ಬ್ಯಾಡಗಿ
ರೈತರು, ಮೆಣಸಿನಕಾಯಿ ಬೆಳೆಗೆ ಅತಿಯಾದ ರಸಗೊಬ್ಬರ ಬಳಕೆ ಮಾಡುತ್ತಿದ್ದು, ಅವೈಜ್ಞಾನಿಕವಾಗಿ ಒಣಗಿಸುತ್ತಿದ್ದಾರೆ ಅಲ್ಲದೇ ಹೆಚ್ಚು ಪ್ರಮಾಣದಲ್ಲಿ ನೀರು ಬೆರೆಸಿ ಮಾರಾಟಕ್ಕೆ ತರುತ್ತಿರುವುದರಿಂದ ‘ಸಿಗ್ರೇಟ್ ಬೀಟಲ್’ ಎಂಬ ಸೂಕ್ಷಾಣುಗಳು (ಮೈಕ್ರೋ ಮುಲ್ಯಾಕುಲ್ಸ್) ಮೆಣಸಿನಕಾಯಿ ಉತ್ಪಾದನೆಗಳಲ್ಲಿ ವಿಷದ ಪ್ರಮಾಣ ಹೆಚ್ಚಿಸುತ್ತಿವೆ, ಇದರಿಂದ ವಿದೇಶಗಳಿಗೆ ರಫ್ತಾಗುತ್ತಿರುವ ಮೆಣಸಿನಕಾಯಿ ಮೇಲಿನ ಪದಾರ್ಥಗಳು ತಿರಸ್ಕತಗೊಳ್ಳುತ್ತಿದ್ದು ಇದರಿಂದ ರೈತನಿಗೆ ಹೆಚ್ಚು ನಷ್ಟವಾಗುತ್ತಿದ್ದು ಕೂಡಲೇ ಕೇಂದ್ರ ಸರ್ಕಾರ ಹಾಗೂ ಸಾಂಬಾರು ಮಂಡಳಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ವರ್ತಕರ ಸಂಘದ ಅಧ್ಯಕ್ಷ ಮಾಜಿ ಶಾಸಕ ಸುರೇಶಗೌಡ ಪಾಟೀಲ ಆಗ್ರಹಿಸಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾ ಭವನದಲ್ಲಿ ಸ್ಥಳೀಯ ವರ್ತಕರ ಸಂಘ, ಕೇಂದ್ರ ಸಂಬಾರು ಮಂಡಳಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಮೆಣಸಿನಕಾಯಿ ಗುಣಮಟ್ಟ ಸುಧಾರಣೆ’ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರಯೋಗಾಲಯದ ಪರೀಕ್ಷೆ ಸಂದರ್ಭದಲ್ಲಿ ಮೆಣಸಿನಕಾಯಿ ಪದಾರ್ಥಗಳಲ್ಲಿ ಶೇ.5 ಕ್ಕಿಂತ ಹೆಚ್ಚು ತೇವಾಂಶ ಹಾಗೂ ‘ವಿಷ’ ಪ್ರಮಾಣ ಹೆಚ್ಚೆಂದು ವರದಿ ಬಂದಲ್ಲಿ ವಿದೇಶಕ್ಕೆ ರಫ್ತಾಗುವ ಮೆಣಸಿನಕಾಯಿ ಇಲ್ಲೇ ಉಳಿದುಕೊಳ್ಳಲಿದೆ, ಇದರಿಂದ ಅಂತರಾಷ್ಟ್ರೀಯ ಮಟ್ಟದ ವ್ಯಾಪಾರ ವಹಿವಾಟಿಗಳಿಗೆ ಧಕ್ಕೆಯಾಗಲಿದೆ, ಇಲ್ಲಿಯವರೆಗೂ ವಿಶ್ವದಾದ್ಯಂತ ಉಳಿಸಿಕೊಂಡ ಬಂದಂತಹ ಬ್ಯಾಡಗಿ ಮೆಣಸಿನಕಾಯಿ ಹೆಸರಿಗೆ ಕಪ್ಪು ಚುಕ್ಕೆ ಬೀಳಲಿಕ್ಕೆ ಕಾರಣವಾಗಲಿದೆ ಎಂದರು.
ಮೆಣಸಿನಕಾಯಿ ಮಾರಾಟಕ್ಕೆ ತರುವಾಗ ಬೆಳೆಗೆ ನೀರು ಬೆರೆಸದಂತೆ ಕಳೆದ ಹಲವಾರು ವರ್ಷಗಳಿಂದ, ರೈತರಲ್ಲಿ ಮನವಿ ಮಾಡುತ್ತಾ ಬಂದಿದ್ದೇವೆ, ಅಷ್ಟೇ ಏಕೆ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶದಲ್ಲಿಯೂ ಪ್ರಾದೇಶಿಕ ಭಾಷೆಯಲ್ಲಿ ಭಿತ್ತಿಪತ್ರಗಳನ್ನು ಹಂಚುವ ಮೂಲಕ ಅವರಲ್ಲಿ ಮನವರಿಕೆ ಮಾಡಿಕೊಂಡರೂ ಪ್ರಯೋಜನವಾಗುತ್ತಿಲ್ಲ, ಇದರಿಂದ ಅಂತರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಖ್ಯಾತಿಗೆ ತಕ್ಕಂತೆ ಬ್ಯಾಡಗಿ ತಳಿ ಮೆಣಸಿನಕಾಯಿಯನ್ನು ವಿದೇಶಗಳಿಗೆ ರವಾನೆ ಮಾಡಲು ಸಹಾಯವಾಗುತ್ತಿಲ್ಲ ಇದಕ್ಕೆ ಅಪ್ರತ್ಯಕ್ಷವಾಗಿ ರೈತರೇ ನೇರ ಕಾರಣವೆಂದು ಆರೋಪಿಸಿದರು.
ಶೇ.8 ರಷ್ಟು ವಿದೇಶಕ್ಕೆ ರಫ್ತು: ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ರಾಜ್ಯಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಮೆಣಸಿನಕಾಯಿ ವಾಣಿಜ್ಯ ಬೆಳೆಯಾಗಿ ಪರಿವರ್ತನೆಗೊಂಡ ಬಳಿಕ ಈ ಮೊದಲು ಶೇ.2 ರಷ್ಟು ವಿದೇಶಕ್ಕೆ ರಫ್ತಾಗುತ್ತಿದ್ದ ಪ್ರಮಾಣ ಶೇ.8 ಕ್ಕೇರಿದೆ, ಬ್ಯಾಡಗಿ ಮಾರುಕಟ್ಟೆ ವಹಿವಾಟು 1500 ಕೋಟಿಗೂ ಅಧಿಕವಾಗಿದೆ, ಆದರೆ ಸಾಂಬಾರು ಮಂಡಳಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ರೈತ ಬೆಳೆಗಾರರು ಸೇರಿದಂತೆ ಮೆಣಸಿನಕಾಯಿ ಉದ್ದಿಮೆದಾರರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ, ಸದರಿ ಬೆಳೆಯನ್ನು ವಿಮೆ ವ್ಯಾಪ್ತಿಗೆ ತಂದಲ್ಲಿ ರೈತರ ಸಂಖ್ಯೆ ಹೆಚ್ಚಾಗುವ ಕುರಿತು ಸಾಕಷ್ಟು ಬಾರಿ ಸರ್ಕಾರಗಳಿಗೆ ಮನವಿ ಮಾಡಿಕೊಂಡಿದ್ದೇವೆ ಅದಾಗ್ಯೂ ಯಾರಿಂದಲೂ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ ಎಂದರು.
ಸುಸಜ್ಜಿತ ಪ್ರಯೋಗಾಲಯ (ಲ್ಯಾಬ್)ಬೇಕು:ವರ್ತಕ ಜಗದೀಶಗೌಡ ಪಾಟೀಲ ಮಾತನಾಡಿ, ನಡೆಸುವ ಸಭೆಗಳು ಕಾಟಾಚಾರಕ್ಕೆ ಎನ್ನುವಂತಾಗಬಾರದು ವ್ಯಾಪಾರಸ್ಥರು ಮತ್ತು ರೈತರ ನಡುವೆ ಕೊಂಡಿಯಂತಿರುವ ಸಾಂಬಾರು ಮಂಡಳಿ ಇದುವರೆಗೂ ಪರಿಣಾಮಕಾರಿ ಪ್ರಯೋಗಗಳಾಗಲೀ, ಅಥವಾ ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ತಂತ್ರಜ್ಞಾನವನ್ನು ವಿಸ್ತರಿಸುವಂತಹ ಕಾರ್ಯವಾಗಲಿ ನಡೆದಿಲ್ಲ, ಇಲ್ಲಿನ ವ್ಯಾಪಾರಸ್ಥರು ಸಾವಿರಾರು ರೂ.ಗಳನ್ನು ವ್ಯಯಿಸಿ ಲ್ಯಾಬ್ ಟೆಸ್ಟ್‍ಗೆ ಕಳುಹಿಸಿಕೊಡಲಾಗುತ್ತಿದೆ ಕೂಡಲೇ ವ್ಯಾಪಾರಸ್ಥರ ಅನುಕೂಲಕ್ಕಾಗಿ ಸುಸಜ್ಜಿತ ಲ್ಯಾಬ್‍ವೊಂದನ್ನು ಪ್ರಾರಂಭಿಸುವಂತೆ ಆಗ್ರಹಿಸಿದರು.
ವಿದ್ಯುತ್ ಬಳಕೆ ಮೇಲೆ ಸಹಾಯಧನ ಕೊಡಿ: ಎಪಿಎಂಸಿ ಸದಸ್ಯ ಹಾಗೂ ವರ್ತಕ ಸಿ.ಆರ್.ಪಾಟೀಲ ಮಾತನಾಡಿ, ಇಲ್ಲಿನ ವ್ಯಾಪಾರಸ್ಥರು ನಿರ್ಮಿಸಿರುವ ಖಾರದಪುಡಿ ಫ್ಯಾಕ್ಟರಿ ಹಾಗೂ ಕೋಲ್ಡ್ ಸ್ಟೋರೇಜ್‍ಗಳಿಂದ ಸರ್ಕಾರಕ್ಕೆ ಕೋಟಿಗಟ್ಟಲೇ ಆದಾಯವಿದೆ, ಆದರೆ ಉದ್ದಿಮೆದಾರರ ಅನುಕೂಲಕ್ಕಾಗಿ ಸರ್ಕಾರಗಳಿಂದ ಯಾವುದೇ ಅನುದಾನ ಸಿಗುತ್ತಿಲ್ಲ, ಬದಲಾಗಿ ಬಡ್ಡಿ ಸೇರಿದಂತೆ ವಿವಿಧ ರೀತಿಯ ತೆರಿಗೆಗಳನ್ನು ಕಟ್ಟಿ ವ್ಯಾಪಾರದಲ್ಲಿ ಲಾಭಾಂಶವಿಲ್ಲದಂತಾಗಿದೆ, ಸದರಿ ಉದ್ದಿಮೆಗಳಿಗೆ ಬರುತ್ತಿರುವ ಬೃಹತ್ ಪ್ರಮಾಣದ ವಿದ್ಯುತ್ ಬಿಲ್‍ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ರಾಜ್ಯ ಸರ್ಕಾರ ಪದೇಪದೇ ವಿದ್ಯುತ್ ದರವನ್ನು ಹೆಚ್ಚಿಸುತ್ತಿದ್ದು ಕೆಲವೇ ದಿನಗಳಲ್ಲಿ ಸ್ಥಗಿತಗೊಳ್ಳುವ ಭೀತಿಯಿದೆ, ಉದ್ದಿಮೆದಾರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೂಡಲೇ ವಿದ್ಯುತ್ ಬಿಲ್ ಮೇಲೆ ಸಹಾಯಧನ ನೀಡುವಂತೆ ಆಗ್ರಹಿಸಿದರು.
ವರ್ತಕರ ಪ್ರಶ್ನೆಗಳಿಗೆ ಉತ್ತರಿಸದಾದ ಅಧಿಕಾರಿ: ಸಾಂಬಾರು ಮಂಡಳಿ ಸಹಾಯಕ ನಿರ್ದೇಶಕ ಸುಧಾ ನಾಯಕ್ ಮಾತನಾಡಿ, ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತರಿಸಲು ಮಂಡಳಿಯಿಂದ ಸಾಧ್ಯವಿಲ್ಲ, ಕಾರಣವಿಷ್ಟೇ ಮಂಡಳಿಯಲ್ಲಿ ಸಿಬ್ಬಂದಿಗಳ ಕೊರತೆಯಿದೆ ಇದರಿಂದ ರೈತರು ಮತ್ತು ವ್ಯಾಪಾರಸ್ಥರಿಗೆ ತಾಂತ್ರಿಕತೆ ರವಾನಿಸಲು ಸಾಧ್ಯವಾಗುತ್ತಿಲ್ಲ, ಅದಾಗ್ಯೂ ಹೊರಗುತ್ತಿಗೆ ಅಧಾರದ ಮೇಲೆ ಕೆಲವರಿಗೆ ತರಬೇತಿ ನೀಡಿ ಅವರಿಂದ ರೈತರು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿಕೊಡುವ ಪ್ರಯತ್ನ ನಡಸಿದ್ದೇನೆ, ಸರ್ಕಾರದ ಕೆಲ ನೀತಿಗಳು ಮೆಣಸಿನಕಾಯಿ ಉದ್ದಿಮೆ ಬೆಳವಣಿಗೆಗೆ ಸಾಧ್ಯವಾಗುತ್ತಿಲ್ಲ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಸದನದಲ್ಲಿ ಚರ್ಚಿಸಿ ಪರಿಹಾರ ಹುಡುಕಿಕೊಳ್ಳಬೇಕಾದ ಸ್ಥಿತಿಯಿದೆ ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಕೆ.ಎಸ್.ನಾಯ್ಕರ್, ಉಪಾಧ್ಯಕ್ಷ ಉಳಿವೆಪ್ಪ ಕುರುವತ್ತಿ, ಉದ್ದಿಮೆಗಳಾದ ಜಯಣ್ಣ ಕಬ್ಬೂರ, ಕುಮಾರಗೌಡ ಪಾಟೀಲ, ಉಳಿವೆಪ್ಪ ಕಬ್ಬೂರ, ಶ್ರೀನಿವಾಸ ಬೆಟಗೇರಿ, ಎಂ.ಎನ್.ಆಲದಗೇರಿ, ದತ್ತಾತ್ರೇಯ ಸಾಳುಂಕೆ, ಎನ್.ಎಂ.ದೇಸೂರ, ಕೆ.ಸಿ.ಸೊಪ್ಪಿನಮಠ, ಎಂ.ಬಿ.ಹುಚಗೊಂಡರ, ಬಸವರಾಜ ಶೆಟ್ಟರ, ಪ್ರವೀಣ ಆಲದಗೇರಿ, ಶೈಲೇಶ್ ಬೂದಿಹಾಳಮಠ, ಎ.ವಿ.ಸೊರಟೂರ, ಜಗದೀಶ ರೋಣದ, ನಾಗರಾಜ ಕುಳೇನೂರ, ಶರಣಪ್ಪ ಬೂದಿಹಾಳಮಠ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ