಳನ್ನು ಮೊದಲು ಸರಿಪಡಿಸಿ ಬೇರೆ ರಸ್ತೆಗಳಿಗೆ ಕೈಹಾಕುವಂತೆ ಈಗಾಗಲೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ನಗರಸಭೆ ಇಂಜಿನಿಯರ್ಗಳು ಎಲ್ಲಿಯೂ ರಸ್ತೆಗಳನ್ನು ಅಗೆಯಲು ಬಿಡಬೇಡಿ ಕಚೇರಿಯಲ್ಲಿ ಕುಳಿತು ಕಾಲಕಳೆಯುವ ಬದಲು ನಗರದಲ್ಲಿ ಗಸ್ತು ತಿರುಗಿ ರಸ್ತೆಗಳು ಹಾಳಾಗದಂತೆ ನೋಡಿಕೊಳ್ಳಲು ಹೇಳಿದ್ದೇನೆ ಎಂದು ತಿಳಿಸಿದರು.
ರಸ್ತೆ ಡಾಂಬರೀಕರಣ ಕೇಂದ್ರ ಸರ್ಕಾರದ ವ್ಯವಸ್ಥೆಯಾಗಿರುವುದರಿಂದ ನಿಯಮದ ಪ್ರಕಾರವೇ ಮಾಡಬೇಕು. ನಗರದ ಕೆಲವು ಏರಿಯಾಗಳಲ್ಲಿ ಮನೆ ಮುಂದೆ ಚರಂಡಿ ಇದೆ, ನೀರಿನ ತೊಟ್ಟಿ ಕಟ್ಟಿಸಿದ್ದೇವೆ. ಹಾಗಾಗಿ ರಸ್ತೆಯನ್ನು ತುಂಬ ಅಗಲ ಮಾಡುವುದರಿಂದ ನಮಗೆ ತೊಂದರೆಯಾಗುತ್ತದೆಂದು ಸಾರ್ವಜನಿಕರು ತಗಾದೆ ತೆಗೆಯುತ್ತಿದ್ದಾರೆ. ಟೆಂಡರ್ನ ನಿಯಮದಂತೆ ಎಲ್ಲಿಯೂ ರಸ್ತೆಯ ವಿಸ್ತೀರ್ಣವನ್ನು ಕಡಿಮೆಗೊಳಿಸಲು ಬರುವುದಿಲ್ಲ. ಅದಕ್ಕಾಗಿ ನಾಗರೀಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗುಣಮಟ್ಟದ ರಸ್ತೆಗಳನ್ನು ಮಾಡುವಾಗ ಸಾರ್ವಜನಿಕರು ಹಾಗೂ ಇಂಜಿನಿಯರ್ಗಳು, ಅಧಿಕಾರಿಗಳು ಸಹಕರಿಸದಿದ್ದರೆ ಮುಂದೆಯೂ ಹದಗೆಟ್ಟ ರಸ್ತೆಗಳಲ್ಲಿ ಜನಸಾಮಾನ್ಯರು ಹಾಗೂ ವಾಹನ ಸವಾರರು ಸಂಚರಿಸಬೇಕಾಗುತ್ತದೆ. ಅದಕ್ಕಾಗಿ ಹಂತ ಹಂತವಾಗಿ ನಗರದ ಎಲ್ಲಾ ಕಡೆ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
ನಗರಸಭೆ ಸದಸ್ಯ ಸುರೇಶ್, ಐಶ್ವರ್ಯ ಫೋರ್ಟ್ನ ಅರುಣ್ಕುಮಾರ್, ಶರಣ್ಕುಮಾರ್, ಕಿರಣ್ಕುಮಾರ್, ನವೀನ್ಚಾಲುಕ್ಯ, ನಗರಸಭೆ ಸಹಾಯಕ ಇಂಜಿನಿಯರ್ ಕೃಷ್ಣಮೂರ್ತಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿಶಂಕರ್ ಹಾಗೂ ಗುತ್ತಿಗೆದಾರರು ಈ ಸಂದರ್ಭದಲ್ಲಿ ಹಾಜರಿದ್ದರು.
20 ಕೋಟಿಗೆ ಪ್ರಸ್ತಾವನೆ
ಜಿಲ್ಲಾಸ್ಪತ್ರೆಯಿಂದ ಮುಸ್ಟೂರು, ಕಡಬನಕಟ್ಟೆವರೆಗೆ ರಸ್ತೆ ಡಾಂಬರೀಕರಣಕ್ಕೆ ಇಪ್ಪತ್ತು ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.ತುರುವನೂರು ರಸ್ತೆಯಲ್ಲಿರುವ ಐಶ್ವರ್ಯಫೋರ್ಟ್ ಪಕ್ಕದಲ್ಲಿ ನಗರೋತ್ಥಾನ ಯೋಜನೆಯಡಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು
ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ಸಿಕ್ಕ ಕೂಡಲೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಿಂದ ವೆಂಕಟರಮಣಸ್ವಾಮಿ ದೇವಸ್ಥಾನದವರೆಗೆ ಡಬಲ್ ರಸ್ತೆ ಮಾಡುವ ಯೋಚನೆಯಿಟ್ಟುಕೊಂಡಿದ್ದೇನೆ.
ನಗರದಲ್ಲಿರುವ ರಸ್ತೆಗಳೆಲ್ಲಾ ಹದಗೆಟ್ಟು ಹೋಗಿರುವುದಕ್ಕೆ ನಾನೆ ಕಾರಣ ಎಂದು ಜನ ನನ್ನನ್ನು ಟೀಕಿಸುತ್ತಿದ್ದಾರೆ. ಆದ್ದರಿಂದ ಇನ್ನು ಮುಂದೆ ಎಲ್ಲಾ ಕಡೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಹೆಚ್ಚು ಗಮನ ಕೊಡುತ್ತೇನೆ. ಇಲ್ಲಿಯವರೆಗೂ ದೇವಸ್ಥಾನ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ಸಾಕಷ್ಟು ಹಣ ನೀಡಿದ್ದೇನೆ. ಒಂದು ಸಮುದಾಯಭವನದ ಮುಂಭಾಗವೂ ಯಾರು ಕಸ ಹೊಡೆದಿದ್ದನ್ನು ನಾನು ನೋಡಿಲ್ಲ. ಅದಕ್ಕಾಗಿ ದೇವಸ್ಥಾನ ಹಾಗೂ ಸಮುದಾಯಭವನಗಳಿಗೆ ನನ್ನ ಅನುದಾನ ನೀಡುವುದನ್ನು ನಿಲ್ಲಿಸಿ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡುತ್ತೇನೆಂದು ಆಶ್ವಾಸನೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








