ಯುವಜನರು ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಲು ಸಲಹೆ

ಬಳ್ಳಾರಿ

        ಯುವಜನರು ಸಾಂಸ್ಕೃತಿಕ ಚಟುವಟಿಕೆಗಳತ್ತ ಸಕ್ರಿಯರಾಗಬೇಕು ಮತ್ತು ಈ ಮೂಲಕ ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜವಳಿ ರುದ್ರಪ್ಪ ಹೇಳಿದರು.

        ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸ್ಪೂರ್ತಿ ಕಲಾವಿದರ ಸಂಘದ ಸಹಯೋಗದಲ್ಲಿ ನಗರದ ಡಾ.ರಾಜ್ ರಸ್ತೆಯಲ್ಲಿನ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದರು.

         ಅತ್ಯಾಧುನಿಕ ಜಗತ್ತಿನಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಈ ನಾಡಿನ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮರೀಚಿಕೆಯಾಗುತ್ತವೆ. ಅವುಗಳನ್ನು ಉಳಿಸಿ, ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಆಗಾಗಿ, ಕ್ರೀಡಾ ಇಲಾಖೆ ಆಯೋಜಿಸುವ ಯುವಜನೋತ್ಸವದಲ್ಲಿ ಯುವಜನರು ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು ಎಂದರು.

          ಯುವಜನರು ಮೊಬೈಲ್ ಪೋನ್ ಬಳಕೆಯನ್ನು ಕಡಿಮೆ ಮಾಡಬೇಕು. ಈ ನಾಡಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸ್ಸನ್ನು ಸಂತೋಷಗೊಳಿಸುವುದರ ಜೊತೆಗೆ ಯುವಜನರ ಮಾನಸಿಕ ಒತ್ತಡ ದೂರವಾಗಿಸಲು ಸಹಕಾರಿ ಯಾಗಲಿದೆ ಎಂದರು.

          ಸ್ಪೂರ್ತಿ ಕಲಾವಿದರ ಸಂಘದ ಅಧ್ಯಕ್ಷ ಜಕ್ರಿಯಾ ಮಾತನಾಡಿ, ಕಲೆಗೆ ಎಂಥ ದುಷ್ಟ ಶಕ್ತಿಯನ್ನು ನಿಯಂತ್ರಿಸುವ ಶಕ್ತಿಯಿದೆ. ಆಗಾಗಿ, ಯುವಜನರು ಯುವಜನೋತ್ಸವದಲ್ಲಿ ಸಕ್ರಿಯರಾಗಿ ಭಾಗವಹಿಸಿ, ನಾಡಿನ ಕಲೆ ಮತ್ತು ಸಂಸ್ಕೃತಿಯ ಜೀವಂತಿಕೆಗೆ ಶ್ರಮಿಸಬೇಕು ಎಂದರು.

         ಸನ್ಮಾನ: ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ರಹಮತ್ ಉಲ್ಲಾ ಅವರಿಗೆ ಟೋಪಿ ಹಾಕಿ, ಶಾಲುಹೊದಿಸಿ ಸ್ಪೂರ್ತಿ ಕಲಾವಿದರ ಸಂಘದ ಪದಾಧಿಕಾರಿಗಳು ಈ ವೇಳೆ ಸನ್ಮಾನಿಸಿದರು.

        ಜಿಲ್ಲೆಯ ಸಿರುಗುಪ್ಪ, ಹೊಸಪೇಟೆ, ಕೂಡ್ಲಿಗಿ, ಸಂಡೂರು, ಹಡಗಲಿ ಹಾಗೂ ಬಳ್ಳಾರಿ ತಾಲೂಕಿನ ಯುವಜನರ ಹತ್ತಾರು ತಂಡಗಳು ಈ ಯುವಜನೋತ್ಸವದಲ್ಲಿ ಪಾಲ್ಗೊಂಡಿದ್ದರು.

        ವಿವಿಧ ಸ್ಪರ್ಧೆ: ಶಾಸ್ತ್ರೀಯ ನೃತ್ಯಗಳಾದ ಭರತ ನಾಟ್ಯ, ಒಡಿಸ್ಸಿ, ಮಣಿಪುರಿ, ಕೂಚುಪುಡಿ, ಕಥಕ್, ಶಾಸ್ತ್ರೀಯ ವಾದ್ಯಗಳಾದ ತಬಲಾ, ಸಿತಾರ, ಕೊಳಲು, ವೀಣೆ, ಮೃದಂಗ, ಹಾರ್ಮೋನಿಯಂ, ಗಿಟಾರ್, ಶಾಸ್ತ್ರೀಯ ಗಾಯನವಾದ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಗಾಯನೋತ್ಸವ, ಆಶುಭಾಷಣ, ಏಕಾಂಕ ನಾಟಕ ಪ್ರದರ್ಶನ ಸ್ಪರ್ಧೆಗಳು ನಡೆದವು. ವಿಜೇತ ತಂಡಗಳಿಗೆ ಸೂಕ್ತ ಬಹುಮಾನ ವಿತರಿಸಲಾಯಿತು.

        ಯುವ ಕ್ರೀಡಾಪಟು ಮಹಾಂತೇಶ, ಸಂಗೀತ ತರಬೇತುದಾರ ಎಸ್.ಕೆ.ಆರ್.ಜಿಲಾನಿ ಬಾಷಾ, ಕ್ರೀಡಾ ಇಲಾಖೆ ಅಧಿಕಾರಿಗಳಾದ ರಾಮಸ್ವಾಮಿ, ರಫೀಕ್, ಪ್ರದೀಪ ಸೇರಿದಂತೆ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link