ಬ್ಯಾಡಗಿ:
ಹಿಂಸೆಯನ್ನು ಪ್ರಚೋದಿಸುವ ಯಾವುದೇ ವ್ಯಕ್ತಿ ಮಹ್ಮದ್ ಪೈಗಂಬರ್ ಅನುಯಾಯಿಯಾಗಲು ಸಾಧ್ಯವಿಲ್ಲ, ‘ಕರುಣೆ’ ಎಂಬ ಶಕ್ತಿಯಿಂದ ಎಲ್ಲವನ್ನೂ ಸಾಧಿಸಬಹುದೆಂಬ ಸಾರ್ವತ್ರಿಕ ಸತ್ಯವನ್ನು ವಿಶ್ವಕ್ಕೆ ಅವರು ವಿಶ್ವಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾಗಿದ್ದು ಅವರ ಸಂದೇಶಗಳನ್ನು ಎಲ್ಲ ಭಾಷೆಗಳಲ್ಲಿಯೂ ಪ್ರಕಟಿಸುವ ಮೂಲಕ ಇಸ್ಲಾಂ ಧರ್ಮದ ನೈಜ ಸ್ವರೂಪವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವಾಗಬೇಕಾಗಿದೆ ಮೌಲಾನಾ ದಿಲ್ ನವಾಜ್ ಅಹ್ಮದ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಬುಧವಾರ, ಈದ್-ಮಿಲಾದ್ ಹಬ್ಬದಾಚರಣೆ ಹಾಗೂ ಪ್ರವಾದಿ ಮಹ್ಮದ್ ಪೈಗಂಬರ 1493 ನೇ ಜನ್ಮ ದಿನಾಚರಣೆ ಅಂಗವಾಗಿ ಅಂಜುಮನ್-ಏ-ಇಸ್ಲಾಂ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಶಾಂತಿ ಮತ್ತು ಕರುಣೆ ಎನ್ನುವ ಪದಗಳು ಜಗತ್ತನ್ನು ಸುಖವಾಗಿಡಬಲ್ಲ ಶಕ್ತಿಯುತ ಅಸ್ತ್ರವಾಗಿವೆ ಇಂತಹ ಸಂದೇಶಗಳು ಇಂದಿಗೂ ವಿಶ್ವ ಮಾನ್ಯತೆ ಪಡೆದಿವೆ ಎಂದರು.
ನಿತ್ಯ ಖುರಾನ್ ಪಠನದಲ್ಲಿ ತೊಡಗಿ:ಮೌಲಾನಾ ಚಮನ್‍ಲಿ ಹಜರತ್ ಮಾತನಾಡಿ, ಪ್ರಾಪಂಚಿಕ ಲಾಭಗಳಿಗಾಗಿ ನಮ್ಮಲ್ಲಿರುವ ಪರಮೋಚ್ಚ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಿದ್ದು ಅಲ್ಪ ಸುಖಕ್ಕಾಗಿ ಏನೆಲ್ಲಾ ಕೃತ್ಯಗಳನ್ನು ಮಾಡುತ್ತಿದ್ದೇವೆ, ಇದರಿಂದ ಸಾಮಾಜಿಕ ಸಾಮರಸ್ಯ ಹಾಳಾಗುತ್ತಿದ್ದು ಪ್ರಾಮಾಣಿಕರ ಕೊರತೆಯಿಂದ ಸಮಾಜದ ನೆಮ್ಮದಿ ಹಾಳಾಗುತ್ತಿದೆ, ಸಾಕ್ಷಾತ್ ದೈವ ಸ್ವರೂಪಿಗಳಾಗಿದ್ದ ಪೈಗಂಬರ್ ಇಂತಹವರಿಗಾಗಿಯೇ ಸಾವಿರಾರು ಸಂದೇಶಗಳನ್ನು ಸಾರಿದ್ದಾರೆ ಪ್ರತಿಯೊಬ್ಬರೂ ನಿತ್ಯ ‘ಖುರಾನ್’ ಪಠನದಲ್ಲಿ ತೊಡಗಬೇಕಾಗಿದೆ ಎಂದರು..
ಶಿಕ್ಷಣ ಪಡೆದು ಎಲ್ಲರಂತೆ ಬದುಕಿ:ಮೌಲಾನಾ ಮೆಹಬೂಬ್ ಹಜರತ್ ಮಾತನಾಡಿ, ಮುಸ್ಲಿಂ ಸಮುದಾಯದ ಯುವಕರು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಿ ಎಲ್ಲರಂತೆ ಬದುಕನ್ನು ನಡೆಸಬೇಕಾಗಿದೆ, ಮುಸ್ಲಿಂ ಸಮುದಾಯದಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದು ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು.
ಬೃಹತ ಮೆರವಣಿಗೆ: ಮಕಾನಗಲ್ಲಿಯಲ್ಲಿರುವ ಚಮನ್-ಷಾ-ವಲಿ ದರ್ಗಾದಿಂದ ಆರಂಭವಾದ ಮೆರವಣಿಗೆ ಚಾವಡಿರಸ್ತೆ ಮುಖ್ಯರಸ್ತೆ, ಹಳೇ ಪುರಸಭೆ, ಹಂಸಭಾವಿ ರಸ್ತೆಯಲ್ಲಿ ಸಂಚರಿಸಿ ಕೋಳೂರ ಕ್ಯಾಂಪ್ ಅಗಸನಹಳ್ಳಿ ಮಾರ್ಗವಾಗಿ ಮರಳಿ ಚಮನ್-ಶಾ-ವಲಿ ದರ್ಗಾ ತಲುಪಿತು. ಮೆರವಣಿಗೆಯುದ್ದಕ್ಕೂ ಪ್ರವಾದಿ ಮಹ್ಮದ್ ಪೈಗಂಬರರ ಕುರಿತು ಹಾಡು ಹೇಳುವ ಮೂಲಕ ಮುಸ್ಲಿಂ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಹಬ್ಬದಂಗವಾಗಿ ಬೆಳಿಗ್ಗೆಯಿಂದಲೇ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು, ಪಟ್ಟಣದ ಬಹುತೇಕ ಮಸೀದಿಗಳನ್ನು ವಿದ್ಯುತ್‍ದೀಪಗಳಿಂದ ಶೃಂಗರಿಸಲಾಗಿತ್ತು, ಮನೆಮನೆಗಳಲ್ಲಿ ಹಸಿರು ಧ್ವಜಗಳು ರಾರಾಜಿಸುತ್ತಿದ್ದವು, ಮಕ್ಕಳು ಸೇರಿದಂತೆ ಬಹುತೇಕ ಮುಸ್ಲಿಂ ಬಾಂಧವರು ಹೊಸ ಬಟ್ಟೆಗಳನ್ನು ಧರಿಸಿ ಕೈಯಲ್ಲಿ ಹಸಿರುವರ್ಣದ ಧ್ವಜದೊಂದಿಗೆ ಪಾಲ್ಗೊಂಡಿದ್ದರು. ಇನ್ನೂ ಕೆಲವರು ಆಟೋರಿಕ್ಷಾ, ಲಾರಿ, ಕಾರು ಮತ್ತು ದ್ವಿಚಕ್ರ ವಾಹನಕ್ಕೆ ಬೃಹತ್ ಹಸಿರುವ ಬಾವುಟ ಕಟ್ಟಿಕೊಂಡು ಮೆರವಣಿಗೆಯೊಂದಿಗೆ ಸಂಚರಿಸಿದರು. ಈ ಸಂದರ್ಭದಲ್ಲಿ ಅಂಜುಮನ್ ಸಮಿತಿಯ ಅಧ್ಯಕ್ಷ ಭಾಷಾ ಮುಲ್ಲಾ, ಉಪಾಧ್ಯಕ್ಷ ಮನಸೂರ್‍ಲಿ ಹಕೀಮ್, ಕಾರ್ಯದರ್ಶಿ ರಾಜು ಕಳ್ಯಾಳ, ಡಾ.ಎ.ಎಂ.ಸೌದಾಗರ, ಹಸನ್‍ಲಿ ದರವೇಶ, ಮಹ್ಮದಲಿಜಿನ್ನಾ ಹಲಗೇರಿ, ಮಜೀದ್ ಮುಲ್ಲಾ, ರಫೀಕ್ ಬೆಳಗಾಂವ ಮೆಹಬೂಬ ಅಗಸನಹಳ್ಳಿ, ಮುಕ್ತಿಯಾರ ಮುಲ್ಲಾ, ಮುನ್ನಾ ಎರೇಶೀಮಿ, ಬಾಬುಸಾಬ್ ಬಡಿಗೇರ, ಅಬ್ದುಲ್ ಸಮದ್ ಬೆಳವಿಗಿ ಅಜೀಜ್ ಬಿಜಾಪುರ, ಅಬ್ದುಲ್ ಖಾದರ್ ಕಲ್ಮನಿ, ನಿಸಾರ್ ಹಾವನೂರ ಸೇರಿದಂತೆ ಸಾವಿರಾರು ಸಂಖ್ಯೆಯ ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಬಿಗಿ ಬಂದೋಬಸ್ತ: ಸಿಪಿಐ ಚಿದಾನಂದ ಮತ್ತು ಪಿಎಸ್‍ಐ ಮಹಾಂತೇಶ್ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ ಏರ್ಪಡಿಸಲಾಗಿತ್ತಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ