ಕೊಟ್ಟೂರು
ಸಂಪತ್ತು ನಿಮ್ಮನ್ನು ದೊಡ್ಡ ವ್ಯಕ್ತಿಯನ್ನಾಗಿಸುವುದಿಲ್ಲ. ಬದಲಾಗಿ ನಿಮ್ಮ ಸನ್ನಡೆತೆ, ಸದ್ಗುಣ ಮತ್ತು ಸಮಾಜಮುಖಿ ಕಾರ್ಯದಿಂದ ನಿಮ್ಮ ಹೆಸರು ಸಮಾಜದಲ್ಲಿ ಶಾಶ್ವತವಾಗಿರಲು ಸಾಧ್ಯವೆಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ನುಡಿದರು.
ಕೊಟ್ಟೂರು ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ಪಂಚಮಸಾಲಿ ಸಮಾಜ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮಾಜಿಯ 195ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಬಸವಣ್ಣ, ಬುದ್ದ, ಅಂಬೇಡ್ಕರ ಇನ್ನೂ ಮುಂತಾದವರು ಇವರ್ಯಾರು ತಮಗಾಗಿ ದುಡಿದವರಲ್ಲ. ಈ ಸಮಾಜದ ಏಳ್ಗೆಗಾಗಿ ಬದುಕಿದವರು ಆದ್ದರಿಂದ ಶತಮಾನ ಕಳೆದರೂ ಇವರ ಹೆಸರು ಶಾಶ್ವತವಾಗಿ ಉಳಿಯುತ್ತವೆ. ನೀವು ಈ ನಿಟ್ಟಿನಲ್ಲಿ ನೀವೆಲ್ಲರೂ ದುಡಿಯಿರಿ ಎಂದು ಸಂದೇಶ ನೀಡಿದರು.
ಕಾರ್ಯಕ್ರಮಕ್ಕೆ ಮುನ್ನಾ ಸಭೆಯಲ್ಲಿ ಗೊಂದಲವಾಗಿದ್ದರಿಂದ ಶ್ರೀವಚನಾನಂದ ಸ್ವಾಮೀಜಿ ಶಾಸಕ ಭೀವiನಾಯ್ಕ ಮತ್ತು ಮಾಜಿ ಶಾಸಕ ನೇಮಿರಾಜ್ ನಾಯ್ಕ ಇಬ್ಬರ ಕೈಹಿಡಿದು ಜ್ಯೋತಿ ಬೆಳಗಿಸಿ ಸಭೆಯಲ್ಲಿ ಸೌಹಾರ್ದತೆ ಮೂಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಭೀಮನಾಯ್ಕ, ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕಾರಣವನ್ನು ಯಾವ ರಾಜಕಾರಣಿಯೂ ಮಾಡಬಾರದು. ಇಂತಹ ಸಂದರ್ಭದಲ್ಲಿ ರಾಜಕಾರಣಿಗಳನ್ನು ದೂರವಿಡಬೇಕು ಎಂದರು.
ಇಲ್ಲಿನ ಕಲ್ಯಾಣ ಮಂಟಪಕ್ಕೆ ಹತ್ತು ಲಕ್ಷ ರು. ಅನುದಾನ ನೀಡಿದ್ದೇನೆ. ಜಗದ್ಗುರುಗಳ ಅಪ್ಪಣೆಯಂತೆ ಕಲ್ಯಾಣ ಮಂಟಪ ನಿರ್ಮಾಣದ ಸಂಪೂರ್ಣ ಹೊಣೆ ನನ್ನದೆ. ಅದನ್ನು ನಾನೇ ಉದ್ಘಾಟನೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ನೇಮಿರಾಜ್ ನಾಯ್ಕ, ಕಲ್ಯಾಣ ಮಂಟಪ ನಿರ್ಮಾಣಕ್ಕೆ ಬೇಕಾದ ಸಿಮೆಂಟ್, ಕಬ್ಬಿಣವನ್ನು ಕೊಡುವುದಾಗಿ ಭರವಸೆ ನೀಡಿದರು.
ಪಂಚಮಸಾಲಿ ಸಮಾಜದ ರಾಜ್ಯ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ, ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸವನಗೌಡ, ಸಮಾಜದ ಮುಖಂಡ ದೇವರಮನಿ ಶಿವಚರಣ ಮುಂತಾದವರು ಮಾತನಾಡಿದರು.
ಸಭೆಯಲ್ಲಿ ಶೆಟ್ಟಿ ತಿಂದಪ್ಪ, ಅಕ್ಕಿತೋಟೇಶ, ಶ್ಯಾನಭೋಗರ ಗುರುಮೂರ್ತಿ, ಬೂದಿ ಶಿವಕುಮಾರ್ ಮತ್ತು ಪ.ಪಂ. ಸದಸ್ಯರು, ಗ್ರಾಮ ಪಂಚಾಯ್ತಿ ಸದಸುರು ಇದ್ದರು. ಕೊಟ್ರೇಶ ಸ್ವಾಗತಿಸಿ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
