ಬಳ್ಳಾರಿ
ಸಂವಿಧಾನದ ಅಡಿಯಲ್ಲಿ ನಿರ್ದೇಶಿಸಲ್ಪಟ್ಟ ಮೂಲಭೂತ ಕರ್ತವ್ಯಗಳನ್ನು ಪಾಲಿಸದೇ ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಸಿ.ಬಿರಾದಾರ್ ಹೇಳಿದರು.ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸಂವಿಧಾನ ದಿನಾಚರಣೆ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಡ್ರಾಪ್ಟಿಂಗ್ ಕಮಿಟಿಯಿಂದ ರಚನೆಯಾದ ಸಂವಿಧಾನ ಕರಡು ಪ್ರತಿಯನ್ನು ನಮ್ಮ ಸಂವಿಧಾನ ಸಭೆಯಲ್ಲಿ 1949 ನ.26ರಂದು ಸಂವಿಧಾನ ಅಂಗಿಕರಿಸಿ ಅಧಿನಿಯಮ ಅರ್ಪಿಸಿಕೊಂಡಿರುತ್ತೇವೆ. ಸಂವಿಧಾನದ ಅಡಿ ದೇಶದ ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಹಕ್ಕುಗಳನ್ನು ನೀಡಲಾಗಿದ್ದು,ಹಾಗೆಯೇ ಕರ್ತವ್ಯಗಳ ಜವಾಬ್ದಾರಿಯನ್ನು ಸಹ ಹೇಳಲಾಗಿದೆ. ಪ್ರತಿಯೊಂದು ಅಂಗವು ತನಗೆ ನಿಗದಿಪಡಿಸಿದ ಕಾರ್ಯಗಳನ್ನು ಪಾಲಿಸಬೇಕು ಎಂದರು.
ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಹೆಣ್ಮಕ್ಕಳಿಗೆ ಕೇವಲ ಶೇ.10ರಷ್ಟು ಸಾಕ್ಷರತೆ ಇದ್ದು,ಉಳಿದ ಶೇ.90ರಷ್ಟು ಮಹಿಳೆಯರು ಸಾಕ್ಷರತೆಯಿಂದ ವಂಚಿತರಾಗಿದ್ದು,ಮಹಿಳೆಯರು ವಿವಿಧ ಕೆಲಸಗಳಲ್ಲಿ ಅತ್ಯಂತ ಹೀನಾಯವಾದ ಸ್ಥಿತಿಯಲ್ಲಿರುವುದು ಕಂಡುಬರುತ್ತಿದೆ. ಇಂದಿಗೂ ಸಹ ಹೆಣ್ಮಕ್ಕಳನ್ನು ಗೌರವಯುತವಾಗಿ ನಡೆಸಿಕೊಳ್ಳುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಉಚಿತ ಕಾನೂನು ನೆರವು ನೀಡುವುದರ ಜತೆಗೆ ಪ್ರತಿಯೊಬ್ಬ ನಾಗರಿಕನಿಗೆ ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದಂತ ಜನರಿಗೆ ಸರಕಾರದ ಯೋಜನೆಗಳ ಸೌಲಭ್ಯಗಳು ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.
ಸಂವಿಧಾನ ದಿನಾಚರಣೆ ಆಚರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದ್ದು, ಆಚರಣೆ ಮಾಡಿ ಸಂವಿಧಾನದ ಸಾರಾಂಶವನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ಕೆ.ಕಾತ್ಯಾಯಿನಿ ಅವರು ಮಾತನಾಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಬಿ.ಹಂದ್ರಾಳ್ ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕರ್ತವ್ಯ ಮತ್ತು ಕಾರ್ಯವೈಖರಿ ಕುರಿತು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಎಂ.ಅಂಕಲಯ್ಯ ಅವರು ಮಾತನಾಡಿ , ಶಾಸಕಾಂಗ , ಕಾರ್ಯಾಂಗ ಸರಿಯಾಗಿ ಕಾರ್ಯನಿರ್ವಹಿಸದ ಪರಿಣಾಮ ಜನರು ನ್ಯಾಯಾಂಗಕ್ಕೆ ಪರಿಹಾರ ಕೋರಿ ಬರುತ್ತಿರುವುದು ಅತ್ಯಂತ ಖೇದಕರ ಎಂದರು ಮತ್ತು ಸಂವಿಧಾನದ ಮಹತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ನ್ಯಾಯಾಧೀಶರುಗಳು,ನ್ಯಾಯಾಂಗ ಸಿಬ್ಬಂದಿ ವರ್ಗ, ವಕೀಲರು, ವಿಎಸ್‍ಆರ್ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು. ವಕೀಲರ ಸಂಘದ ಉಪಾಧ್ಯಕ್ಷ ಅಬ್ದುಲ್ ಮಾಜೀದ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ