ಹಾನಗಲ್ಲ :
ಹಾಡುಹಗಲೇ ಕೀಲಿಮುರಿದು ಸರಣಿ ಮನೆಗಳ್ಳತನ ಮಾಡಿದ ಘಟನೆ ಶನಿವಾರ ಬೆಳಿಗ್ಗೆ ಪಟ್ಟಣದ ವಿರಾಟನಗರ ಬಡಾವಣೆಯಲ್ಲಿ ನಡೆದಿದೆ.
ಪಟ್ಟಣದ ವಿರಾಟನಗರ ಬಡಾವಣೆಯ ಶಿಕ್ಷಕ ವಿಶ್ವನಾಥ ಬಸಪ್ಪ ಶಿಗ್ಗಾವಿ ಎಂಬುವವರ ಕಟ್ಟಡದಲ್ಲಿ ಶನಿವಾರ ಬೆಳಿಗ್ಗೆ 11 ಘಂಟೆಗೆ ಸರಣಿ ಕಳ್ಳತನ ನಡೆದಿದ್ದು, ಸಂಜೆ ವೇಳೆ ಬೆಳಕಿಗೆ ಬಂದಿದೆ. ಶಿಗ್ಗಾವಿ ಅವರ ಕಟ್ಟಡದಲ್ಲಿ ವಾಸವಾಗಿರುವ ವಾಯವ್ಯ ಸಾರಿಗೆ ಬಸ್ ಚಾಲಕ, ಉರಗತಜ್ಞ ಕೃಷ್ಣಾ ರೆಡ್ಡಿ ಎಂಬುವವರ ಮನೆಯ ಹಿತ್ತಲ ಬಾಗಿಲಿನಿಂದ ಒಳಗೆ ಪ್ರವೇಶಿಸಿರುವ ಕಳ್ಳರು, ತಿಜೋರಿ ಕೀಲಿ ಮುರಿದು ಎರಡು ಬಂಗಾರದ ಬಳೆ, ಎರಡು ಜೊತೆ ಕಿವಿಯೋಲೆ ಹಾಗೂ ಒಂದು ಬಂಗಾರದ ಚೈನ್ ಸೇರಿ ಒಟ್ಟು 40ಗ್ರಾಂ ಬಂಗಾರದ ಆಭರಣ ಹಾಗೂ 21ಸಾವಿರ ನಗದು ಮತ್ತು ಮೊಬೈಲ್, 700ರೂ ನಾಣ್ಯಗಳನ್ನು ಮತ್ತು 5 ರೇಷ್ಮೆ ಸೀರೆಗಳನ್ನೂ ಅಪಹರಿಸಿ ಪರಾರಿಯಾಗಿದ್ದಾರೆ. ಇದೇ ಕಟ್ಟಡದಲ್ಲಿರುವ ಇನ್ನೆರಡು ಮನೆಗಳ ಕಳ್ಳತನಕ್ಕೆ ಯತ್ನಿಸಿದ ಕಳ್ಳರು ಯಾವುದೇ ವಸ್ತುಗಳನ್ನು ಮುಟ್ಟದೇ ಹಿಂತಿರುಗಿದ್ದಾರೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಗಲು ವೇಳೆಯಲ್ಲಿ ಕಳ್ಳತನಕ್ಕೆ ಯತ್ನಿಸಿರುವುದು ಹೊಸ ಬಡಾವಣೆಗಳಲ್ಲಿ ವಾಸಿಸುವ ನಿವಾಸಿಗರಲ್ಲಿ ಭಯವುಂಟುಮಾಡಿದೆ. ಸರ್ಕಾರಿ ಉದ್ಯೋಗಕ್ಕೆ ತೆರಳುವ ಸಿಬ್ಬಂದಿಗಳ ಮನೆಗಳನ್ನು ಗುರಿಯಾಗಿಟ್ಟುಕೊಂಡು ಅವರು ಮನೆಯಲ್ಲಿಲ್ಲದ ವೇಳೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಇತ್ತೀಚೆಗೆ ಪಟ್ಟಣದ ಕುಮಾರೇಶ್ವರನಗರದಲ್ಲಿ ಇಂಥದೇ ಸರಣಿ ಕಳ್ಳತನ ನಡೆದಿತ್ತು. ಇಲ್ಲಿನ ಬಸ್ ನಿಲ್ದಾಣದಲ್ಲಿ ಶಿಕ್ಷಕಿಯೋರ್ವಳ ಕೊರಳಲ್ಲಿನ ಚೈನ್ ಕಳ್ಳತನ ಯತ್ನ ನಡೆದಿತ್ತು. ಸಂತೆ ದಿನದಂದು ಸಾರ್ವಜನಿಕರ ಮೊಬೈಲ್ ಕಳ್ಳತನವೂ ಹೆಚ್ಚಾಗುತ್ತಿವೆ. ಇಂಥ ಘಟನೆಗಳ ಕುರಿತು ಪೊಲೀಸ್ ಸಿಬ್ಬಂದಿ ಎಚ್ಚೆತ್ತುಕೊಳ್ಳಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








