ದಾವಣಗೆರೆ:
ರೈತ ಮಹಿಳೆಯ ಬಗ್ಗೆ ಅವಾಚ್ಯವಾಗಿ ನಿಂದಿಸಿದಲ್ಲದೇ, ರೈತ ಹೋರಾಟಗಾರರನ್ನು ಗೂಂಡಾಗಳೆಂದು ಜರಿದಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿ, ತಕ್ಷಣವೇ ರೈತರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರಿನ ಪಿಬಿ ರಸ್ತೆಯಲ್ಲಿ ಜಮಾಯಿಸಿದ ರೈತ ಮುಖಂಡರು, ರಸ್ತೆಗೆ ಅಡ್ಡವಾಗಿ ಟ್ರಾಕ್ಟರ್ ನಿಲ್ಲಿಸಿ, ಅರ್ಧ ಗಂಟೆಗೂ ಹೆಚ್ಚು ಕಾಲ ಮುಖ್ಯಮಂತ್ರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೇನೆಯ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ, ಬಾಕಿ ಇರುವ ಕಬ್ಬಿನ ಹಣ ನೀಡಬೇಕೆಂದು ಒತ್ತಾಯಿಸಿ, ಬೆಳಗಾವಿಯ ವಿಕಾಸಸೌಧದ ಗೇಟ್ನ ಬೀಗ ಮುರಿದು ಪ್ರತಿಭಟಿಸಿದ ಹಾಗೂ ಮುಧೋಳದಲ್ಲಿ ಟ್ರ್ಯಾಕ್ಟರ್ ಇಟ್ಟುಕೊಂಡು ಹೋರಾಟ ನಡೆಸಿದ ರೈತರನ್ನು ಗೂಂಡಾಗಳೆಂದು, ಹಸಿರು ಶಾಲು ಹಾಕಿದವರೆಲ್ಲಾ ರೈತರಲ್ಲ ಎಂಬುದಾಗಿ ಹೇಳುವ ಮೂಲಕ ಸಿಎಂ ಕುಮಾರಸ್ವಾಮಿ ನಾಡಿನ ರೈತರಿಗೆ ಅಗೌರವ ತೋರಿಸಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯ ಕೇಳಿದ ಮಹಿಳೆಗೆ ನಾಲ್ಕು ವರ್ಷ ಎಲ್ಲಿ ಮಲಗಿದ್ದೆಯೆಂಬುದೂ ಸೇರಿದಂತೆ ತುಚ್ಛವಾಗಿ ಮಾತನಾಡುವ ಮೂಲಕ ಕುಮಾರಸ್ವಾಮಿ ಸಮಸ್ತ ಮಹಿಳೆಯರಿಗೆ ಅವಮಾನಿಸಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಅವಾಚ್ಯ ಶಬ್ಧಗಳನ್ನು ಬಳಸಿರುವುದು ರೈತರು, ಅದರಲ್ಲೂ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಒಬ್ಬ ಮಹಿಳೆಯ ಬಗ್ಗೆ ಹೇಗೆ ಮಾತನಾಡಬೇಕೆಂಬ ಸಂಸ್ಕಾರವೂ ಇಲ್ಲದಂತಹ ಮಾತುಗಳನ್ನು ಒಬ್ಬ ಮುಖ್ಯಮಂತ್ರಿ ಬಾಯಿಂದ ಬಂದಿದ್ದು ನಾಡಿನ ದೌರ್ಭಾಗ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಯಾದಾಗಿನಿಂದಲೂ ಸಾಲ ಮನ್ನಾ ಮಾಡುತ್ತೇನೆಂದೇ ಹೇಳುತ್ತಿರುವ ಕುಮಾರಸ್ವಾಮಿ ಅದನ್ನು ಕೃತಿಗೆ ತಂದಿಲ್ಲ. ಪರಿಣಾಮ ಯಾವುದೇ ಬ್ಯಾಂಕ್, ಸೊಸೈಟಿ, ಫೈನಾನ್ಸನಲ್ಲೂ ರೈತರಿಗೆ ಸಾಲ ಸಿಗುತ್ತಿಲ್ಲ. ರೈತರ ಹೋರಾಟವನ್ನು ತೋರಿಕೆಗಾಗಿ ಎಂದಿರುವುದು ಶೋಭೆ ತರದು. ಇನ್ನೂ ಕುಮಾರಸ್ವಾಮಿ ಸಹೋದರ ಸಚಿವ ರೇವಣ್ಣ ನೋಟು ಪ್ರಿಂಟ್ ಮಾಡುವ ಮಷಿನ್ ಇಲ್ಲ, ದುಡ್ಡಿನ ಗಿಡವಿಲ್ಲವೆಂದು ಹೇಳಿದ್ದಾರೆ. ಇದೆಲ್ಲವನ್ನೂ ನೋಡಿದರೆ, ರೈತರ ಬಗ್ಗೆ ಇವರಿಗೆ ಯಾವ ಗೌರವವಿದೆ ಎಂಬುದು ಸಾಬೀತಾಗಲಿದೆ ಎಂದು ಕಿಡಿಕಾರಿದರು.
ಸಿಎಂ ಕುಮಾರಸ್ವಾಮಿ ರೈತರು, ರೈತ ಮಹಿಳೆಯರು, ರೈತ ಹೋರಾಟದಬಗ್ಗೆ ಹಗುರವಾಗಿ ಮಾತನಾಡಿದ್ದು ಖಂಡನೀಯವಾಗಿದ್ದು, ತಕ್ಷಣವೇ ಕುಮಾರಸ್ವಾಮಿ ತಮ್ಮ ಹೇಳಿಕೆಯನ್ನು ವಾಪಾಸ್ ಪಡೆದು ರೈತರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಚಿನ್ನಸಮುದ್ರ ಶೇಖರ ನಾಯ್ಕ, ಚಿಕ್ಕನಹಳ್ಳಿ ಮಲ್ಲೇಶಪ್ಪ, ಹುಚ್ಚವ್ವನಹಳ್ಳಿ ಗಣೇಶ, ಚನ್ನಗಿರಿ ಅಣ್ಣಪ್ಪ, ರಾಜು, ಅಜ್ಜಯ್ಯ ಮಲ್ಲೇನಹಳ್ಳಿ, ಖಲೀಮುಲ್ಲಾ ಕರೇಕಟ್ಟೆ, ಸಂತೋಷ ಕಬ್ಬಳ, ಬಸವಾಪಟ್ಟಣ ಲಿಂಗರಾಜ, ಗೋಶಾಲೆ ಬಸವರಾಜ, ವಿಜಯಕುಮಾರ, ಹೊನ್ನೂರು ರಾಜಣ್ಣ, ತರೀಕೆರೆ ಖಲೀಂ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
