ಬ್ಯಾಡಗಿ:
ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಅಭಿವೃದ್ಧಿ ವಿರೋಧಿ ಹಾಗೂ ಕಳಂಕಿತ ಮುರಿಗೆಪ್ಪ ಶೆಟ್ಟರ ಅವರ ಆಯ್ಕೆಗೆ ಪಟ್ಟಣದಲ್ಲಿ ವಿರೋಧ ಹೆಚ್ಚಳವಾಗಿದ್ದು ಸೋಮವಾರ ಜಯ ಕರ್ನಾಟಕ ಸಂಘಟನೆ ತಾಲೂಕ ಘಟಕದ ಕಾರ್ಯಕರ್ತರು ಪಟ್ಟಣದ ಹಳೇ ಪುರಸಭೆ ಎದುರು ಟೈರ್ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಹಲಗೆಗಳನ್ನು ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಅಭಿವೃದ್ಧಿ ವಿರೋಧಿ ಕಳಂಕಿತ ಮುರಿಗೆಪ್ಪ ಶೆಟ್ಟರ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಟೈರ್‍ಗೆ ಬೆಂಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು
ನ್ಯಾಯಾಲಯದ ಕಟ್ಟೆಯನ್ನೇರಿದವರಿಗೇಕೆ ಪಟ್ಟ..?: ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಸುರೇಶ ಛಲವಾದಿ, ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿ ಮುರಿಗೆಪ್ಪ ಶೆಟ್ಟರ, ಅಗಲೀಕರಣ ವಿರೋಧಿಸಿ ಬ್ಯಾಡಗಿ ದಿವಾಣಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಕೋರಿ ದಾವೆಯನ್ನು (ಓಎಸ್‍ನಂ.200/17) ಹೂಡಿದ್ದರು, ಇದು ತಿರಸ್ಕತಗೊಂಡ ಬಳಿಕ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಮೇಲ್ಮನವಿ (ಓಎಸ್‍ನಂ.3/18) ಸಲ್ಲಿಸಿದ ದಾಖಲೆಗಳಿವೆ ಆದರೆ ಇದೀಗ ಅವರ ಹೆಸರು ಮುಂಚೂಣಿಯಲ್ಲಿದ್ದು ನ್ಯಾಯಾಲಯದ ಮೆಟ್ಟಿಲೇರಿದವರಿಗೇಕೆ ಅಧ್ಯಕ್ಷ ಪಟ್ಟ ಎಂಬ ಪ್ರಶ್ನೆಗಳು ಸಾರ್ವಜನಿಕರ ಮನದಲ್ಲಿ ಮೂಡುತ್ತಿವೆ ಎಂದರು.
ಛತ್ರದ ಅವರನ್ನು ಕೆಳಗಿಳಿಸಲು ಸದಸ್ಯರಿಗೆ ಹಣದ ಆಮಿಷ: ಅಧ್ಯಕ್ಷರ ಬದಲಾವಣೆ ಬಿಜೆಪಿ ಪಕ್ಷದ ಆಂತರಿಕ ನಿಲುವು ಎಂದು ಮೇಲ್ನೊಟಕ್ಕೆ ಎನಿಸುತ್ತಿದೆ, ಆದರೆ ಸಹ ಕೆಲ ಪುರಸಭೆ ಸದಸ್ಯರಿಗೆ ಹಣದ ಆಮಿಷವೊಡ್ಡಿ ಹೈಕಮಾಂಡ್ ಎದುರಿಗೆ ಮುರಿಗೆಪ್ಪ ಶೆಟ್ಟರ ಶಕ್ತಿ ಪ್ರದರ್ಶನ ನಡೆಸುತ್ತಿದ್ದಾರೆ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಒಬ್ಬ ಮಾದರಿ ಅಧ್ಯಕ್ಷರಾಗುವ ರೀತಿಯಲ್ಲಿ ಕೆಲಸ ಮಾಡಿದ ಹಾಲಿ ಅಧ್ಯಕ್ಷ ಬಸವರಾಜ ಛತ್ರದ ಅವರನ್ನು ಷಡ್ಯಂತ್ರ ನಡೆಸಿ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ತರುವ ಮೂಲಕ ಅಸಂವಿಧಾನಿಕವಾಗಿ ಕೆಳಗಿಳಿಸಲಾಗುತ್ತಿದೆ ಎಂದು ಆರೋಪಿಸಿದರು.
ಆಸ್ತಿಗಳಿಲ್ಲದಿದ್ದರೂ ಅಗಲೀಕರಣ ಸ್ಥಗಿತಗೊಳಿಸಿದರು: ಮಾಜಿ ಸೈನಿಕ ಮಲ್ಲೇಶ ಚಿಕ್ಕಣ್ಣನವರ ಮಾತನಾಡಿ, ಆಸ್ತಿಗಳನ್ನು ಹೊಂದಿದವರು ಕಳೆದುಕೊಳ್ಳುವ ಸಂದರ್ಭದಲ್ಲಿ ತಕರಾರು ಮಾಡುವುದು ಸಹಜ, ಆದರೆ ಮುರಿಗೆಪ್ಪ ಶೆಟ್ಟರ ಅವರಿಗೆ ಸಂಬಂಧಿಸಿದ ಯಾವುದೇ ಆಸ್ತಿಗಳು ಮುಖ್ಯರಸ್ತೆಯಲ್ಲಿಲ್ಲ,ಒಂದು ವೇಳೆ ಇದ್ದರೂ ಸಹ ಅವುಗಳು ಸರ್ಕಾರದ ಜಾಗೆಯನ್ನು ಒತ್ತುವರಿ ಮಾಡಿದ್ದವುಗಳಾಗಿದೆ, ಹೀಗಾಗಿ ಅಭಿವೃದ್ಧಿ ವಿರೋಧಿ ಹಾಗೂ ಕಳಂಕಿತ ಮುರಿಗೆಪ್ಪ ಶೆಟ್ಟರ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಸ್ಥಗಿತಗೊಳ್ಳಲು ನೇರವಾಗಿ ಕಾರಣವಾಗಿದ್ದಾರೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವ ವಿರೋಧಿ ನಿಲುವಿಗೆ ಆಕ್ಷೇಪವಿದೆ: ಮುಖ್ಯರಸ್ತೆ ಅಗಲೀಕರಣ ವಿರೋಧಿ ಹೋರಾಟದ ಮುಂಚೂಣಿಯಲ್ಲಿರುವ ಮುರಿಗೆಪ್ಪ ಶೆಟ್ಟರ ಅವರಿಂದ ಬರುವ ಜನವರಿಯಲ್ಲಿ ಆರಂಭವಾಗುವ ಅಗಲೀಕರಣ ಕಾಮಗಾರಿಗೆ ಯಾವುದೇ ಸಹಕಾರ ಸಿಗುವ ಲಕ್ಷಣಗಳಿಲ್ಲ, ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ಜಯ ಕರ್ನಾಟಕ ಸಂಘಟನೆ ಆಕ್ಷೇಪವಿದೆ, ಒಂದು ವೇಳೆ ಬಿಜೆಪಿ ಹೈಕಮಾಮಡ್ ಅವರ ಹೆಸರನ್ನು ಅಂತಿಮಗೊಳಿಸಿದ್ದೇ ಅದಲ್ಲಿ ಅದೊಂದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಲಿದೆ ಬಿಜೆಪಿ ಹೈಕಮಾಂಡ್ ಯಾವುದೇ ಕಾರಣಕ್ಕೂ ಮುರಿಗೆಪ್ಪ ಶೆಟ್ಟರ ಅವರಿಗೆ ಅಧ್ಯಕಸ್ಥಾನ ನೀಡದಂತೆ ಆಗ್ರಹಿಸಿದರು.
ಅಗಲೀಕರಣವೊಂದು ವಿಷಯಾಧಾರಿತ ಹೋರಾಟ:ಚಂದ್ರು ಒಳಗುಂದಿ ಮಾತನಾಡಿ, ಬ್ಯಾಡಗಿ ಮುಖ್ಯರಸ್ತೆ ಅಗಲೀಕರಣವೊಂದು ರಾಜಕೀಯ ರಹಿತ ವಿಷಯಾಧಾರಿತ ಹೋರಾಟವಾಗಿದೆ, ಆದರೆ ಮುರಿಗೆಪ್ಪ ಶೆಟ್ಟರ ಒಬ್ಬ ಜನಪ್ರತಿನಿಧಿಯಾಗಿ ಅಗಲೀಕರಣವನ್ನು ವಿರೋಧಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ..? ಪ್ರಜಾಪ್ರಭುತ್ವ ವಿರೋಧಿ ನಿಲುವು ತಳೆದಿರುವ ಅವರನ್ನು ಬಿಟ್ಟು, ಬಿಜೆಪಿ ಇನ್ಯಾರನ್ನಾದರೂ ಅಧ್ಯಕ್ಷರನ್ನಾಗಿ ಮಾಡಲಿ ನಮ್ಮದೇನೂ ತಕರಾರಿಲ್ಲ, ಈ ಕುರಿತು ಬಿಜೆಪಿ ಹೈಕಮಾಂಡ ಸೇರಿದಂತೆ ರಾಜ್ಯಪಾಲರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸುವ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.
ಅವರ ಉದ್ದೇಶ ಸಾರ್ವಜನಿಕರಿಗೆ ಗೊತ್ತಾಗಿದೆ:ಪಾಂಡು ಸುತಾರ ಮಾತನಾಡಿ, ಮುರಿಗೆಪ್ಪ ಶೆಟ್ಟರ ಅಧ್ಯಕ್ಷರಾಗುವದಿದ್ದಲ್ಲಿ ಮೊದಲು ಅಗಲೀಕರಣದ ವಿಚಾರವಾಗಿ ತಮ್ಮ ನಿಲುವನ್ನು ಸಾರ್ವಜನಿಕರೆದುರು ಪ್ರಕಟಿಸುವಂತೆ ಮಾದ್ಯಮಗಳ ಮೂಲಕ ಒತ್ತಾಯಿಸಲಾಗಿತ್ತು, ಆದರೆ ಇಲ್ಲಿಯವರೆಗೂ ತುಟಿಕ್ಕೆ ಪಿಟಿಕ ಎನ್ನದೇ ತಮ್ಮ ನಿಲುವು ಪ್ರಕಟಿಸುತ್ತಿಲ್ಲ, ಇದರಿಂದ ಸ್ಪಷ್ಟವಾ ಗುತ್ತದೆ ಅಗಲೀಕರಣದ ಪರವಾಗಿ ಕೆಲಸ ಮಾಡುವ ಬದ್ಧತೆ ಅವರಲ್ಲಿಲ್ಲ ಬದಲಾಗಿ ಯೋಜನೆಯನ್ನೇ ಹಳ್ಳಕ್ಕೆ ಹಿಡಿಸುವ ಹುನ್ನಾರ ಇದರಲ್ಲಡಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ ಪೂಜಾರ, ನ್ಯಾಯವಾದಿಗಳಾದ ನಿಂಗಪ್ಪ ಬಟ್ಟಲಕಟ್ಟಿ, ಪ್ರಶಾಂತ ದೊಡ್ಮನಿ, ಸಂತೋಷ್ ಅರ್ಕಾಚಾರಿ, ವಿನಾಯಕ ಕಂಬಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ