ಬ್ಯಾಡಗಿ
ತಾಲೂಕಿನ ಅಳಲಗೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಉಲ್ಬಣಗೊಂಡಿದ್ದು ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ ಘಟನೆ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜರುಗಿದೆ.
ಶುಕ್ರವಾರ ಅಳಲಗೇರಿ ಗ್ರಾಮದಲ್ಲಿ ಜರುಗಿದ ಬ್ಯಾಡಗಿ ಹೋಬಳಿ ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಈ ವಿಷಯದ ಕುರಿತು ಮಾತನಾಡಿದ ಗ್ರಾಮಸ್ಥರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ 8 ರಿಂದ 10 ದಿನಗಳವರೆಗೆ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ಇನ್ನು ಜಾನುವಾರುಗಳಂತೂ ನೀರಿಗಾಗಿ ಪರದಾಡುವಂತಾಗಿದೆ. ನೀರು ಪೂರೈಕೆಯಲ್ಲಿ ಅಸ್ತವ್ಯಸ್ತತೆ ಎದ್ದು ಕಾಣುತ್ತಿದ್ದು ಇದನ್ನು ಸರಿಪಡಿಸುವ ಮೂಲಕ ಗ್ರಾಮಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ವಾಡೇಕರ್ ಮಾತನಾಡಿ, ಅಳಲಗೇರಿ ಗ್ರಾಮದಲ್ಲಿ ಅಂತರ್ಜಲ ಮಟ್ಟ ಬಹಳಷ್ಟು ಕುಸಿತಗೊಂದ್ದು 600 ಅಡಿಗಳಷ್ಟು ಬೋರ್‍ವೆಲ್ ಕೊರೆದರೂ ನೀರು ಬೀಳುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ಇಲಾಖೆಯು ಎನ್‍ಆರ್‍ಇಜಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಭೂಮಿಯ ಅಂತರ್ಜಲ ಮಟ್ಟದ ಕುಸಿತವನ್ನು ನಿವಾರಿಸುವುದಕ್ಕಾಗಿ ಕೆರೆಗಳ ಅಭಿವೃದ್ಧಿ, ಇಂಗುಗುಂಡಿ ನಿರ್ಮಾಣ, ಕೊಳವೆಬಾವಿಗಳ ರಿಚಾರ್ಜ್ ಫಿಟ್ ಮಾಡುವ ಕಾರ್ಯಕ್ಕೆ ಮುಂದಾಗಿದ್ದು ಸಾರ್ವಜನಿಕರು ಸಹ ನೀರನ್ನು ಮಿತವ್ಯಯವಾಗಿ ಬಳಸುವ ಮೂಲಕ ನೀರು ಪೋಲಾಗದಂತೆ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ ಕೆ. ಗುರುಬಸವರಾಜ, ಗ್ರಾಮದಲ್ಲಿ ಕುಡಿಯುವ ನೀರಿನ ಬಗೆ ಹರಿಸಲು ಗ್ರಾಮದಲ್ಲಿರುವ ಖಾಸಗಿ ರೈತರ, ಮಾಲೀಕರ ಬೋರ್‍ವೆಲ್‍ಗಳ ಮೂಲಕ ತಿಂಗಳ ಬಾಡಿಗೆ ಆಧಾರದ ಮೇಲೆ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಲಾಗುತ್ತಿದ್ದು, ಗ್ರಾಮಸ್ಥರು ನೀರಿನ ದುರ್ಬಳಕೆಯಾಗದಂತೆ ಜಾಗೃತೆ ವಹಿಸಬೇಕು. ಜೊತೆಗೆ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಯೂ ಸಹ ಈ ಬಗ್ಗೆ ಗಮನ ಹರಿಸಿ ನೀರು ಪೋಲು ಹಾಗೂ ದುರ್ಬಳಕೆ ಆಗದಂತೆ ಕ್ರಮ ವಹಿಸಬೇಕು ಎಂದರು.
ಪಿಡಬ್ಲ್ಯೂಡಿಯಿಂದ ಎಚ್ಚರಿಕೆ……!!
ಪಿಡಬ್ಲ್ಯೂಡಿ ಇಲಾಖೆಯ ಸಹಾಯಕ ಅಭಿಯಂತರ ಕೆ. ರಾಜಪ್ಪ ಮಾತನಾಡಿ, ಗ್ರಾಮದಲ್ಲಿ ಪಿಡಬ್ಲ್ಯೂಡಿ ಇಲಾಖೆಯಿಂದ ಕೈಗೊಂಡಿರುವ ರಸ್ತೆ ಕಾಮಗಾರಿಯ ಕೆಲವೊಂದು ಭಾಗದಲ್ಲಿ ಗ್ರಾಮಸ್ಥರು ಅನಾವಶ್ಯಕವಾಗಿ ರಸ್ತೆಯನ್ನು ಹಾಳು ಮಾಡುತ್ತಿರುವುದು ಸರಿಯಲ್ಲ, ಜೊತೆಗೆ ರಸ್ತೆಯ ಅಕ್ಕಪಕ್ಕದಲ್ಲಿಯೂ ಸಹ ತಿಪ್ಪೆಗುಂಡಿಗಳನ್ನು, ಬಣವೆಗಳನ್ನು ಹಾಕಿ ರಸ್ತೆ ಸಂಚಾರಕ್ಕೆ ಅನಾನುಕೂಲತೆಯನ್ನು ಮಾಡುವುದಲ್ಲದೇ ರಸ್ತೆಗೂ ಧಕ್ಕೆಯುಂಟಾಗುತ್ತಿದೆ. ಕಾರಣ ಗ್ರಾಮಸ್ಥರು 1 ವಾರದೊಳಗಾಗಿ ರಸ್ತೆಯ ಅಕ್ಕಪಕ್ಕದಲ್ಲಿರುವ ತಮ್ಮ ತಿಪ್ಪೆಗುಂಡಿ ಹಾಗೂ ಬಣವೆಗಳನ್ನು ರಸ್ತೆಯಿಂದ ತೆರವುಗೊಳಿಸಬೇಕು ಇಲ್ಲದೇ ಹೋದಲ್ಲಿ ಇಲಾಖೆಯ ವತಿಯಿಂದ ಅವುಗಳನ್ನು ತೆರವುಗೊಳಿಸುವುದಾಗಿ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ವಿಷಯಗಳ ಕುರಿತು ಚರ್ಚಿಸಿ ಅವುಗಳಿಗೆ ಸೂಕ್ತ ಪರಿಹಾರಗಳನ್ನು ಸೂಚಿಸಲಾಯಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎ.ಟಿ. ಜಯಕುಮಾರ, ಗ್ರಾಪಂ ಅಧ್ಯಕ್ಷ ದಿಳ್ಳೆಪ್ಪ ಮೇಡ್ಲೇರಿ, ಉಪಾಧ್ಯಕ್ಷೆ ನೀಲಮ್ಮ ಕಿತ್ತೂರ, ಸದಸ್ಯರಾದ ನಾಗಪ್ಪ ಯತ್ನಳ್ಳಿ, ಹನುಮಂತಗೌಡ ತಂಗೊಂಡ್ರ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಪುಂಡಲೀಕ ಮಾನವಾರೆ, ವಿಜಯಕುಮಾರ, ಹಾಲೇಶ್. ಟಿ.ವಿಜಯಲಕ್ಷೀ, ಎಮ್.ಎಫ್.ಬಾರ್ಕಿ, ವಾಯ್.ಕೆ.ಮಟಗಾರ. ಎನ್.ಎ.ದೊಡ್ಡಮನಿ, ಎಮ್.ಎಸ್.ಕಬ್ಬಾರ, ಮಂಜುನಾಥ, ಎ.ಎ.ಮುಲ್ಲಾ, ಪಿಡಿಓ ಶಾರದಾ ಕುದರಿ, ಕಾರ್ಯದರ್ಶಿ, ಪ್ರಕಾಶ ಹುಣಸಿಕಟ್ಟಿ, ಗ್ರಾಮಲೆಕ್ಕಾಧಿಕಾರಿ ಶೃತಿ ಮೈದೂರ, ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
