ಹಾವೇರಿ:
ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿರುವ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಹಾಗೂ 9ರಂದು ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು, ಸಮಾಜದ ಎಲ್ಲರನ್ನೊಳಗೊಂಡ ಈಜಾತ್ರೆಗೆ ಪ್ರಸಕ್ತ ವರ್ಷದಿಂದ ಚಾಲನೆ ನೀಡಲಾಗುತ್ತಿದೆ. ಸಮಾಜಬಾಂಧವರು ಜಾತ್ರೆಯ ಯಶಸ್ವಿಗೆ ಕೈಜೋಡಿಸುವಂತೆ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದಸ್ವಾಮಿಜಿ ಕರೆ ನೀಡಿದರು.
ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಕರೆಯಲಾಗಿದ್ದ, ಮಹರ್ಷಿ ವಾಲ್ಮೀಕಿ ಜಾತ್ರೆಯ ಹಾವೇರಿ ತಾಲೂಕಿನ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು, ಎರಡು ದಿನಗಳಲ್ಲಿ ಶ್ರೀಮಠದ 21ನೇ ವಾರ್ಷಿಕೋತ್ಸವ, ಲಿಂ.ಜಗದ್ಗುರು ಶ್ರೀಪುಣ್ಯಾನಂದಪುರಿ ಮಹಾಸ್ವಾಮೀಜಿಯವರ 12 ವರ್ಷದ ಪುಣ್ಯಾರಾಧನೆ ಹಾಗೂ ತಮ್ಮ ಪಟ್ಟಾಧಿಕಾರದ 11ನೇ ವರ್ಷದ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ವಾಲ್ಮೀಕಿ ಜಾತ್ರಾ ಸಮಿತಿಯ ಪ್ರಾದಾಧಿಕಾರಿಗಳು ನಿರ್ಧರಿಸಿದ್ದಾರೆ. ವಾಲ್ಮೀಕಿ ಜಾತ್ರೆಯಲ್ಲಿ ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದ್ದು, ಸಮುದಾಯ ಹಾಗೂ ಸಮಾಜ ಬಾಂಧವರು ಒಟ್ಟಾಗಿ ಈಜಾತ್ರೆಯನ್ನು ಯಶಸ್ವಿಗೊಳಿಸಲು ಮುಂದಾಗಬೇಕಿದೆ ಎಂದು ಅವರು ಹೇಳಿದರು.
ವಾಲ್ಮೀಕಿ ಗುರುಪೀಠದಲ್ಲಿ 300ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಮಾಡುತ್ತಿದ್ದಾರೆ. ಆದರೆ ಕೇವಲ 50ಮಕ್ಕಳಿಗೆ ಮಾತ್ರ ಸರ್ಕಾರ ಅನುದಾನ ನೀಡುತ್ತಿದೆ. ಉಳಿದ 250ಮಕ್ಕಳ ವಿದ್ಯಾಭ್ಯಾಸದ ಹಾಗೂ ಊಟ ಮತ್ತಿತರ ಖರ್ಚುವೆಚ್ಚಗಳನ್ನು ಭಕ್ತರು ನೀಡುವ ಕಾಣಿಕೆಯಲ್ಲಿ ಸರಿದೂಗಿಸಲಾಗುತ್ತಿದೆ ಎಂದರು. ಗ್ರಾಮ ಪಾದಯಾತ್ರೆ : ಭಕ್ತರು ನೀಡುವ ಕಾಣಿಕೆಯನ್ನು ಬ್ಯಾಂಕ್‍ನಲ್ಲಿ ಡಿಪಾಜಿಟ್ ಮಾಡುತ್ತಾ ಬರಲಾಗಿದ್ದು, ಈ ಹಣವನ್ನು ಶ್ರೀಮಠವು ಮಕ್ಕಳ ಶೈಕ್ಷಣಿಕ ಉದ್ದೇಶಗಳಿಗೆ ಬಳಸುತ್ತಿದೆ. ರಾಜ್ಯಾದ್ಯಂತ ತಾವು ಗ್ರಾಮ ಪಾದಯಾತ್ರೆ ನಡೆಸಿ ಭಕ್ತರು ನೀಡುವ ಧವಸ, ಧಾನ್ಯಗಳನ್ನು ಸಂಗ್ರಹಿಸಿ ಅವುಗಳನ್ನು ಶ್ರೀಮಠಕ್ಕೆ ಬರುವ ಭಕ್ತರಿಗೆ, ವಿದ್ಯಾರ್ಥಿಗಳ ಪ್ರಸಾದಕ್ಕೆ ಬಳಕೆಮಾಡಲಾಗುತ್ತಿದೆ ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು.
ಸೋಮನಗೌಡ ಪಾಟೀಲ ಆಯ್ಕೆ : ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ ಉತ್ಸವದ ಹಾವೇರಿ ತಾಲೂಕಾ ಅಧ್ಯಕ್ಷರೆಂದು ಸಮಾಜದ ಹಿರಿಯರಾದ ಸೋಮನಗೌಡ ಪಾಟೀಲ ಅವರನ್ನು ಆಯ್ಕೆಮಾಡಲಾಯಿತು. ಸಭೆಯಲ್ಲಿ ಸಮಾಜದ ಮುಖಂಡರುಗಳಾದ ಕೆ.ಮಂಜಪ್ಪ, ಅಶೋಕ ತಳವಾರ, ರಮೇಶ ಆನವಟ್ಟಿ, ಬಸವರಾಜ ಹಾದಿಮನಿ, ಅಶೋಕ ಹರನಗಿರಿ, ಮಂಜುಳಾ ಕರಬಸಮ್ಮನವರ, ಹೊನ್ನಪ್ಪ ಮರಿಯಮ್ಮನವರ ಮತ್ತಿತರರು ಮಾತನಾಡಿ, ಶ್ರೀಮಠದ 21ನೇ ವಾರ್ಷಿಕೋತ್ಸವ ಹಾಗೂ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದಸ್ವಾಮಿಜಿ ಪಟ್ಟಾಧಿಕಾರದ 11ನೇ ವರ್ಷದ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುುತ್ತಿರುವುದು ಸಂತೋಷದ ಸಂಗತಿಯಾಗಿದೆ. ಮಹರ್ಷಿ ವಾಲ್ಮೀಕಿ ಗುರುಪೀಠವು ಇನ್ನು ಜನರಿಗೆ ಹತ್ತಿರವಾಗಬೇಕಿದ್ದು, ಗುರುಪೀಠವು ಶಿಕ್ಷಣ ಕೇಂದ್ರಗಳನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತರಿಸಬೇಕು. ಶೈಕ್ಷಣಿಕ ಚಟುವಟಿಕೆಗಳಿಗೆ ಕೈಜೋಡಿಸಲು ಸಮಾಜ ಬಾಂಧವರು ನೆರವಿನ ಹಸ್ತ ನೀಡಲು ಸಿದ್ದ ಎಂದು ತಿಳಿಸಿದರು.
ಮೋಹನ ನಾಗಮ್ಮನವರಿಗೆ ಸಂತಾಪ: ಸಭೆಯ ಆರಂಭದಲ್ಲಿ ಇತ್ತೀಚೆಗೆ ಅಗಲಿದ ತಾಲೂಕಿನ ಅಗಡಿಗ್ರಾಮದ ಸಾಹಿತಿ ದಿ.ಮೋಹನ ನಾಗಮ್ಮನವರ ಭಾವಚಿತ್ರಕ್ಕೆ ಶ್ರೀ ವಾಲ್ಮೀಕಿ ಪ್ರಸನ್ನಾನಂದಸ್ವಾಮಿಜಿ ಸಾನಿಧ್ಯದಲ್ಲಿ ಪುಷ್ಪ ನಮನ ಸಲ್ಲಿಸಿ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಲಾಯಿತು. ಪ್ರಸನ್ನಾನಂದಸ್ವಾಮಿಜಿ ಮಾತನಾಡಿ ಬಹುಮುಖ ವ್ಯಕ್ತಿತ್ವದ ಸಾಹಿತಿ, ಹೋರಾಟಗಾರ, ಉತ್ತಮ ಸಂಘಟಕರಾಗಿದ್ದ ಮೋಹನ ನಾಗಮ್ಮನವರ ಒಳ್ಳೆಯ ಸ್ನೇಹಜೀವಿ, ಛಲದಿಂದ ಮುನ್ನುಗುವ ಸ್ವಭಾವದವರಾಗಿದ್ದರು. ಅನೇಕ ಜನಪರ ಹೋರಾಟದ ನೇತೃತ್ವ ವಹಿಸಿ, ಸಾಮಾಜಿಕ ಚಿಂತನೆ ಮಾಡುತ್ತಿದ್ದ ಅವರು ಅನೇಕ ಉತ್ಕಷ್ಟ ಕೃತಿಗಳನ್ನು ಸ್ವಾರಸ್ವತ ಲೋಕಕ್ಕೆ ನೀಡಿದ್ದಾರೆ.
ಸದಾ ಹೊಸ ಚಿಂತನೆಗಳ ಮೂಲಕ ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಂಡವರಾಗಿದ್ದರು. ಉದಯೋನ್ಮುಖ ಸಾಹಿತಿ, ಕಲಾವಿದರಿಗೆ ಪ್ರೋತ್ಸಾಹ ಮಾರ್ಗದರ್ಶನ ನೀಡುತ್ತಿದ್ದರು. ಅವರ ಅಗಲುವಿಕೆಯಿಂದ ಸಮಾಜಕ್ಕೆ ಸಾರಸ್ವತ ಹಾಗೂ ಸಾಂಸ್ಕøತಿಕ ಲೋಕಕ್ಕೆ ತುಂಬಿ ಬಾರದ ಹಾನಿ ಉಂಟಾಗಿದೆ ಎಂದು ಅವರೊಂದಿಗಿನ ಒಡನಾಟ ಹಾಗೂ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಕೆಲಸ ಕಾರ್ಯಗಳನ್ನು ಸ್ಮರಿಸಿದರು.
ಸಭೆಯಲ್ಲಿ ಕೃಷ್ಣ ಜವಳಿ, ಮಾಲತೇಶ ಓಲೇಕಾರ, ಬಸವರಾಜ ಭೀಮಕ್ಕನವರ, ಮಲ್ಲಿಕಾರ್ಜುನ ಬೂದಗಟ್ಟಿ, ಕರಬಸಪ್ಪ ಕರಡಿ, ಶೇಖರ ಕರಬಸಮ್ಮನವರ,ನಾಗರಾಜ ಬಡಮ್ಮನವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ