ಕರ್ನಾಟಕದ ಡಿಸ್ನಿಲ್ಯಾಂಡ್: ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಆರಂಭ -ಡಿಕೆಶಿ

ಕೆಆರ್‍ಎಸ್

        ವಿಶ್ವವಿಖ್ಯಾತ ಕೆಆರ್‍ಎಸ್ ಉದ್ಯಾನವನವನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಮೇಲ್ದರ್ಜೆಗೆ ಏರಿಸುವ ಯೋಜನೆಗೆ ಇನ್ನೊಂದು ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.

         ಜಾಗತಿಕ ಟೆಂಡರ್ ಮೂಲಕ ವಿಶ್ವಮಟ್ಟದ ಸಂಸ್ಥೆಗೆ ಯೋಜನೆ ಗುತ್ತಿಗೆ ವಹಿಸಲಾಗುವುದು. ರಾಜ್ಯ ಸರಕಾರ ಒಂದು ಪೈಸೆ ಬಂಡವಾಳ ಹೂಡುವುದಿಲ್ಲ. ಟೆಂಡರ್‍ನಲ್ಲಿ ಭಾಗವಹಿಸುವ ಸಂಸ್ಥೆ ಉತ್ತಮ ಆರ್ಥಿಕ ಹಿನ್ನೆಲೆ, ಕಲಾತ್ಮಕ ವಿನ್ಯಾಸದಲ್ಲಿ ಜಾಗತಿಕ ಮಟ್ಟದ ನೈಪುಣ್ಯತೆ ಹೊಂದಿರಬೇಕು ಎಂದು ಕೆಆರ್‍ಎಸ್ ಯೋಜನೆ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರಿಗೆ ಶನಿವಾರ ತಿಳಿಸಿದರು.
ಸದ್ಯದಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ಚರ್ಚಿಸಿ ಯೋಜನೆ ಸ್ವರೂಪ ವರದಿ ಅಂತಿಮಗೊಳಿಸಲಾಗುವುದು. ನಂತರ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

          ಕುಮಾರಸ್ವಾಮಿ ನೇತೃತ್ವದ ಸರಕಾರ ಎರಡು ಮಹತ್ವದ ಯೋಜನೆಗಳಿಗೆ ಬಜೆಟ್ ಅನುಮೋದನೆ ನೀಡಿದೆ. ಒಂದು ಮೇಕೆದಾಟು. ಮತ್ತೊಂದು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರೆಸ್ ಅಭಿವೃದ್ಧಿ. ಯೋಜನೆಯ ರೂಪುರೇಷೆಗಳು ಅಂತಿಮವಾಗುತ್ತಿದೆ. ಐತಿಹಾಸಿಕ ಮಹತ್ವವನ್ನು ಹೊಂದಿರುವ ಬೃಂದಾವನವನ್ನು ಪ್ರಸಕ್ತ ಯುಗದ ನಿರೀಕ್ಷೆಗೆ ತಕ್ಕಂತೆ ಉನ್ನತೀಕರಣ ಮಾಡಲಾಗುವುದು.

        ಮುಖ್ಯಮಂತ್ರಿ ಕುಮಾರಸ್ವಾಮಿ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನದ ಮಂತ್ರಿಗಳು, ಮಂಡ್ಯ ಸಂಸದರು, ಶಾಸಕರು, ಜನ ಪ್ರತಿನಿಧಿಗಳು, ವೇಣುಗೋಪಾಲಸ್ವಾಮಿ ದೇಗುಲ ಪುನರ್ನಿರ್ಮಿಸಿದ ಹರಿಖೋಡೆ ಕುಟುಂಬ, ಮೈಸೂರು ಅರಸರ ಕುಟುಂಬ, ಎಂಜಿನಿಯರುಗಳ ಸಂಘ ಹಾಗೂ ವಿಶ್ವವಿದ್ಯಾಲಯದ ಪ್ರತಿನಿಧಿ ಒಳಗೊಂಡ ಸಮಿತಿ ರಚಿಸಲಾಗುವುದು. ಸುಮಾರು 1500 ಕೋಟಿ ರುಪಾಯಿ ವೆಚ್ಚದ ಯೋಜನೆಗೆ ಈಗಾಗಲೇ ಸರಕಾರದ ಬಳಿ 336 ಎಕರೆ ಭೂಮಿ ಇದೆ. ಹೀಗಾಗಿ ಯಾರೂ ಆತಂಕಪಡಬೇಕಿಲ್ಲ. ಈಗಿರುವ 74 ಎಕರೆಯ ಬೃಂದಾವನವನ್ನು ಈ ಶತಮಾನಕ್ಕೆ ತಕ್ಕಂತೆ ಅಭಿವೃದ್ದಿ ಮಾಡಲಾಗುವುದು. 2003 ರಲ್ಲಿ ಅಭಿವೃದ್ಧಿಗೊಂಡ ಸಂಗೀತ ಕಾರಂಜಿಯನ್ನು  ಸಿಂಗಾಪುರದ ಸಂಗೀತ ಕಾರಂಜಿಯಂತೆ ಇಡೀ ಭಾರತಕ್ಕೆ ಗೌರವ ತರುವ ರೀತಿಯಲ್ಲಿ ಮೇಲ್ದರ್ಜೆಗೆ ಏರಿಸಲಾಗುವುದು. ಯೋಜನೆಗೆ ಗುರುತಿಸಿರುವ ಸರಕಾರಿ ಸ್ವತ್ತು ಒತ್ತುವರಿ ಆಗದಂತೆ ಕಲ್ಲಿನ ಕಾಂಪೌಂಡ್ ನಿರ್ಮಿಸಲಾಗುವುದು ಎಂದು ವಿವರಿಸಿದರು.

         ಪುಟಾಣಿ ಮಕ್ಕಳಿಂದ ಹಿಡಿದು ಯುವಪೀಳಿಗೆ, ವೃದ್ಧರವರೆಗೆ ಸಂಭ್ರಮಿಸುವಂತೆ ನಾನಾ ಮನರಂಜನೆ ತಾಣಗಳನ್ನು ನಿರ್ಮಿಸಲಾಗುವುದು, ಅಭಿವೃದ್ಧಿಪಡಿಸಲಾಗುವುದು. ಮಧ್ಯದಲ್ಲಿ ಬರುವ ಬೃಹತ್ ರಸ್ತೆಯ ಇಕ್ಕೆಲಗಳಲ್ಲಿ ಹಂಪಿ, ಸೋಮನಾಥಪುರ, ಬೇಲೂರು-ಹಳೇಬೀಡು, ತಾಜ್ ಮಹಲ್ ಸೇರಿದಂತೆ ಕರ್ನಾಟಕ, ಭಾರತದ ಭವ್ಯ ಇತಿಹಾಸ ಸಾರುವ ಸ್ಮಾರಕಗಳ ಶಾಶ್ವತ ಪ್ರತಿರೂಪಗಳನ್ನು ನಿರ್ಮಿಸಲಾಗುವುದು. 125 ಅಡಿ ಎತ್ತರದ ಪ್ರತಿಮೆ ಒಳಗೊಂಡ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ, ಗೋಪುರಯುಕ್ತ ಗಾಜಿನ ಮನೆ, ವೀಕ್ಷಣೆ ಗೋಪುರ, ಬ್ಯಾಂಡ್ ಸ್ಟಾಂಡ್, ಒಳಾಂಗಣ ಕ್ರೀಡಾಂಗಣ ಮತ್ತಿತರ ಐತಿಹ್ಯ ಸಾರುವ ಕಟ್ಟಡಗಳನ್ನು ಈ ಡಿಸ್ನಿಲ್ಯಾಂಡ್ ಮಾದರಿ ಹೊಂದಿರಲಿದೆ.

          ಪ್ರತಿಮೆ ಕಾವೇರಿ ಮಾತೆಯದೋ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದೋ, ಮತ್ಯಾವುದೋ ಎಂಬುದನ್ನು ಸಮಿತಿ ಚರ್ಚಿಸಿ, ನಿರ್ಣಯಿಸಲಿದೆ. ಸರಕಾರ ಪ್ರತಿಮೆ ಹಣ ಭರಿಸುತ್ತಿಲ್ಲ. ಗುತ್ತಿಗೆ ಪಡೆದ ಸಂಸ್ಥೆ ಭರಿಸಲಿದೆ. ಅಣೆಕಟ್ಟೆಗೆ ಯಾವುದೇ ಧಕ್ಕೆ ಆಗುವ ಕೆಲಸ ಮಾಡುವುದಿಲ್ಲ. ಪ್ರತಿ ಹಂತದಲ್ಲೂ ತಾಂತ್ರಿಕ ತಜ್ಞರ ಸಲಹೆ, ಮಾರ್ಗದರ್ಶನ ಪಡೆಯಲಾಗುವುದು ಎಂದರು.

         ಯೋಜನೆಗೆ ಪೂರಕವಾಗಿ ವಿಮಾನಯಾನ, ರೈಲ್ವೆ, ರಸ್ತೆ ಮಾರ್ಗಗಳ ಉನ್ನತೀಕರಣ, ಹೆಲಿಟೂರಿಸಂ, ಹಿನ್ನೀರಿನ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಹೋಗಿ ಬರಲು ದೋಣಿಗಳ ವ್ಯವಸ್ಥೆ, ಮುಂದಿನ 50 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಬೃಹತ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ನಾನಾ ಯೋಜನೆಗಳನ್ನು ರೂಪಿಸಿರುವ ಜೈಪುರದ ಸೀನಿಯರ್ ಆರ್ಕಿಟೆಕ್ಟ್ ಕನ್ಸಲ್ಟೆಂಟ್ ಸಂಸ್ಥೆ ಈ ಯೋಜನೆಯ ನೀಲನಕ್ಷೆ ಸಿದ್ಧಪಡಿಸಿದೆ. ಈಗಿನ ಪಾರಂಪರಿಕ ತಾಣದ ಮೂಲಸ್ವರೂಪಕ್ಕೆ ಧಕ್ಕೆ ಆಗದಂತೆ ಬೃಂದಾವನವನ್ನು ವಿಶ್ವಪ್ರವಾಸಿ ತಾಣಗಳಲ್ಲೇ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲಿಸುವುದು ಯೋಜನೆಯ ಉದ್ದೇಶ ಎಂದರು.

         ಯೋಜನೆಯ ಒಟ್ಟು ವೆಚ್ಚ 1500 ಕೋಟಿ ರುಪಾಯಿಗಳು. ಈಗಿರುವ ದೋಣಿ ವಿಹಾರ ಸರೋವರದ ಪಕ್ಕದಲ್ಲಿ ಮತ್ತೊಂದು ಸರೋವರ ನಿರ್ಮಿಸಿ ಅದರ ಮಧ್ಯದಲ್ಲಿ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ ಅಸ್ತಿತ್ವಕ್ಕೆ ಬರಲಿದೆ. ಈ ಸಮುಚ್ಛಯದ ಮೇಲ್ಭಾಗದಲ್ಲಿ 125 ಅಡಿ ಎತ್ತರದ ಪ್ರತಿಮೆ ಇರಲಿದೆ. ಪ್ರತಿಮೆ ಪದತಲದಲ್ಲಿ ಮ್ಯೂಸಿಯಂ ಕಟ್ಟಡ ಇರಲಿದೆ. ಬೃಂದಾವನದ ಕಡೆಯಿಂದ ಇದು ಅಣೆಕಟ್ಟೆಯ ಎತ್ತರವನ್ನು ಮೀರಿಸಲಿದೆ. ಅದೇ ರೀತಿ ಗೋಪುರವುಳ್ಳ ಗಾಜಿನಮನೆ ಕೂಡ. ಈ ಎರಡೂ ಕಟ್ಟಡಗಳಿಂದ ಅಣೆಕಟ್ಟೆಯ ವಿಹಂಗಮ ನೋಟ ಗೋಚರವಾಗಲಿದೆ. ಮ್ಯೂಸಿಯಂನಲ್ಲಿ ಕೆಆರ್‍ಎಸ್, ಮೈಸೂರು, ಕರ್ನಾಟಕದ ಐತಿಹ್ಯ ಸಾರುವ ಕಲಾತ್ಮಕ, ಪ್ರಾಚ್ಯವಸ್ತುಗಳು ಇರಲಿವೆ.

       ಮೈಸೂರು ಅರಮನೆ ಹಾಗೂ ಮಂಡ್ಯದ ಕೆಆರ್‍ಎಸ್ ಈಗಾಗಲೇ ಜಗತ್ಪ್ರಸಿದ್ಧವಾಗಿವೆ. ಇವುಗಳನ್ನು ವಿಶ್ವದಲ್ಲೇ ಅಗ್ರಗಣ್ಯ ಪ್ರವಾಸಿ ಆಕರ್ಷಣೆಯ ತಾಣವಾಗಿ ಪರಿವರ್ತಿಸುವುದು ಯೋಜನೆಯ ಉದ್ದೇಶ. ಈಗ ಬೃಂದಾವನದಿಂದ ರಾಜ್ಯ ಸರಕಾರಕ್ಕೆ ಬರುತ್ತಿರುವ ವಾರ್ಷಿಕ ಆದಾಯ ಕೇವಲ ಆರು ಕೋಟಿ ರುಪಾಯಿ. ಹೊಸ ಯೋಜನೆ ಪ್ರಕಾರ ವಾರ್ಷಿಕ 300 ಕೋಟಿ ರುಪಾಯಿಗೂ ಅಧಿಕ ವಹಿವಾಟು ನಡೆಯಲಿದ್ದು, ಸರಕಾರಕ್ಕೆ 30 ಕೋಟಿ ರುಪಾಯಿ ವರಮಾನ ಬರಲಿದೆ ಎಂದು ಅಂದಾಜು ಮಾಡಲಾಗಿದೆ. ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.

         ಸಚಿವರಾದ ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಸಂಸದ ಶಿವರಾಮೆಗೌಡ, ಶಾಸಕರಾದ ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಅಪ್ಪಾಜಿ ಹಾಜರಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link