ಗೌಡನ ಕೆರೆಗೆ ಬಾಗಿನ ಅರ್ಪಿಸಿದ ಎಂಪಿಆರ್

ಹೊನ್ನಾಳಿ:

        ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.ತುಂಬಿ ತುಳುಕುತ್ತಿರುವ ನ್ಯಾಮತಿ ತಾಲೂಕಿನ ಕುಂಕುವ ಗ್ರಾಮದ ಗೌಡನ ಕೆರೆಗೆ ಶನಿವಾರ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಬಳಿಕ ಅವರು ಮಾತನಾಡಿದರು.

      ಕೆರೆಗಳು ಜೀವಜಗತ್ತಿನ ಜೀವನಾಡಿಗಳಾಗಿವೆ. ಕೆರೆಗಳು ಇಲ್ಲದಿದ್ದರೆ ಸಕಲ ಜೀವ ಸಂಕುಲ ನಾಶವಾಗುತ್ತದೆ. ಆದ್ದರಿಂದ, ಎಲ್ಲರೂ ಕೆರೆಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.

      ಇಂದು ಸಾಮಾನ್ಯವಾಗಿ ಜನರು ತಾನು, ತನ್ನ ಕುಟುಂಬ ಎಂಬ ಸ್ವಾರ್ಥದ ಜೀವನ ನಡೆಸುವ ಕಾಲದಲ್ಲಿ ತಾನು ಹುಟ್ಟಿ ಬೆಳೆದ ಗ್ರಾಮದ ಜನತೆ, ದನ-ಕರುಗಳ ಹಿತಕ್ಕಾಗಿ ಯಾವುದೇ ಸರಕಾರಿ ಆನುದಾನದ ನೆರವು ಪಡೆಯದೇ ಸುಮಾರು 15 ಲಕ್ಷ ರೂ.ಗಳಷ್ಟು ತನ್ನ ಸ್ವಂತ ಹಣ ಖರ್ಚು ಮಾಡಿ ಕೆರೆಗೆ ನೀರು ತುಂಬಿಸುವ ಮೂಲಕ ನಿವೃತ್ತ ಕಂದಾಯ ಅಧಿಕಾರಿ ಚಂದ್ರಾನಾಯ್ಕ ಆಧುನಿಕ ಭಗೀರಥನಾಗಿದ್ದಾರೆ. ಇವರ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

      ಗೌಡನ ಕೆರೆ ಸುಮಾರು 48 ಎಕರೆ ಹಾಗೂ ಪರಸಪ್ಪನ ಕೆರೆ 11 ಎಕರೆಗಳಷ್ಟು ವಿಸ್ತೀರ್ಣ ಹೊಂದಿದೆ. ತಾಲೂಕಿನ ಕುಂಕುವ ಗ್ರಾಮದ ಗೌಡನ ಕೆರೆ ಸುಮಾರು 15 ವರ್ಷಗಳಿಂದ ನೀರಿಲ್ಲದೇ ಒಣಗಿತ್ತು. ಕುಂಕುವ ಪಕ್ಕದ ಗ್ರಾಮವಾದ ಕೂಗೋನಹಳ್ಳಿಯ ಚಂದ್ರಾನಾಯ್ಕ ಅವರು ಕರ್ನಾಟಕ ಗೃಹ ಮಂಡಳಿಯಲ್ಲಿ ಕಂದಾಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿಯಾಗಿದ್ದು, ತಾನು ದುಡಿದ ಹಣದಿಂದಲೇ ಒಣಗಿದ್ದ ಕೆರೆಗೆ ಕಾಯಕಲ್ಪ ನೀಡಿದ್ದಾರೆ. ತನ್ಮೂಲಕ ಜನ-ಜಾನುವಾರುಗಳು, ಪ್ರಾಣಿ-ಪಕ್ಷಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ಇದು ಶ್ಲಾಘನೀಯ ಎಂದು ಹೇಳಿದರು.

     ಕೆರೆಗೆ ಕಾಯಕಲ್ಪ ನೀಡಿದ ನಿವೃತ್ತ ಕಂದಾಯ ಅಧಿಕಾರಿ ಚಂದ್ರಾನಾಯ್ಕ, ಅವರ ಪತ್ನಿ ಜಯಲಕ್ಷ್ಮೀ ಮತ್ತು ಕುಟುಂಬದವರನ್ನು ಕುಂಕುವ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಸನ್ಮಾನಿಸಿದರು.

        ಜಿಪಂ ಸದಸ್ಯ ಎಂ.ಆರ್. ಮಹೇಶ್, ಎಪಿಎಂಸಿ ನಿರ್ದೇಶಕ ಹನುಮಂತಪ್ಪ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಹೇಶ್ವರಪ್ಪ, ಜೆ.ಕೆ. ಸುರೇಶ್ ಇತರರು ಮಾತನಾಡಿದರು.

        ಗ್ರಾಪಂ ಅಧ್ಯಕ್ಷ ಡಿ. ರುದ್ರೇಶ್, ಉಪಾಧ್ಯಕ್ಷೆ ಜಯಮ್ಮ, ತಾಪಂ ಸದಸ್ಯೆ ಛಾಯಾ ಅರಸ್, ಮುಖಂಡರಾದ ದೇವರಾಜ್ ಅರಸ್, ಹಾಲಪ್ಪ, ರುದ್ರಪ್ಪ, ಮಂಜಪ್ಪ, ಆನಂದ್, ಚಂದ್ರಾನಾಯ್ಕ ಅವರ ಮಗ ಹಾಗೂ ಕುಟುಂಬ ವರ್ಗದವರು ಸೇರಿದಂತೆ ಗ್ರಾಮಸ್ಥರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link