ಬ್ಯಾಡಗಿ:
ರೈತರ ಹಿತದೃದಷ್ಟಿಯಿಂದ ಮಾರುಕಟ್ಟೆಯಲ್ಲಿನ ವ್ಯಾಪಾರಸ್ಥರು ಸ್ಪರ್ಧಾತ್ಮಕ ದರಗಳನ್ನು ನೀಡಲು ಸಿದ್ಧರಿದ್ದಾರೆ, ನೀರು ಹೊಡೆದಂತಹ ಅಥವಾ ಅರ್ಧಂಬರ್ಧ ಒಣಗಿಸಿದ ಮೆಣಸಿನಕಾಯಿಯನ್ನು ಯಾವುದೇ ಕಾರಣಕ್ಕೂ ಮಾರಾಟಕ್ಕೆ ತರದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಎಸ್.ಬಿ.ನ್ಯಾಮಗೌಡ ರೈತರಲ್ಲಿ ಮನವಿ ಮಾಡಿದರು.
ಸೋಮವಾರ, ಸ್ಥಳೀಯ ಮಾರುಕಟ್ಟೆಯಲ್ಲಿ ಗ್ರೇಡಿಂಗ್ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಲ್ಲಿಯವರೆಗೂ ರೈತರು ನೀಡಿದ ಸಹಕಾರದಿಂದ ಈಗಾಗಲೇ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಅಂತರಾಷ್ಟ್ರೀಯ ಖ್ಯಾತಿ ಪಡೆದಿದ್ದೇನೋ ನಿಜ, ಇದಕ್ಕೆ ಮಾರುಕಟ್ಟೆ ವ್ಯಾಪಾರಸ್ಥರು ಸೇರಿದಂತೆ ಸಮಿತಿಯು ಕೂಡ ಚಿರಋಣಿಗಳಾಗಿದ್ದೇವೆ ಎಂದರು.
ನಿಮ್ಮ ಸಹಕಾರದಿಂದ ಎತ್ತರಕ್ಕೆ ಬೆಳೆಯಲು ಸಾಧ್ಯ: ರೈತರು ಮಾರುಕಟ್ಟೆಗೆ ಸಂಪೂರ್ಣ ಒಣಗಿಸಿದ ಮಾಲನ್ನು ಮಾರಾಟಕ್ಕೆ ತರುವ ಮೂಲಕ ಇನ್ನಷ್ಟು ಸಹಕಾರವನ್ನು ನೀಡಿದ್ದೇ ಆದಲ್ಲಿ, ರೈತರಿಗೆ ಇನ್ನಿತರ ಮಾರುಕಟ್ಟೆಗಳಲ್ಲಿ ಸಿಗುವಂತಹ ಹೆಚ್ಚು ಸ್ಪರ್ಧಾತ್ಮಕ ದರಗಳನ್ನು ನೀಡಲು ಸಾಧ್ಯವಾಗುತ್ತದೆ, ರೈತರು ಇದಕ್ಕೆ ಸಹಕಾರ ನೀಡಿದಲ್ಲಿ ಮಾರುಕಟ್ಟೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವೆಂದರು.
ಜಾಗೃತಿ ಮೂಡಿಸುವ ಪ್ರಯತ್ನ ನಡಸಿದ್ದೇವೆ: ಹಸಿ ಮಾಲನ್ನು ಮಾರಾಟಕ್ಕೆ ತರದಂತೆ, ರಾಜ್ಯವೂ ಸೇರಿದಂತೆ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿಯೂ ಅವರ ಪ್ರಾದೇಶಿಕ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಮೆಣಸಿನಕಾಯಿ ಬೆಳೆಯುವ ಕ್ಷೇತ್ರಗಳಲ್ಲಿ ಪತ್ರಿಕೆಗಳು, ದೂರದರ್ಶನ ಸಾಲದ್ದಕ್ಕೆ ಕರಪತ್ರಗಳನ್ನೂ ಕೂಡ ಹಂಚುವ ಕಾರ್ಯದಲ್ಲಿ ಎಪಿಎಂಸಿ ನಿರತವಾಗಿದ್ದು, ಪ್ರಜ್ಞಾವಂತ ರೈತರು ಹಸಿ ಮಾಲಿನಿಂದಾಗುವ ನಷ್ಟವನ್ನರಿತು ಸಂಪೂರ್ಣವಾಗಿ ಒಣಗಿಸಿದ ಮೆಣಸಿನಕಾಯಿಯನ್ನೇ ಮಾರಾಟಕ್ಕೆ ತರುವಂತೆ ಮಾರುಕಟ್ಟೆಗೆ ಬಂದಂತಹ ರೈತರಿಗೆ ಸಲಹೆಗಳನ್ನು ನೀಡಿದರು.
ಗ್ರೇಡಿಂಗ್‍ನಲ್ಲಿ ತಿರಸ್ಕತವಾದ ಮಾಲಿಗೆ ಟೆಂಡರ್ ಹಾಕದಂತೆ ಮನವಿ: ರೈತರಿಗೆ ಒಣಗಿಸಿದ ಮಾಲನ್ನು ತರುವಂತೆ ಎಪಿಎಂಸಿ ಸಿಬ್ಬಂದಿ ಕೇವಲ ಸಲಹೆ ನೀಡಲು, ಆದರೆ ಯಾವುದೇ ಕಾರಣಕ್ಕೂ ಮಾರುಕಟ್ಟೆಗೆ ತರದಂತೆ ನಿರ್ಭಂದ ಹೇರಲು ಅವಕಾಶವಿಲ್ಲ, ಎಪಿಎಂಸಿ ಸಿಬ್ಬಂದಿ ಗ್ರೇಡಿಂಗ್ ತರಸ್ಕರಿಸಿದ ಮೆಣಸಿನಕಾಯಿ ಲಾಟುಗಳಿಗೆ ಟೆಂಡರ್ ಹಾಕದಂತೆ ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ನ್ಯಾಮಗೌಡ ಸಲಹೆ ನೀಡಿದರು.
ಹಸಿ ಮಾಲುಗಳನ್ನು ಸುರಿವಿಸಿದ ಸಿಬ್ಬಂದಿ: ಮಾರುಕಟ್ಟೆಗೆ ಸೋಮವಾರ ಸುಮಾರು 36 ಸಾವಿರಕ್ಕೂ ಅಧಿಕ ಮೆಣಸಿನಕಾಯಿ ಚೀಲ ಆವಕವಾಗಿದ್ದು, ಮಾರುಕಟ್ಟೆಯಲ್ಲಿ ಗ್ರೇಡಿಂಗ್ ನಡೆಸಿದ ಎಪಿಎಂಸಿ ಸಿಬ್ಬಂದಿ ಹಸಿ ಎಂದು ಕಂಡು ಬಂದಂತಹ ಚೀಲಗಳನ್ನು ಸುರುವಿಸು ಕಾರ್ಯದಲ್ಲಿ ನಿರತರಾಗಿದ್ದರು. ಮಾರುಕಟ್ಟೆಗೆ ಇಂದೂ ಶೆ.15 ರಷ್ಟು ಹಸಿ ಮಾಲು ಮಾರಾಟಕ್ಕೆ ಬಂದಿದ್ದರಿಂದ ಕೆಲ ವ್ಯಾಪಾರಸ್ಥರು ಟೆಂಡರ್ ಹಾಕಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹಸಿ ಮಾಲನ್ನು ಕಡ್ಡಾಯವಾಗಿ ಗ್ರೇಡಿಂಗ್ ನಡೆಸುವ ಮೂಲಕ ಸುರುವಿಸಲಾಯಿತು. ಈ ಸಂದರ್ಭದಲ್ಲಿ ಎಪಿಎಂಸಿ ಸಿಬ್ಬಂದಿಗಳಾದ ಪ್ರಭು ದೊಡ್ಮನಿ, ವಿ.ಎಚ್.ಗುರಪ್ಪನವರ, ಶ್ರೀಕಾಂತ್ ಗುಳೇದ, ಸಿ.ಕೆ.ವಿಕಾಸ್, ರಾಜು ಲಮಾಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸೋಮವಾರ ಮಾರುಕಟ್ಟೆ ದರ: ಸೋಮವಾರ ಮಾರುಕಟ್ಟೆಗೆ ಒಟ್ಟು 36380 ಮೆಣಸಿನಕಾಯಿ ಚೀಲಗಳು ಆವಕವಾಗುವ ಮೂಲಕ ಆವಕಿನಲ್ಲಿ ಹೆಚ್ಚಳ ಕಂಡು ಬಂದಿದೆ, ಕಳೆದ ಗುರುವಾರ 33 ಸಾವಿರ ಚೀಲ ಆವಕವಾಗಿತ್ತು. ಸೋಮವಾರಂದು ಬ್ಯಾಡಗಿ ಕಡ್ಡಿತಳಿ ಪ್ರತಿ ಕ್ವಿಂಟಲ್‍ಗೆ ಕನಿಷ್ಟ 1089, ಗರಿಷ್ಟ 14109 ಸರಾಸರಿ 9859 ದರಗಳಿಗೆ ಮಾರಾಟವಾದರೇ, ಡಬ್ಬಿ ತಳಿ ಕನಿಷ್ಟ 2009 ಗರಿಷ್ಟ 16319 ಸರಾಸರಿ 12509 ಹಾಗೂ ಗುಂಟೂರ ತಳಿ ಕನಿಷ್ಟ 509 ಗರಿಷ್ಟ 7810 ಸರಾಸರಿ 4310 ರೂ.ಗಳಿಗೆ ಮಾರಾಟವಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ