ತುರುವೇಕೆರೆ
ತಾಲ್ಲೂಕಿನ ದಂಡಿನಶಿವರ ಗ್ರಾಮದಲ್ಲಿರುವ ಎಸ್.ಬಿ.ಐ ಶಾಖೆಯನ್ನು ಮುಚ್ಚದಂತೆ ಒತ್ತಾಯಿಸಿ ಮುಖಂಡರು ಹಾಗೂ ನೂರಾರು ಗ್ರಾಹಕರು ಶುಕ್ರವಾರ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು.
ಹಿರಿಯ ಮುಖಂಡ ಗಂಗಾಧರಗೌಡ ಮಾತನಾಡಿ ಸುಮಾರು 4 ವರ್ಷಗಳಿಂದ ಎಸ್.ಬಿ.ಐ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದ್ದು ಸುಮಾರು 2 ಸಾವಿರಕ್ಕೂ ಹೆಚ್ಚು ಗ್ರಾಹಕರು ಖಾತೆ ಹೊಂದಿದ್ದು ದಿನ ನಿತ್ಯ ವ್ಯವಹಾರ ಮಾಡಲಿದ್ದಾರೆ. ಆದರೆ ಇತ್ತೀಚೆಗೆ ಬ್ಯಾಂಕ್ ಮುಚ್ಚಿ ಅಮ್ಮಸಂದ್ರ ಶಾಖೆಗೆ ವಿಲೀನ ಮಾಡಲಾಗುವುದು ಎಂದು ನೊಟೀಸ್ ಹಾಕಲಾಗಿತ್ತು. ಬ್ಯಾಂಕ್ ಸಿಬ್ಬಂದಿ ಗ್ರಾಹಕರ ಜೊತೆ ಸರಿಯಾಗಿ ವರ್ತಿಸದೆ ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು.
ದಂಡಿನಶಿವರ ಹೋಬಳಿ ಕೇಂದ್ರವಾಗಿದ್ದು ಆಸ್ಪತ್ರೆ, ಅಂಚೆ ಕಚೇರಿ, ಬೆಸ್ಕಾಂ ಇಲಾಖೆ, ಪ್ರಥಮ ದರ್ಜೆ ಕಾಲೇಜು, ಗ್ರಾಮ ಪಂಚಾಯ್ತಿ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ನಾಡಕಚೇರಿ ಸೇರಿದಂತೆ ಹಲವಾರು ಸರ್ಕಾರಿ ಕಚೇರಿಗಳಿದ್ದು ನಿತ್ಯ ನೂರಾರು ಸರ್ಕಾರಿ ನೌಕರರು ಆಗಮಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇದಲ್ಲದೆ ಹೋಬಳಿಯ ಸುಮಾರು 33 ಗ್ರಾಮಗಳ ಜನರಿಗೂ ಇದೇ ಬ್ಯಾಂಕ್ ಅವಲಂಬಿತವಾಗಿದೆ. ಆದ್ದರಿಂದ ಬ್ಯಾಂಕ್ ಮುಚ್ಚದಂತೆ ಒತ್ತಾಯಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್.ಬಿ.ಐ ರೀಜನಲ್ ಮ್ಯಾನೇಜರ್ ಗಣೇಶ್ ಹಾಗೂ ಸಂಸದ ಮುದ್ದಹನುಮೇಗೌಡರಿಗೂ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರೇಗೌಡ, ಡಿ.ಟಿ.ವೆಂಕಟೇಶ್, ಬೋರೇಗೌಡರು, ಡಿ.ಕೆ.ವೆಂಕಟೇಶ್, ಆನಂದಮೂರ್ತಿ, ತಿಮ್ಮೇಗೌಡ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








