ಮರಳು ತುಂಬಲು ಅವಕಾಶವಿಲ್ಲ : ಮಣ್ಣು ಹೊಡೆದುಕೊಳ್ಳಲು ತಕರಾರಿಲ್ಲ-ಮಾಧುಸ್ವಾಮಿ

ಹುಳಿಯಾರು

       ಯಾವುದೇ ಕೆರೆಯಲ್ಲಿ ಮರಳು ತೆಗೆಯಲು ಖಂಡಿತ ಅವಕಾಶ ಕೊಡುವುದಿಲ್ಲ. ಆದರೆ ಮಣ್ಣು ತೆಗೆದು ಕೊಳ್ಳಲು ನಮ್ಮ ತಕರಾರಿಲ್ಲ ಎಂದು ಶಾಸಕರಾದ ಜೆ.ಸಿ.ಮಾಧುಸ್ವಾಮಿ ಇಟ್ಟಿಗೆ ಕಾರ್ಖಾನೆ ಮಾಲೀಕರಿಗೆ ಭರವಸೆ ನೀಡಿದರು.

         ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಧ್ಯ ಪ್ರವೇಶಿಸಿದ ನೂರಕ್ಕೂ ಹೆಚ್ಚು ಇಟ್ಟಿಗೆ ಕಾರ್ಖಾನೆ ಮಾಲೀಕರು ಶಾಸಕರಲ್ಲಿ ಹಾಗೂ ಉಪವಿಭಾಗಾಧಿಕಾರಿಗಳಲ್ಲಿ ತಮ್ಮ ಸಮಸ್ಯೆ ಬಿಚ್ಚಿಟ್ಟರು. ಈ ಭಾಗದಲ್ಲಿ ಮಳೆ ಬೆಳೆಯಿಲ್ಲದೆ ದಶಕಗಳೆ ಕಳೆದಿದ್ದು ರೈತರ ತೋಟ ನಾಶವಾಗಿ ಉಪಕಸುಬಾಗಿ ಇಟ್ಟಿಗೆ ತಯಾರಿಸಿಕೊಂಡು ಬರುತ್ತಿದ್ದು ಇದರಲ್ಲಿ ಸಾವಿರಾರು ಕುಟುಂಬಗಳು ಅವಲಂಬಿತರಾಗಿದ್ದಾರೆ. ಇತ್ತೀಚೆಗೆ ಕೆಲವರು ಕೆರೆಯಿಂದ ಮಣ್ಣು ಹೊಡೆದುಕೊಳ್ಳಲು ಅವಕಾಶ ನೀಡದೆ ಸಮಸ್ಯೆಯುಂಟು ಮಾಡುತ್ತಿದ್ದಾರೆ. ಹಾಗಾಗಿ ನಮ್ಮ ತುತ್ತಿನ ಚೀಲ ತುಂಬಲು ಪರದಾಡುವ ಸ್ಥಿತಿಯಿದ್ದು, ಈ ಬಗ್ಗೆ ತಾವುಗಳು ಮಧ್ಯ ಪ್ರವೇಶಿಸಿ ಇಟ್ಟಿಗೆ ಕಾರ್ಖಾನೆ ಬಳಕೆಗೆ ಕೆರೆಯ ಮಣ್ಣು ತೆಗೆದುಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

        ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮರಳು ತೆಗೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಕೆರೆಯಲ್ಲಿ ಹೂಳು ತೆಗೆಯಲು ಸರ್ಕಾರವೇ ಲಕ್ಷಾಂತರ ರೂಪಾಯಿ ವ್ಯಯ ಮಾಡುತ್ತಿದ್ದು ಕೆರಗಳಲ್ಲಿ ಹೂಳು ಹಾಗೂ ಮಣ್ಣು ತೆಗೆಯಲು ನಮ್ಮದೇನೂ ಅಭ್ಯಂತರವಿಲ್ಲ ಎಂದರಲ್ಲದೆ, ಪೊಲೀಸರಿಗೆ ಕೂಡ ಈ ಬಗ್ಗೆ ತೊಂದರೆ ಕೊಡಬೇಡಿ ಎಂದು ಸೂಚಿಸಿದರು. ನೀರಾವರಿ ಇಲಾಖೆಯ ಕಾರ್ಯದರ್ಶಿಯವರೊಂದಿಗೆ ಮಾತನಾಡಿ, ತಾಲ್ಲೂಕಿನ ಸುಮಾರು 80 ಕೆರೆಗಳನ್ನು ಪಟ್ಟಿಮಾಡಿ ಕೆರೆಯಲ್ಲಿ ಮಣ್ಣು ತೆಗೆಯಲು ಅವಕಾಶ ಕಲ್ಪಿಸಲು ಸೂಚಿಸಿದರು.

         ಇದೇ ಸಂದರ್ಭದಲ್ಲಿ ತಿಪಟೂರು ಉಪವಿಭಾಗಧಿಕಾರಿ ಪೂವಿತಾ ಮಾತನಾಡಿ, ನಿಮ್ಮಗಳ ಸಮಸ್ಯೆ ಬಗ್ಗೆ ನಾನು ಸ್ಥಳ ಪರಿಶೀಲನೆ ಮಾಡಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಯವರೊಂದಿಗೆ ಸಮಾಲೋಚಿಸಿ, ಅವರಿಂದ ಮಣ್ಣು ತೆಗೆಯಲು ಅನುಮತಿ ಪತ್ರ ತರಿಸಿಕೊಳ್ಳುವತನಕ ಕಾಯುವಂತೆ ಸೂಚಿಸಿದರು.

          ಹುಳಿಯಾರು ಹೋಬಳಿ ಇಟ್ಟಿಗೆ ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ಸುಧೀರ್, ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್, ಹೊಸಳ್ಳಿ ಜಯಣ್ಣ, ಬರಕನಾಳ್ ವಿಶ್ವನಾಥ್, ಗುತ್ತಿಗೆದಾರ ಶಿವಕುಮಾರ್, ಕರಡಿ ಜಯಣ್ಣ, ಬಸವರಾಜು, ನಂದಿಹಳ್ಳಿ ಶಿವಣ್ಣ, ಶಿವಕುಮಾರ್ ಮೊದಲಾದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link