ಕೇಂದ್ರದ ವಿರುದ್ಧ ಎಐಸಿಟಿಯು ಮಷ್ಕರ

ಬೆಂಗಳೂರು

       ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಬರುವ ಜನವರಿ 8 ರಿಂದ ಎರಡು ದಿನಗಳ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಸುವುದಾಗಿ ಪ್ರಮುಖ ಕಾರ್ಮಿಕ ಸಂಘಟನೆ ಎಐಟಿಯುಸಿ ಘೋಷಿಸಿದೆ.

       ನಗರದ ಫ್ರೀಡಂ ಪಾರ್ಕ್‍ನಲ್ಲಿ ಭಾನುವಾರ ಆರಂಭಗೊಂಡ ಮೂರು ದಿನಗಳ ಬಹಿರಂಗ ಸಭೆಯಲ್ಲಿ ಜನವರಿ 8 ರಿಂದ ಎರಡು ದಿನಗಳ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ.

      ಎಐಟಿಯುಸಿ ಕಾರ್ಯಕರ್ತರು ಸಾವಿರಾರು ಕಾರ್ಮಿಕರು,ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ಮೈದಾನದವರೆಗೆ ಮೆರವಣಿಗೆಯಲ್ಲಿ ಆಗಮಿಸಿ ಪಾಲ್ಗೊಂಡ ಸಭೆಯಲ್ಲಿ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ಭಾರೀ ಕಡತಾನದೊಂದಿಗೆ ಬೆಂಬಲಿಸಿದರು.

        ಸಭೆಯಲ್ಲಿ ಪಾಲ್ಗೊಂಡಿದ್ದ ಎಐಟಿಯುಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್ ಜೀತ್ ಕೌರ್,ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮತ್ತು ಹಲವು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಜನವಿರೋಧಿ, ಕಾರ್ಮಿಕ ಹಾಗೂ ಕಾಪೆರ್ರೇಟ್ ಪರ ನೀತಿಗಳಿಂದಾಗಿ ದೇಶದ ಕೋಟ್ಯಂತರ ದುಡಿಯುವ ಜನರ ದೈನಂದಿನ ಬದುಕು ಅಸಹನೀಯವಾಗಿದೆ ಎಂದರು.

         ಸರ್ಕಾರದ ಹಿಡಿತದಲ್ಲಿರುವ ಯುಎಪಿಎ, ಎನ್‍ಎಸ್‍ಎ, ಸಿಬಿಐ, ಎನ್‍ಐಎ ಮತ್ತು ಐಟಿ ಮೊದಲಾದ ಸಂಸ್ಥೆಗಳನ್ನು ಬಳಸಿ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲಾಗುತ್ತಿದೆ. ಅಲ್ಲದೆ, ದೇಶದ ಶಾಂತಿ ಪ್ರಿಯ, ಜಾತ್ಯತೀತ ಪರವಾಗಿರುವ ವ್ಯಕ್ತಿಗಳನ್ನು ಬಂಧಿಸುವ ಮೂಲಕ ಭಯಗ್ರಸ್ತ ವಾತಾವರಣವನ್ನು ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದರು.

         ಮೋದಿ ಸರ್ಕಾರ ಪ್ರಸ್ತುತ ಅಸ್ತಿತ್ವದಲ್ಲಿರುವ 44 ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸಿ 4 ಕಾರ್ಮಿಕ ಸಂಹಿತೆಗಳಾಗಿ ಬಂಡವಾಳ ಪರ ತಿದ್ದುಪಡಿ ತರಲು ಹೊರಟಿದೆ. ಈಗಾಗಲೇ ವೇತನಗಳ ಕುರಿತು ಕಾರ್ಮಿಕ ಸಂಹಿತೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.ಅಲ್ಲದೆ, ಇಂಡಸ್ಟ್ರಿಯಲ್ ಎಂಪ್ಲಾಯ್‍ಮೆಂಟ್ (ಸ್ಥಾಯಿ ಆದೇಶಗಳು) ಕಾಯ್ದೆಗೆ ತಿದ್ದುಪಡಿ ತಂದು ನಿಗದಿತ ಅವಧಿಯ ಉದ್ಯೋಗವನ್ನು (ಫಿಕ್ಸೆಡ್ ಟರ್ಮ್ ಎಂಪ್ಲಾಯ್‍ಮೆಂಟ್) ಎಲ್ಲಾ ಕ್ಷೇತ್ರಗಳಲ್ಲಿ ಜಾರಿಗೊಳ್ಳಲು ಮುಕ್ತ ಅವಕಾಶ ನೀಡಿ ಕಾಯಂ ಸ್ವರೂಪದ ಕೆಲಸವಿಲ್ಲದಂತೆ ಮಾಡಿದೆ ಎಂದು ದೂರಿದರು.

ಕಲ್ಯಾಣ ಯೋಜನೆ ನಿರ್ಲಕ್ಷ್ಯ

        7ನೇ ವೇತನ ಆಯೋಗವು 18 ಸಾವಿರ ಕನಿಷ್ಠ ವೇತನ ನಿಗದಿ ಮಾಡಬೇಕೆಂದು ಶಿಫಾರಸು ಮಾಡಿ 2 ವರ್ಷಗಳಾದರೂ ದೇಶವ್ಯಾಪಿ ಇದರ ಜಾರಿಗೆ ಮುಂದಾಗುತ್ತಿಲ್ಲ. ದೇಶದಲ್ಲಿ ಸುಮಾರು 148 ರೀತಿಯ ನಾನಾ ಕಸಬುಗಳಲ್ಲಿ ತೊಡಗಿರುವ ಶೇ.93 ರಷ್ಟಿರುವ ಮನೆ ಕೆಲಸಗಾರರು, ಕಟ್ಟಡ ನಿರ್ಮಾಣದ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಆಟೋ ಚಾಲಕರು, ಹಮಾಲಿಗಳು ಹಾಗೂ ಇನ್ನಿತರೆ ಅಸಂಘಟಿತ ಕಾರ್ಮಿಕರು ಸಾಮಾಜಿಕ ಭದ್ರತೆಯಿಲ್ಲದೆ ದುಡಿಯುತ್ತಿದ್ದಾರೆ.ಇನ್ನೂ, ಅವರಿಗೆ ಸಂಬಂಧಿಸಿದ ಮಂಡಳಿಗಳಿಗೆ ಕೇಂದ್ರ ಸರಕಾರ ಬಜೆಟ್‍ನಲ್ಲಿ ಹಣ ನೀಡದೆ ಕಲ್ಯಾಣ ಯೋಜನೆಗಳನ್ನು ಮೊಟಕುಗೊಳಿಸುತ್ತಿದೆ ಎಂದು ಆರೋಪಿಸಿದರು.

       ಅಂತಾರಾಷ್ಟ್ರೀಯ-ರಾಷ್ಟ್ರೀಯ ಕಾರ್ಪೋರೇಟ್‍ಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಯಿಂದಾಗಿ ದೇಶಿಯ ಉತ್ಪಾದನಾ ಸಾಮಥ್ರ್ಯ ಮತ್ತು ಆರ್ಥಿಕತೆಯ ಮೇಲೆ ಗಂಭೀರ ಪೆಟ್ಟು ಬೀಳುತ್ತಿದೆ. ಇಂತಹ ನೀತಿಗಳನ್ನು ಕಾರ್ಮಿಕ ವರ್ಗ ತನ್ನ ಶಕ್ತಿಯ ಮೂಲಕ ಜನಪರವಾಗಿ ಬದಲಾಯಿಸಬೇಕಿದೆ.ಹೀಗಾಗಿ, ಕೇಂದ್ರದ ವಿರುದ್ಧ ಕಾರ್ಮಿಕ ವರ್ಗ ತನ್ನ ಬಲಿಷ್ಠ ಪ್ರತಿರೋಧದ ಧ್ವನಿ ಎತ್ತಬೇಕಿದೆ ಎಂದು ಕರೆ ನೀಡಿದರು.ಸಭೆಯಲ್ಲಿ ಎಐಟಿಯುಸಿ ರಾಷ್ಟ್ರೀಯ ಅಧ್ಯಕ್ಷ ರಮಣೇಂದ್ರ ಸಿಂಗ್, ಹೆಚ್.ಮಹದೇವನ್, ಉಪಾಧ್ಯಕ್ಷ ಗುರುದಾಸ್ ಗುಪ್ತ, ಎಐಟಿಯುಸಿ ರಾಜ್ಯಾಧ್ಯಕ್ಷ ಹೆಚ್.ವಿ. ಅನಂತ್ ಸುಬ್ಬರಾವ್, ಎಂ.ಡಿ.ಹರಿಗೋವಿಂದ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link