ಶೌಚಾಲಯ ನಿರ್ಮಾಣದ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ….!

ಹೊಳಲ್ಕೆರೆ:

        ಸ್ವಚ್ಚಭಾರತ್ ಅಡಿಯಲ್ಲಿ ವಿಶ್ವನಾಥನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳಿಗೆ 150 ಶೌಚಾಲಯಗಳು ಮಂಜೂರಾಗಿದ್ದು ಇದರಲ್ಲಿ ಕೇವಲ 6 ಶೌಚಾಲಯಗಳು ಮಾತ್ರ ಪೂರ್ಣಗೊಂಡಿವೆ. ಉಳಿದ 149 ಶೌಚಾಲಯಗಳು ಈಗಾಗಲೆ ನಿರ್ಮಾಣಗೊಂಡಿವೆ ಎಂದು 2.25 ಕೋಟಿ ರೂಗಳನ್ನು ಲಪಟಾಯಿಸಿರುವ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚೆಗೆ ಕಾರಣವಾಗಿದ್ದು ಅಷ್ಟು ಹಣವನ್ನು ದುರುಪಯೋಗ ಮಾಡಿರುವ ಭ್ರಷ್ಟ ಅಧಿಕಾರಿಯನ್ನು ಕೂಡಲೆ ಅಮಾನತಿನಲ್ಲಿಟ್ಟು ಸಂಪೂರ್ಣ ತನಿಖೆಯನ್ನು ಕೈಗೊಳ್ಳುವಂತೆ ಶಾಸಕ ಎಂ.ಚಂದ್ರಪ್ಪ ತಾ.ಪಂ. ಇಓ ಅವರಿಗೆ ಎಚ್ಚರಿಕೆ ನೀಡಿದರು.

        ತಾ.ಪಂ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೆ.ಡಿ.ಪಿ ಸಭೆಯ ಅಧ್ಯಕ್ಷತೆಯನ್ನು ಶಾಸಕ ಎಂ.ಚಂದ್ರಪ್ಪ ವಹಿಸಿ ಮಾತನಾಡಿ ಎಲ್ಲಾ ಇಲಾಖೆಗಳ ಪ್ರಗತಿ ಮತ್ತು ಅಭಿವೃಧ್ದಿ ಬಗ್ಗೆ ಎಲ್ಲಾ ಇಲಾಖೆಗಳ ಸರ್ಕಾರಿ ಮುಖ್ಯಸ್ಥರನ್ನು ಕೂಲಂಕುಶವಾಗಿ ಪರಿಶೀಲಿಸಿದರು.

          ಒಂದು ಗ್ರಾಮ ಪಂಚಾಯಿತಿಯಲ್ಲಿ ಸುಳ್ಳು ಮಾಹಿತಿಗಳನ್ನು ನೀಡಿ ಕೋಟ್ಯಾಂತರ ರೂಪಾಯಿಗಳನ್ನು ದುರುಪಯೋಗ ಮಾಡಲಾಗಿದೆ. ಇದೇ ರೀತಿ ತಾಲ್ಲೂಕಿನಲ್ಲಿ ಉಳಿದ 29 ಗ್ರಾಮ ಪಂಚಾಯಿತಿಗಳಲ್ಲಿ ಎಷ್ಟು ಎಷ್ಟು ಕೋಟಿ ಹಣ ದುರುಪಯೋಗವಾಗಿದೆ ಮತ್ತು ಸದುಪಯೋಗವಾಗಿದೆ ಎಂಬ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು ಕೂಡಲೆ ಜಾಗೃತರಾಗಿ ಈ ಬಗ್ಗೆ ಸಮಗ್ರ ಮಾಹಿತಿಗಳನ್ನು ಮತ್ತು ವರದಿಯನ್ನು ನೀಡಬೇಕೆಂದು ಶಾಸಕರು ಕಟ್ಟು ನಿಟ್ಟು ಆದೇಶ ನೀಡಿದರು.

         ಪಟ್ಟಣದ ತಾಲ್ಲೂಕು ಪಂಚಾಯಿತಿ ಪಕ್ಕದಲ್ಲಿರುವ ಎನ್.ಇ.ಎಸ್. ಸರ್ಕಾರಿ ಶಾಲೆಯ ಕಟ್ಟಡವನ್ನು ನಿರ್ಮಿಸಲು 53 ಲಕ್ಷ ರೂಗಳ ಟೆಂಡರ್ ಆಗಿದ್ದು ಈ ಕಟ್ಟಡದ ನಿವೇಶನ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ಈ ಶಾಲೆಯ ನಿವೇಶನ ಯಾವ ಇಲಾಖೆಗೆ ಸೇರಿದ್ದು ಎಂಬ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯದೇ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಕಟ್ಟಡ ಟೆಂಡರ್ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಇದು ಕಾನೂನು ಬಾಹಿರವಾಗಿದೆ. ಈ ಬಗ್ಗೆ ಸಮರ್ಪಕ ಮಾಹಿತಿಯನ್ನು ನೀಡಬೇಕೆಂದು ಅಧಿಕಾರಿಗೆ ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು.

          ಪಟ್ಟಣದ ಪಕ್ಕದಲ್ಲಿರುವ ಕೇಸರಕಟ್ಟೆ ಕೆರೆಯ ಅಂಗಳವನ್ನು ಅನಧಕೃತವಾಗಿ ನೂರಾರು ಮನೆಗಳು ನಿರ್ಮಾಣಗೊಂಡಿದೆ. ಈ ಕೆರೆಯಲ್ಲಿ ನೂರಾರು ಎಕರೆ ಭೂಮಿಯನ್ನು ಕೆರೆಯ ಸುತ್ತಲು ಖಾಸಗಿಯವರು ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ಸಂಬಂದಪಟ್ಟ ಜಿ.ಪಂ. ಉಪವಿಭಾಗದ ಇಂಜಿನಿಯರ್ ಗಮನ ನೀಡದೇ ಭೂಮಿ ಖಾಸಗಿಯವರ ವಶವಾಗುವುದು ಕಾಣುತ್ತಿದ್ದರು ಗೊತ್ತಿಲ್ಲದಂತೆ ಇದ್ದಾರೆ. ಈ ಬಗ್ಗೆ ಕೆರೆಯ ಸರ್ವೆಯನ್ನು ಮಾಡಿಸಿ ಒತ್ತುವರಿ ಮಾಡಿರುವ ಭೂಮಿಯನ್ನು ತೆರವುಮಾಡಬೇಕೆಂದು ಶಾಸಕರು ಇಂಜಿನಿಯರ್ ವಿರುಧ್ದ ಹರಿಹಾಯ್ದಿರು.

           2018-19 ನೇ ಸಾಲಿನಲ್ಲಿ ಪ್ರಸಕ್ತ ವರ್ಷದಲ್ಲಿ ಸಮರ್ಪಕ ಮಳೆ ಬೀಳದೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಅಭಾವ ಉಲ್ಬಣವಾಗಿದ್ದು ಹೊಳಲ್ಕೆರೆ ತಾಲ್ಲೂಕನ್ನು ಬರ ಪೀಡಿತ ಪ್ರದೇಶವೆಂದು ಸರ್ಕಾರ ಈಗಾಗಲೆ ಘೋಷಣೆ ಮಾಡಿದೆ. ಈ ವಿಷಯದಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ತಮ್ಮ ಇಲಾಖೆಯ ವ್ಯಾಪ್ತಿಗೆ ಬರುವ ಬರಗಾಲದ ಅನುದಾನವನ್ನು ಸಮಗ್ರವಾಗಿ ಯಾವುದೇ ಲೋಪದೋಷ ಮತ್ತು ಅವ್ಯವಹಾರ ನಡೆಯದಂತೆ ತಾಲ್ಲೂಕಿನಲ್ಲಿ ರೈತರಿಗೆ ಮತ್ತು ಸಾರ್ವಜನಿಕರಿಗೆ ಸಮರ್ಪಕವಾಗಿ ವಿತರಣೆಯಾಗುವಂತೆ ಎಲ್ಲರು ನಿಷ್ಠೆ, ಪ್ರಾಮಾಣಿಕತೆ ಮತ್ತು ಇಚ್ಚಾ ಶಕ್ತಿಯಿಂದ ತಮ್ಮ ಸೇವೆಯನ್ನು ಮಾಡಬೇಕು. ಈ ವಿಷಯದಲ್ಲಿ ಯಾರಾದರು ತಪ್ಪಿದರೆ ಅಂತಹ ಅಧಿಕಾರಿಗಳ ಜಾಗವನ್ನು ಖಾಲಿ ಮಾಡಿಸಬೇಕಾಗುತ್ತದೆ ಎಂದು ಶಾಸಕರು ಸೂಚಿಸಿದರು.

          ಬೇಸಿಗೆ ಸಮೀಪಿಸುತ್ತದೆ ಯಾವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ ಎಂಬುದು ಬಗ್ಗೆ ಕುಡಿಯುವ ನೀರು ಇಲಾಖೆಯ ಅಧಿಕಾರಿ ಪ್ರತಿಯೊಂದ ಗ್ರಾಮವನ್ನು ಪರಿಶೀಲಿಸಬೇಕು. ಎಲ್ಲಿ ನೀರಿನ ಅವಶ್ಯಕತೆಇದೆ ಎಂಬ ಬಗ್ಗೆ ಪ್ರತಿದಿನ ಮಾಹಿತಿಯನ್ನು ಪಡೆದು ಆ ಕೂಡಲೆ ಸಮಸ್ಯೆಯನ್ನು ಬಗೆ ಹರಿಸಬೇಕು. ಈ ಬಗ್ಗೆ ಯಾವುದೇ ಉದಾಸೀನ ಮಾಡದೆ ತಾಲ್ಲೂಕಿನಲ್ಲಿ ಎಲ್ಲಿಯೂ ಕುಡಿಯುವ ನೀರಿನ ಬವಣೆ ತೆಲೆದೂರಲು ಅವಕಾಶ ಮಾಡಕೂಡದೆಂದು ಆದೇಶ ನೀಡಿದರು.

           ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಸರ್ಕಾರ ಧನಸಹಾಯ ರೂಪದಲ್ಲಿ ನೀಡುತ್ತಿರುವ ಬಿತ್ತನೆ ಬೀಜಗಳನ್ನು ಪ್ರತಿಯೊಬ್ಬ ರೈತರಿಗೆ ಯಾವುದೇ ತೊಂದರೆ ಕೊಡದೆ ಅಲೆದಾಡಿಸದೆ ವಿತರಣೆ ಮಾಡಬೇಕು. ಇಲ್ಲಿಯವರೆಗೆ ಬಿತ್ತನೆ ಬೀಜ ಎಷ್ಟು ವಿತರಣೆಯಾಗಿದೆ ಎಂಬ ಬಗ್ಗೆ ಸೂಕ್ತ ಮಾಹಿತಿಗಳನ್ನು ನೀಡಬೇಕು. ಯಾವುದೇ ಲೋಪ ದೋಷ ಆಗದಂತೆ ಎಚ್ಚರ ವಹಿಸಬೇಕೆಂದು ಸಹಾಯಕ ಕೃಷಿ ನೀರ್ದೆಶಕಿ ಅವರಿಗೆ ಶಾಸಕರು ತಾಕೀತು ಮಾಡಿದರು.

          ಜಿ.ಪಂ. ಸದಸ್ಯರುಗಳಾದ ತಿಪ್ಪೇಸ್ವಾಮಿ, ಮಹೇಶ್ವರಪ್ಪ, ತಾ.ಪಂ. ಅಧ್ಯಕ್ಷೆ ಸುಜಾತ ಧನಂಜಯ್ ನಾಯ್ಕ್, ಉಪಾಧ್ಯಕ್ಷೆ ಅನುಸೂಯ ಆನಂದ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ತಾ.ಪಂ ಸದಸ್ಯ ಶಿವಕುಮಾರ್ ಮತ್ತು ತಾ.ಪಂ ಇಓ ಮಹಾಂತೇಶ್ ಮುಂತಾದವರು ಸಭೆಯ ಚರ್ಚೆಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link