ಚಳ್ಳಕೆರೆ
ಕಳೆದ ಹತ್ತಾರು ವರ್ಷಗಳಿಂದ ಬೀಕರ ಬರಗಾಲದ ಸ್ಥಿತಿಯಲ್ಲಿ ನಲುಗಿ ಹೋಗಿರುವ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳ ಲಕ್ಷಾಂತರ ರೈತರ ಬದುಕಿಗೆ ತಿರುವು ನೀಡುವ ಭದ್ರಾ ಮೇಲ್ದಂಡೆ ಯೋಜನೆಯ ನೀರು ಜನವರಿ-2019ರ ಅಂತ್ಯದೊಳಗೆ ನಮ್ಮ ಜಿಲ್ಲೆಯ ವಿವಿ ಸಾಗರ ಪ್ರವೇಶ ಮಾಡಲಿದೆ ಎಂದು ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ತಿಳಿಸಿದ್ಧಾರೆ.
ಅವರು, ಶನಿವಾರ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಕೆಪಿಸಿಸಿ ಜಿಲ್ಲಾಧ್ಯಕ್ಷ ಫ್ಯಾತರಾಜನ್ ಮತ್ತು ಇನ್ನಿತರ ಮುಖಂಡರೊಂದಿಗೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿ ವೀಕ್ಷಿಸುವ ಸಂದರ್ಭದಲ್ಲಿ ಮಾಹಿತಿ ನೀಡಿ, ಜನವರಿ ಅಂತ್ಯದೊಳಗೆ ಚಿತ್ರದುರ್ಗ ಜಿಲ್ಲೆಗೆ ನೀರು ಬರುವುದು ಖಚಿತವೆಂದಿದ್ಧಾರೆ.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಈಗಾಗಲೇ ಸಂಬಂಧಪಟ್ಟ ಭದ್ರಾ ಮೇಲ್ದಂಡೆ ಯೋಜನೆ ಹಿರಿಯ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿದ್ದು, ಕಡೇ ಪಕ್ಷ ಜನವರಿ ಅಂತ್ಯದೊಳಗಾದರೂ ನಮ್ಮ ಜಿಲ್ಲೆಯ ವಿವಿ ಸಾಗರಕ್ಕೆ ನೀರು ಕೊಡಲೇ ಬೇಕೆಂದು ಒತ್ತಾಯ ಪಡಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ನಡೆಸಿದ್ದು, ಎಲ್ಲರ ಅಭಿಪ್ರಾಯದಂತೆ ಜನವರಿ-2019ರಲ್ಲಿ ಜಿಲ್ಲೆಗೆ ನೀರು ಗ್ಯಾರಂಟಿ ಎಂದಿದ್ಧಾರೆ. ಭದ್ರಾ ಮೇಲ್ದಂಡೆ ಕಾಮಗಾರಿ ಅನುಷ್ಠಾನ ನಿಗದಿತ ಅವಧಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲವೆಂಬ ಆತಂಕ ನಮ್ಮಲ್ಲಿದ್ದರೂ ಕೆಲವೊಂದು ತಾಂತ್ರಿಕ ಅಡಚಣೆಗಳು ವಿಳಂಬಕ್ಕೆ ಕಾರಣವಾಗಿವೆ. ಪ್ರಸ್ತುತ ಇಂದಿನ ಕಾಮಗಾರಿ ಪ್ರಗತಿ ವೀಕ್ಷಿಸಿದಾಗ ನಮಗೆ ಜನವರಿಯಲ್ಲಿ ನೀರು ಬರುವುದು ಖಾತರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಫ್ಯಾತರಾಜನ್ ಇನ್ನಿತರ ಮುಖಂಡರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
