ಬೆಂಗಳೂರು
ರಾಷ್ಟ್ರಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ’ ಮಹಾ ಕಾವ್ಯವನ್ನು ರಂಗರೂಪಕ್ಕೆ ಇಳಿಸಲಾಗಿದ್ದು ಇದೇ ನ.23ರಿಂದ ಎರಡು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ನಡೆಸಲು ಭರದ ಸಿದ್ದತೆಗಳು ನಡೆದಿವೆ.
ಅಯೋಧ್ಯೆ, ಕಿಷ್ಕಿಂಧೆ, ಲಂಕಾ ಸಂಸ್ಕೃತಿಗಳನ್ನು ಒಳಗೊಂಡ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ರಂಗಾಯಣದ ಹಿರಿಯ ಕಲಾವಿದರಾದ ಜಗದೀಶ್ ಮನವಾರ್ತೆ ಮತ್ತು ಕೃಷ್ಣಕುಮಾರ್ ನಾರ್ಣಕಜೆ ರಂಗರೂಪಕ್ಕಿಳಿಸಿದ್ದಾರೆ. ಹಿರಿಯ ರಂಗಕರ್ಮಿ ಕೆ.ಜಿ. ಮಹಾಬಲೇಶ್ವರ ಅವರು ಈ ನಾಟಕವನ್ನು ನಿರ್ದೇಶಿಸಿದ್ದು, ಭಾರತೀಯ ರಂಗಶಿಕ್ಷಣ ಕೇಂದ್ರದ ಶಿಕ್ಷಕ ಉಮೇಶ್ ಸಾಲಿಯಾನ್ ಸಹ ನಿರ್ದೇಶನ ಮಾಡಿದ್ದಾರೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಥಮ ಬಾರಿಗೆ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕಾವ್ಯದ ವಿಭಿನ್ನವಾದ ಸಂಸ್ಕೃತಿಗಳನ್ನು ಪ್ರೇಕ್ಷಕರ ಮನಮುಟ್ಟುವಂತೆ ಕಟ್ಟಿಕೊಡುವ ನಿಟ್ಟಿನಲ್ಲಿ ಈ ನಾಟಕ ಪ್ರದರ್ಶನಕ್ಕೆ ಮುಂದಾಗಿದೆ ಎಂದು ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಮಾಯಣ ದರ್ಶನಂ ಮಹಾಕಾವ್ಯ ಎಲ್ಲರೂ ಓದಿರುವುದಿಲ್ಲ ಅದರಿಂದಾಗಿ ರಂಗರೂಪಕ್ಕೆ ತರಲು ನಿರ್ಧರಿಸಿ, ರಂಗಾಯಣ ಕಲಾವಿದರೊಂದಿಗೆ ಚರ್ಚಿಸಿ, ರಂಗಕರ್ಮಿಗಳು ಮತ್ತಿತರರ ಸಲಹೆ, ಸೂಚನೆಗಳನ್ನು ಪಡೆದು ರಾಮಾಯಣ ದರ್ಶನಂ ಮಹಾಕಾವ್ಯವನ್ನು ರಂಗರೂಪಕ್ಕೆ ತರಲಾಗಿದೆ ಎಂದರು.
ನಾಟಕದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಅಯೋಧ್ಯೆ ಸಂಸ್ಕೃತಿಯನ್ನು ಯಕ್ಷಗಾನ ಹಾಗೂ ನಗಾರಿ, ಚಂಡೆ ಮಾದರಿಯಲ್ಲಿ ಪ್ರದರ್ಶಿಸಲಾಗುವುದು. ನಂತರ ಲಂಕಾ ಸಂಸ್ಕೃತಿಯನ್ನು ನಾಗಾಲ್ಯಾಂಡ್ ಹಾಗೂ ಚಾವು ಮಾದರಿಯಲ್ಲಿ ತೋರಿಸಲಾಗುತ್ತದೆ. ಅಲ್ಲದೆ, ಕಿಷ್ಕಿಂಧ ಸಂಸ್ಕೃತಿಯನ್ನು ಮಿಳಾವ್ ಹಾಗೂ ತಮಟೆಯ ವಾದ್ಯಗಳೊಂದಿಗೆ ಆರಂಭಿಸುವ ಮೂಲಕ ಭಿನ್ನವಾದ ಸಂಸ್ಕೃತಿಗಳ ಮೇಲೆ ಬೆಳಕು ಚೆಲ್ಲುವ ನೂತನ ಪ್ರಯೋಗ ಇದಾಗಿದೆ ಎಂದರು ತಿಳಿಸಿದರು.
ನಾಟಕದ ನಿರ್ದೇಶಕ ಕೆ.ಬಿ.ಮಹಾಬಲೇಶ್ವರ ಮಾತನಾಡಿ, ಈಗಾಗಲೇ ರನ್ನ, ಪಂಪ, ರಾಘವಾಂಕ ಎಲ್ಲರ ಮಹಾಕಾವ್ಯಗಳನ್ನು ರಂಗರೂಪಕ್ಕೆ ತರಲಾಗಿದೆ. ಈ ನಡುವೆ ರಾಮಾಯಣ ದರ್ಶನಂ ಮಹಾಕಾವ್ಯವನ್ನು ರಂಗರೂಪಕ್ಕೆ ತರುವ ಸಂದರ್ಭದ ಆರಂಭದಲ್ಲಿ ಆತಂಕ ಉಂಟಾಗಿತ್ತು. ಈ ಕೃತಿ ರಂಗರೂಪಕ್ಕೆ ತರುವುದು ನಿರ್ದೇಶಕನಿಗೆ ಸವಾಲಾಗಿ ಪರಿಣಮಿಸಿತ್ತು. ಜಗತ್ತಿನ ವಿವಿಧ ಧರ್ಮಗಳು, ಜಗತ್ತಿನ ವಿವಿಧ ವ್ಯಕ್ತಿಗಳ ದರ್ಶನವನ್ನು ಕಾಣಬಹುದಾಗಿದೆ ಎಂದರು.
ಜಗದೀಶ್ ಮನವಾರ್ತೆ ಮಾತನಾಡಿ, ಕೃತಿ, ಭಾಷೆಗೆ ಕುಂದು ಬಾರದಂತೆ ರಂಗರೂಪಕ್ಕೆ ತರಲಾಗಿದೆ. ಆದರೆ ಕುವೆಂಪು ಅವರ ಭಾಷೆಯನ್ನು ಎಲ್ಲಿಯೂ ಬಿಟ್ಟಿಲ್ಲ ಎಂದರು.. ನ.23 ಮತ್ತು 24 ರಂದು ಪ್ರತಿ ದಿನ ಸಂಜೆ 6 ಗಂಟೆಯಿಂದ ನಾಟಕ ಪ್ರದರ್ಶನ ಆರಂಭವಾಗಲಿದ್ದು, ಆಸಕ್ತರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಟಿಕೆಟ್ ಪಡೆದುಕೊಳ್ಳಬಹುದು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವೆ ಜಯಮಾಲ ಚಾಲನೆ ನೀಡಲಿದ್ದಾರೆ. ಬಳಿಕ ಮುಂದಿನ 2019ರ ಜನವರಿವರೆಗೂ ನಾಟಕ ಪ್ರದರ್ಶನವಾಗಲಿದೆ ಎಂದು ನುಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








