ಕೊರಟಗೆರೆ
ಮನೆ ಮಾಲಿಕರಿಲ್ಲದ ಮನೆಯನ್ನೇ ಟಾರ್ಗೆಟ್ ಮಾಡಿ, ಹಗಲಿನ ವೇಳೆ ಮಾಹಿತಿ ಸಂಗ್ರಹಿಸಿ, ಪ್ರತ್ಯೇಕವಾಗಿ ಎರಡುಕಡೆ ಮೂರು ಮನೆಗಳಲ್ಲಿ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಸೋಮವಾರ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ತಾಲ್ಲೂಕಿನ ಅರಸಾಪುರ ಬಳಿಯ ಭೈರೇನಹಳ್ಳಿ ಗ್ರಾಮದಲ್ಲಿ ಘಟನೆ ಜರುಗಿದೆ. ಶಾರದಮ್ಮ, ರವಿಕುಮಾರ್ ಮತ್ತು ಅರಸಾಪುರದ ಪ್ರಕಾಶ್ ಎಂಬುವರು ಮನೆಯಲ್ಲಿ ಇಲ್ಲದ ಮಾಹಿತಿ ಕಲೆ ಹಾಕಿ ಮಧ್ಯರಾತ್ರಿ ಮನೆಯ ಬೀಗ ಮುರಿದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಅರಸಾಪುರ ಗ್ರಾಮದ ಪ್ರಕಾಶ್ಎಂಬುವರ ಮನೆಯ ಬೀಗ ಒಡೆದು, ಬೀರುವಿನಲ್ಲಿದ್ದ 65 ಗ್ರಾಂ ಬಂಗಾರ, 30 ಸಾವಿರ ಬೆಲೆ ಬಾಳುವ ಎರಡು ಜೊತೆ ಓಲೆ, 30ಸಾವಿರ ನಗದು, ಟಿವಿ, ಹೋಂ ಥಿಯೇಟರ್ಸ್ ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಅಲ್ಲದೆ ಪಕ್ಕದ ಭೈರೇನಹಳ್ಳಿ ಗ್ರಾಮದ ರವಿಕುಮಾರ್ ಸಂಬಂಧಿಕರ ಮದುವೆ ಕಾರ್ಯಕ್ಕೆ ಹೋಗಿದ್ದರು. ಈ ಮಾಹಿತಿ ಪಡೆದು ಮನೆಯ ಬೀಗ ಒಡೆದು ಬೀರುವಿನಲ್ಲಿದ್ದ 2ಲಕ್ಷರೂ. ನಗದು, 1 ಜೊತೆ ಹ್ಯಾಂಗಿಗ್ಸ್, 4 ಉಂಗುರ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ನಂತರ ಇದೇ ಗ್ರಾಮದ ಬನಶಂಕರಿ ಬೇಕರಿಯ ಮಾಲೀಕರಾದ ಶಾರದಮ್ಮ ಎಂಬುವರು ಮನೆಯಿಂದ ರಾತ್ರಿ 3ಗಂಟೆ ವೇಳೆಯಲ್ಲಿ ಕೆಲಸ ಮಾಡಲು ಬೇಕರಿಗೆ ಬರುತ್ತಾರೆ ಎಂಬ ಮಾಹಿತಿ ಅರಿತು ಅವರು ಬೇಕರಿಗೆ ಬಂದ ನಂತರ ಮನೆಯ ಬೀಗ ಒಡೆದು ಮನೆಯಲ್ಲಿದ್ದ 30ಗ್ರಾಂ ನೆಕ್ಲೇಸ್, 5 ಉಂಗುರ, 25 ಗ್ರಾಂ ಚಿಕ್ಕ ನೆಕ್ಲೇಸ್, 2 ಕೆನ್ನೆ ಚೈನ್, 1 ಬ್ರೇಸ್ಲೆಟ್ ಮತ್ತು 50 ಸಾವಿರ ನಗದು ಹಣವನ್ನು ಕದ್ದು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ತುಮಕೂರು ಬೆರಳಚ್ಚು ತಜ್ಞ ಮತ್ತು ಶ್ವಾನದಳ ತಂಡ ಕಳ್ಳತನ ನಡೆದ ಮೂರು ಮನೆಗಳಿಗೆ ಭೇಟಿ ನೀಡಿ, ತಪಾಸಣೆ ನಡೆಸಿದ್ದು, ಕೊರಟಗೆರೆ ಸಿಪಿಐ ಮುನಿರಾಜು, ಪಿಎಸ್ಐ ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ