5ನೇ ಮಹಡಿಯಿಂದ ಬಿದ್ದ ವಿದೇಶಿ ಮಹಿಳೆ

ಬೆಂಗಳೂರು

         ಪಾರ್ಟಿ ಮುಗಿಸಿ ಕಂಠಪೂರ್ತಿ ಕುಡಿದು ಬಂದಿದ್ದ ಕೊಲಂಬಿಯಾ ದೇಶದ ಮಹಿಳೆಯೊಬ್ಬರು ಅಪಾರ್ಟ್‍ಮೆಂಟ್‍ನ 5ನೇ ಮಹಡಿಯಿಂದ ಕೆಳಗೆ ಬಿದ್ದು ಸಂಶಯಾಸ್ಪದವಾಗಿ ಮೃತಪಟ್ಟಿರುವ ದುರ್ಘಟನೆ ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಮುಂಜಾನೆ ನಡೆದಿದೆ.

        ಮೃತ ಮಹಿಳೆಯನ್ನು ಕೊಲಂಬಿಯಾದ ಡ್ಯಾನಿಲಾ ಕೋರಕ್ (35) ಎಂದು ಗುರುತಿಸಲಾಗಿದೆ. ಸ್ನೇಹಿತರ ಜೊತೆ ಕ್ರಿಸ್ ಮಸ್ ಪಾರ್ಟಿ ಮುಗಿಸಿ ಪಾನಮತ್ತರಾಗಿ ಬಂದಿದ್ದ ಕೋರಕ್ ಜೀವನ್ ಭೀಮಾನಗರದ ವಿಮಾನ ನಿಲ್ದಾಣ ರಸ್ತೆಯ ವೈಟ್ ಫ್ಲವರ್ ಹಿಲ್ ಅಪಾರ್ಟ್‍ಮೆಂಟ್‍ನ ಐದನೇ ಮಹಡಿಯಿಂದ ಮುಂಜಾನೆ 3ರ ವೇಳೆ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

       ಕಳೆದ ಒಂದು ವರ್ಷದಿಂದ ವಾಸವಾಗಿದ್ದ ಕೋರಕ್, ವೈಟ್ ಫೀಲ್ಡ್‍ನ ಖಾಸಗಿ ಕಂಪನಿಯೊಂದರಲ್ಲಿ ಸ್ಪಾನಿಷ್ ಭಾಷೆಯನ್ನು ಇಂಗ್ಲಿಷ್‍ಗೆ ತರ್ಜುಮೆ ಮಾಡುವ ಕೆಲಸ ಮಾಡುತ್ತಿದ್ದರು. ವೈಟ್ ಫೀಲ್ಡ್ ಬಳಿ ಶನಿವಾರ ರಾತ್ರಿ ಸ್ನೇಹಿತರೊಂದಿಗೆ ಕ್ರಿಸ್ ಮಸ್ ಪಾರ್ಟಿಗೆ ಹೋಗಿ ಪಾನಮತ್ತರಾಗಿ ಮನೆಗೆ ಮೂವರು ಸ್ನೇಹಿತರ ಜೊತೆ ಮುಂಜಾನೆ 3ರ ವೇಳೆ ವಾಪಸ್ ಆಗಿ, ಅಪಾರ್ಟ್‍ಮೆಂಟ್‍ನ 5ನೇ ಮಹಡಿಯ ಲಿವಿಂಗ್ ಏರಿಯಾದಲ್ಲಿ ಮಾತನಾಡುತ್ತಾ ನಿಂತಿದ್ದು, ಅಲ್ಲಿಂದ ಮದ್ಯದ ಅಮಲಿನಲ್ಲಿ ಆಯತಪ್ಪಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

       ಕೋರಕ್ ಅವರು ಆಯತಪ್ಪಿ ಬಿದ್ದರೋ, ಇಲ್ಲವೇ ಯಾರಾದರೂ ತಳ್ಳಿದ್ದಾರೋ ಎಂಬುದರ ಬಗ್ಗೆ ಅನುಮಾನವಿದೆ.ಮರಣೋತ್ತರ ಪರೀಕ್ಷೆ ನಂತರ ಸಾವಿನ ಸತ್ಯಾಸತ್ಯತೆ ತಿಳಿಯಲಿದೆ. ಸುದ್ದಿ ತಿಳಿದ ತಕ್ಷಣ ಜೀವನ್ ಭೀಮಾನಗರದ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

      ನಾಲ್ಕು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಕೋರಕ್, ಮೊದಲು ದೆಹಲಿಯಲ್ಲಿ ಕೆಲಸ ಮಾಡಿ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು ಎನ್ನುವುದು ತನಿಖೆಯಲ್ಲಿ ಗೊತ್ತಾಗಿದ್ದು, ಆಕೆಯ ಜತೆಗಿದ್ದ ಸ್ನೇಹಿತರನ್ನು ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ರಾಹುಲ್ ಕುಮಾರ್ ಶಹಪುರವಾಡ ತಿಳಿಸಿದ್ದಾರೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link