ಬೆಂಗಳೂರು
ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಕಳವು ಮಾಡಿ ಮಾಹಿತಿಯನ್ನು ಅಭ್ಯರ್ಥಿಗಳಿಗೆ ಉತ್ತರ ಸಮೇತ ಸೋರಿಕೆ ಮಾಡುತ್ತಿದ್ದ ಜಾಲವನ್ನು ಬೇಧಿಸಿ ದಾಳಿ ನಡೆಸಿ ನಾಲ್ಕು ವಾಹನ ಸಮೇತ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಾಲದ ಪ್ರಮುಖ ರುವಾರಿ ಶಿವಕುಮಾರ್ ಎಂಬ ಆರೋಪಿಯನ್ನು ಬಂಧಿಸಿ ಪ್ರಶ್ನೆಪತ್ರಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ ಇದಲ್ಲದೇ, ಅಕ್ರಮವಾಗಿ ಗುಂಪು ಸೇರಿಸಿದ್ದ ಸುಮಾರು 116 ಅಭ್ಯರ್ಥಿಗಳು, 7ಮಂದಿ ಡ್ರೈವರ್,ಕ್ಲೀನರ್ಸ್ ಹಾಗೂ 4 ಮಿನಿ ಬಸ್, 1 ಇನ್ನೋವಾ ಕಾರ್ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಭಾನುವಾರ(ನ.25)ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ ನಡೆಸುವ ಸಂಬಂಧ ದಿನಾಂಕ ನಿಗದಿಯಾಗಿದ್ದು .ಈ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆ ಇರುವುದಾಗಿ ತಿಳಿಸಿ ರಾಜ್ಯದ ವಿವಿಧ ಭಾಗಗಳಿಂದ ಅದರಲ್ಲೂ ಉತ್ತರ ಕರ್ನಾಟಕದಿಂದ ಸುಮಾರು 116 ಅಭ್ಯರ್ಥಿಗಳನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು, ಶನಿವಾರ ಸಂತೆ, ಕಲ್ಲಮಠದ ನಂಜುಂಡೇಶ್ವರ ವಿದ್ಯಾಮಂದಿರ ಕೊಠಡಿಯೊಂದರಲ್ಲಿ ಗುಂಪು ಸೇರಿಸಿ, ಅವರಿಗೆ ಪ್ರಶ್ನೆಪತ್ರಿಕೆ ಹಾಗೂ ಅವುಗಳಿಗೆ ಉತ್ತರ ನೀಡಲು ಶಿವಕುಮಾರ್, ಬಸವರಾಜು ಒಳ ಸಂಚು ರೂಪಿಸಿರುವ ಖಚಿತ ಮಾಹಿತಿ ಆಧರಿಸಿ ಶನಿವಾರ ಮುಂಜಾನೆ ಕಾರ್ಯನಿರತರಾದ ಎಸಿಪಿಗಳಾದ ಬಿ.ಆರ್.ವೇಣುಗೋಪಾಲ್,ಬಿ.ಬಾಲರಾಜು ರವರ ನೇತೃತ್ವದ 2 ವಿಶೇಷ ತಂಡಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿವೆ.
ಆರೋಪಿ ಶಿವಕುಮಾರ್ ವಿಚಾರಣೆಯಲ್ಲಿ ಲಿಖಿತ ಪರೀಕ್ಷೆಯ ಪ್ರಶ್ನೆಯ ಪತ್ರಿಕೆಯನ್ನು ಕದ್ದು, ಅದನ್ನು ಸೇರಿಸಲಾಗಿದ್ದ ಅಭ್ಯರ್ಥಿಗಳಿಗೆ ಉತ್ತರ ಸಮೇತ ಸೋರಿಕೆ ಮಾಡಿ, ಅವರಿಂದ ಅಕ್ರಮವಾಗಿ ಹಣ ಸಂಪಾದಿಸುವ ಉದ್ದೇಶ ಹೊಂದಿದ್ದ ಪ್ರತಿ ಅಭ್ಯರ್ಥಿಯಿಂದ 6 ರಿಂದ 8 ಲಕ್ಷದವರೆಗೆ ಹಣ ಪಡೆದಿರುವುದಾಗಿಯೂ ಸಹ ಇದುವರೆಗಿನ ತನಿಖೆಯಿಂದ ತಿಳಿದು ಬಂದಿದೆ.
ಈ ಕೃತ್ಯವನ್ನು ಎಸಗಲು ಬೇರೆ ಬೇರೆ ಆಸಾಮಿಗಳ ಹೆಸರಿನ ದಾಖಲಾತಿಗಳನ್ನು ಬಳಸಿ, ಮೊಬೈಲ್ ಸಿಮ್ ಕಾರ್ಡ್ಗಳನ್ನು ಪಡೆದಿರುವುದಾಗಿಯೂ ಮತ್ತು ಇದಕ್ಕಾಗಿ ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿರುವುದು ತಿಳಿದು ಬಂದಿರುತ್ತದೆ.
ದಾಳಿ ವೇಳೆ ಬಸವರಾಜು ಎಂಬ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಈತನ ಪತ್ತೆ ಕಾರ್ಯ ಮುಂದುವರೆದಿರುತ್ತದೆ .ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಐಟಿ ಆಕ್ಟ್ನ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿರುತ್ತದೆ. ವಶಪಡಿಸಿಕೊಳ್ಳಲಾಗಿರುವ ಪ್ರಶ್ನೆ ಪತ್ರಿಕೆಯ ನೈಜತೆಯ ದೃಷ್ಟಿಯಲ್ಲಿಯೂ ಸಹ ತನಿಖೆ ಮುಂದುವರೆದಿದೆ ಎಂದು ಗಿರೀಶ್ ತಿಳಿಸಿದ್ದಾರೆ.