ದಾವಣಗೆರೆ:
ಸರ್ಕಾರ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸದಿದ್ದರೂ ಒಂದು ವಾರದ ಮಟ್ಟಿಗಾದರು ತಂಬಾಕನ್ನು ನಿಷೇಧಿಸಿದರೆ ತಂಬಾಕು ಬಳಕೆ ಕಡಿಮೆಯಾಗಬಹುದು ಎಂದು ಜಿಲ್ಲಾ ಪಂಚಾಯತ್‍ನ ಅಧ್ಯಕ್ಷೆ ಶೈಲಜಾ ಬಸವರಾಜ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್, ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಧಿಕಾರಿಗಳ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಹಾಗೂ ಸಿ.ಜಿ. ಸ್ಕೂಲ್ ಆಫ್ ನರ್ಸಿಂಗ್ ಇವುಗಳ ಸಂಯುಂಕ್ತಾಶ್ರಯದಲ್ಲಿ ಶುಕ್ರವಾರ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಕೆ.ಆರ್. ಮಾರ್ಕೆಟ್ ಹತ್ತಿರ ಇಲ್ಲಿ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಜಿಲ್ಲೆಯೂ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸುಶಿಕ್ಷಿತರಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹೆಚ್ಚಾಗಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ ಎಂದು ಹೇಳಿದರು.
ತಂಬಾಕು ಉತ್ಪನ್ನಗಳಿಗೆ ಇಂದೇ ವಿದಾಯ ಹೇಳಿ.. ತಂಬಾಕು ತಿನ್ನುವುದು ನಿನ್ನ ಚಟ, ಮಾಡುವುದು ಬಾಳನ್ನು ಹರಿದ ಪುಟ.. ತಂಬಾಕು ರಹಿತ ಜೀವನ ಆರೋಗ್ಯಕ್ಕೆ ಸೋಪಾನ.. ಸೇದಬೇಡಿ ಸೇದಬೇಡಿ ಬೀಡಿ ಸಿಗರೇಟ್ ಸೇದಬೇಡಿ.. ಬನ್ನಿ ಬನ್ನಿ ತಂಬಾಕು ಮುಕ್ತ ಸಮಾಜ ನಿರ್ಮಿಸೋಣ ಬನ್ನಿ.. ಎಂಬ ಘೋಷಣೆಗಳನ್ನು ಜಾಥಾ ಕಾರ್ಯಕ್ರಮದಲ್ಲಿ ಕೂಗುವ ಮೂಲಕ ಜನರಲ್ಲಿ ವಿಶ್ವ ತಂಬಾಕು ದಿನದ ಕುರಿತು ಜಾಗೃತಿ ಮೂಡಿಸಲಾಯಿತು.
ಇದೇ ವೇಳೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಜಿಲ್ಲೆಯನ್ನು ಒಂದು ವರ್ಷದೊಳಗಾಗಿ ತಂಬಾಕು ಮುಕ್ತ ಜಿಲ್ಲೆಯನ್ನಾಗಿಸುವ ಪರಿಕಲ್ಪನೆಯೊಂದಿಗೆ ಸಿದ್ದಪಡಿಸಲಾದ ಯೋಜನೆ ಪುಸ್ತಕವನ್ನು ಜಿ.ಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್.ಚೇತನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಎಂ.ಎಸ್. ತ್ರಿಪುಲಾಂಭ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಿದ್ದೇಶ್, ದಂತ ವಿಜ್ಞಾನ ಮಹಾವಿದ್ಯಾಲಯದ ಓರಲ್ ಮೆಡಿಸಿನ್ ವಿಭಾಗ ಮುಖ್ಯಸ್ಥೆ ಡಾ. ರಾಜೇಶ್ವರಿ ಅಣ್ಣಿಗೇರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಭು ಎನ್. ಬಡಿಗೇರ, ಡಿಡಿಪಿಐ ಪರಮೇಶ್ವರಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಕಾರ್ಯಕ್ರಮಾಧಿಕಾರಿಗಳಾದ ಡಾ. ಗಂಗಾಧರ ಕೆ.ಹೆಚ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್. ಉಮಾಪತಿ ದಂತವೈಧ್ಯ ಡ. ತಿಪ್ಪೇಸ್ವಾಮಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ರಾಘವನ್, ಮಕ್ಕಳ ತಜ್ಞ ಡಾ. ಮಾಜೆಗೌಡ್ರು ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
