ಬ್ಯಾಡಗಿ:
ಸಮಾಜದಲ್ಲಿ ಉಳ್ಳವರು ಮತ್ತು ಬಡವರ ನಡುವೆ ಸ್ಥರಗಳಿದ್ದು ಇವುಗಳ ಮದ್ಯೆ ದೊಡ್ಡ ಕಂದಕವೇ ಏರ್ಪಟ್ಟಿದೆ, ಆದರೆ ಬಡವರು, ನಿರ್ಗತಿಕರು ಹಾಗೂ ದೀನದಲಿತರ ಸಹಾಯ ಸಹಕಾರ ನೀಡುವುದೆಂದರೇ ಅದೂ ಸಹ ಒಂದರ್ಥದಲ್ಲಿ ದೇವರ ಸೇವೆಗೆ ಸಮಾನವಾದ ಕೆಲಸವೆಂದು ಉಳ್ಳವರು ಭಾವಿಸಿಕೊಳ್ಳುವುದು ಹೆಚ್ಚು ಸೂಕ್ತವೆಂದು ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸ್ನೇಹಸದನದಲ್ಲಿರುವ ನಿರ್ಗತಿಕ ಹಾಗೂ ಬಡ ಹೆಣ್ಣುಮಕ್ಕಳ ಕುಟೀರದಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮುದಾಯ ಅಭಿವೃದ್ಧಿ ಸಂಘವು ಆಯೋಜಿಸಿದ್ದ ‘ಸಹಸ್ರಾರ್ಜುನ ಜಯಂತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದಾರ್ಶನಿಕರು, ಶರಣರು, ವಿಶ್ವಕ್ಕೆ ಮಹಾನ್ ಸಂದೇಶಗಳನ್ನು ನೀಡಿದ್ದಾರಲ್ಲದೇ ಎಲ್ಲ ಸಮುದಾಯವನ್ನು ಅಪ್ಪಿಕೊಂಡಿದ್ದಾರೆ ಹೀಗಿದ್ದರೂ ಸಹ ಪುಣ್ಯ ಪುರುಷರ ಜಯಂತಿಗಳು ಸಂಬಂಧಿಸಿದ ಕೆಲ ಸಮುದಾಯಕ್ಕೆ ಸಿಮಿತವಾಗುತ್ತಿವೆಯಲ್ಲದೇ ಇನ್ನೂ ಕೆಲವು ಸಮಾಜದಲ್ಲಿ ವಿವಾದವನ್ನು ಸೃಷ್ಟಿಸುತ್ತಿರುವುದು ಖೇದದ ಸಂಗತಿ ಎಂದರು.
ಸೋಮವಂಶ ಸಹಸ್ರಾರ್ಜುನರು ರಾವಣನನ್ನು ಸಂಹಾರ ಮಾಡುವ ಕಾರ್ಯದಲ್ಲಿ ತೊಡಗಿದ್ಧಾಗಿ ಪ್ರತೀತಿ ಇದೆ, ಅಲ್ಲದೇ ಸಮಾಜದ ಕಲ್ಯಾಣ ಕ್ಕಾಗಿ ತಮ್ಮ ಜೀವನವನ್ನೇ ಮುಡುಪಿಟ್ಟಿದ್ದಾಗಿ ಉಲ್ಲೇಖಿಸಲಾಗಿದೆ, ರಾಜ ಕುಟುಂಬದ ಹಿನ್ನೆಲೆಯುಳ್ಳವರಾಗಿದ್ದ ಇವರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.
ಎಸ್ಎಸ್ಕೆ ತರುಣ ಸಂಘದ ಅಧ್ಯಕ್ಷ ಮಂಜುನಾಥ ಬದ್ದಿ ಮಾತನಾಡಿ, ಪ್ರಪ್ರಥಮ ಬಾರಿಗೆ ಬ್ಯಾಡಗಿಯಲ್ಲಿ ಸಹಸ್ರಾರ್ಜುನರ ಜಯಂತಿಯನ್ನು ಆಚರಿಸುತ್ತಿರುವುದು ಅತ್ಯಂತ ಸಂತೋಷ ತಂದಿದೆ. ಈ ಜಯಂತಿಯ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸ್ನೇಹ ಸದನದ ಸಿಸ್ಟರ್ ಮಾರಿತೆರೆಸ್ ರವರನ್ನು ಸನ್ಮಾನಿಸಲಾಯಿತು.
ಆಕಾಶವಾಣಿ ಕಲಾವಿದ ಬಾಬು ಕಲಬುರ್ಗಿ ಸೇರಿದಂತೆ ಸ್ನೇಹ ಸದನದ ಸಿಸ್ಟರ್ ಲೂಮೀನಾ, ಸಹನಾ, ಗ್ಲೋರಿಯಾ, ಎಸ್ಎಸ್ಕೆ ಸಮುದಾಯದ ಮುಖಂಡರಾದ ನಾರಾಯಣಸಾ ಕಾಟವಾ, ಅಂಬಸಾ ಕಾಟವಾ, ರಾಜು ಬದ್ಧಿ, ಪರುಶರಾಮ ಬದ್ಧಿ, ರಾಜುಸಾ ಕಾಟವಾ ಪಾಲ್ಗೊಂಡಿದ್ದರು. ಶ್ರೀಕಾಂತ ಬಗಾಡೆ ಸ್ವಾಗತಿಸಿ, ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ