ಬೆಂಗಳೂರು
ಮೋರಿ ಎಂದರೆ ಮೂಗು ಮುರಿಯುವುದು ಸಹಜ,ಆದರೆ ಮೋರಿಯ ಮೇಲೆ ನಂಬಿಕೆಯಿಟ್ಟು ಕಳವು ಮಾಡಿದ ಚಿನ್ನಾಭರಣಗಳನ್ನು ಅದರಲ್ಲಿ ಬಚ್ಚಿಟ್ಟು ನಂತರ ಮಾರಾಟ ಮಾಡಿ ಕುಡಿತ ಮೋಜು ಮಾಡುತ್ತಿದ್ದ ಐನಾತಿ ಮೋರಿ ಕಾಂತ ಆಗ್ನೇಯ ವಿಭಾಗದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಮೋರಿಕಾಂತನ ಜೊತೆಗೆ ಬೆಳಿಗ್ಗೆ ಸೆಂಟ್ರಿಂಗ್ ಕೆಲಸ ಮಾಡಿ ರಾತ್ರಿ ಕನ್ನಗಳವು ಮಾಡುತ್ತಿದ್ದ ಇಬ್ಬರು ಅಂತರಾಜ್ಯ ಖದೀವರನ್ನು ಬಂಧಿಸಿ 1 ಕೆಜಿ 615 ಗ್ರಾಂ ಚಿನ್ನಾಭರಣಗಳು 900 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೆÇಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪೀಣ್ಯ 1ನೇ ಹಂತದ ಕಾಂತರಾಜ್ ಅಲಿಯಾಸ್ ಮೋರಿ ಕಾಂತ (42), ತಮಿಳುನಾಡಿನ ಗುಡಿಯಾತಂನ ಪಾಂಡಿಯನ್ (27) ಹಾಗೂ ಚೆನ್ನೈನ ಕಣ್ಣಗೈ ನಗರದ ಅಣ್ಣಾಮಲೈ (25) ಬಂಧಿತ ಆರೋಪಿಗಳಾಗಿದ್ದು ಅವರನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದರು.
ಕಾಂತನ ಮೋರಿ ಕಥೆ
ಕಳವು ಮಾಡಿದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗುವಾಗ ಬೆನ್ನಟ್ಟಿ ಬಂದ ಸ್ಥಳೀಯರಿಂದ ಮೋರಿಯಲ್ಲಿ ಬಚ್ಚಿಟ್ಟುಕೊಂಡು ತಪ್ಪಿಸಿಕೊಂಡಿದ್ದ ಮೋರಿ ಕಾಂತ ತನ್ನ್ನು ಕಾಪಾಡಿದ ಮೋರಿಯ ಮೇಲೆ ಆಪಾರ ನಂಬಿಕೆ ಹೊಂದಿದ್ದನು, ತನ್ನ ಮುಂದಿನ ಕಳವು ಆಭರಣಗಳನ್ನು ಬಚ್ಚಿಟ್ಟಿ ಮಾರಾಟ ಮಾಡಲು ಮೋರಿಯನ್ನೇ ಅವಲಂಬಿಸಿದ್ದ. ಬೀಗ ಹಾಕಿದ ಮನೆಗಳಿಗೆ ನುಗ್ಗಿ ಕಳವು ಮಾಡಿದ ಚಿನ್ನಾಭರಣಗಳನ್ನು ಬಟ್ಟೆಯಲ್ಲಿ ಕಟ್ಟಿ, ಮೋರಿಯಲ್ಲಿ ಬಚ್ಚಿಟ್ಟು, ಒಂದೆರೆಡು ದಿನಗಳ ನಂತರ ಅವುಗಳನ್ನೆ ತೆಗೆದುಕೊಂಡು ಮಾರಾಟ ಮಾಡಿ, ಮದ್ಯಪಾನ ಇನ್ನಿತರ ದುಶ್ಚಟಗಳಿಗೆ ಬಳಸುತ್ತಿದ್ದ.
ಹಲವು ಕಳ್ಳತನಗಳಲ್ಲಿ ಮೋರಿಯಲ್ಲಿ ಚಿನ್ನಾಭರಣಗಳನ್ನು ಬಚ್ಚಿಟ್ಟಿದ್ದರಿಂದ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಗೆ ಮೋರಿಯ ಮೇಲೆ ನಂಬಿಕೆ ಪ್ರೀತಿ ಹೆಚ್ಚಾಗಿ ಅದನ್ನೇ ಅನುಸರಿಸಿಕೊಂಡು ಬಂದಿದ್ದರಿಂದ ಆತನಿಗೆ ಮೋರಿ ಕಾಂತ ಎನ್ನುವ ಹೆಸರು ಬಂದಿತ್ತು.ಚಿಕ್ಕಬಳ್ಳಾಪುರ ಮೂಲದ ಮೋರಿ ಕಾಂತ, ವಿವಾಹವಾದ ನಂತರ ಪೀಣ್ಯದ ಮೊದಲ ಹಂತದ ಆಂಜನೇಯ ದೇವಸ್ಥಾನದ ಬಳಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದು, ಅಪಾರ್ಟ್‍ಮೆಂಟ್‍ಗಳಲ್ಲಿ ಬೀಗ ಹಾಕಿದ ಮನೆಗಳ ಕನ್ನಗಳವು ಮಾಡುವುದರಲ್ಲಿ ನಿಷ್ಣಾತನಾಗಿದ್ದ.
ಹಿಂದೆ ರಾಜಗೋಪಾಲ ನಗರ, ಆರ್‍ಎಂಸಿ ಯಾರ್ಡ್, ಚಂದ್ರಾಲೇಔಟ್, ವಿಜಯನಗರ, ನಂದಿನಿಲೇಔಟ್, ಕೋರಮಂಗಲ, ಬಸವೇಶ್ವರ ನಗರ, ಪೀಣ್ಯ, ಬಾಣಸವಾಡಿ, ಮಂಡ್ಯ ಹಾಗೂ ತುಮಕೂರುಗಳಲ್ಲಿ ಕೈಚಳಕ ತೋರಿದ್ದ ಮೋರಿ ಕಾಂತ. 10ಕ್ಕೂ ಹೆಚ್ಚು ಕನ್ನಗಳವು ಕೃತ್ಯಗಳನ್ನು ನಡೆಸಿದ್ದ.
ಜೈಲಿನಿಂದ ಮತ್ತೆ ಮೋರಿಗೆ
ಚಿನ್ನಗಳವು ಕೃತ್ಯದ ಸಂಬಂಧ ಈಗಾಗಲೇ ಬಂಧಿತನಾಗಿದ್ದ ಮೋರಿಕಾಂತ, ಕೆಲವು ಪ್ರಕರಣಗಳಲ್ಲಿ ಖುಲಾಸೆ ಹೊಂದಿದ್ದು, ಮೂರು ಪ್ರಕರಣಗಳು ನ್ಯಾಯಾಲಯದ ವಿಚಾರಣೆ ಹಂತದಲ್ಲಿವೆ. ಪೊಲೀಸರಿಂದ ಬಂಧಿತನಾಗಿ ಜೈಲಿಗೆ ಹೋಗಿ ಕೆಲವೇ ದಿನಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬರುತ್ತಿದ್ದ ಆರೋಪಿಯು ದುಶ್ಚಟಗಳಿಗಾಗಿ ಮತ್ತೆ ಕಳ್ಳತನಕ್ಕೆ ಇಳಿಯುತ್ತಿದ್ದ.
ಕೋರಮಂಗಲ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವೊಂದರ ಪತ್ತೆಗಾಗಿ ರಚಿಸಲಾಗಿದ್ದ ಇನ್ಸ್‍ಪೆಕ್ಟರ್ ಮಂಜುನಾಥ್ ನೇತೃತ್ವದ ವಿಶೇಷ ತಂಡ, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತನಿಂದ 1 ಕೆಜಿ 19 ಗ್ರಾಂ ಚಿನ್ನ, 900 ಗ್ರಾಂ ಬೆಳ್ಳಿ ಸೇರಿ 31 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








