ಹೊಸಪೇಟೆ :
ಶಬರಿಮಲೈಯಲ್ಲಿ ಧಾರ್ಮಿಕಾಚರಣೆ, ಸಂಸ್ಕೃತಿ, ಸಾಂಪ್ರದಾಯ ಉಳಿವಿಗಾಗಿ “ಶ್ರೀಅಯ್ಯಪ್ಪಸ್ವಾಮಿ ಧರ್ಮಸಂರಕ್ಷಣಾ ವೇದಿಕೆ ವತಿಯಿಂದ ನಗರದ ಶ್ರೀಅಯ್ಯಪ್ಪ ದೇವಸ್ಥಾನದಿಂದ ತಾಲ್ಲೂಕು ಕಛೇರಿವರೆಗೆ ಧರ್ಮ ಜಾಗೃತಿ ಬೃಹತ್ ಪಾದಯಾತ್ರೆ ಶುಕ್ರವಾರ ನಡೆಯಿತು.
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಆರ್ಚಕರಾದ ಶಂಕರನ್ ನಂಬೂದರಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ ಅಯ್ಯಪ್ಪ ಭಕ್ತರು, ಶಬರಿಮೈಲೆಗೆ ಮಹಿಳೆ ಪ್ರವೇಶ ಕುರಿತು ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್ ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ದಕ್ಷಿಣ ಭಾರತದ ಪ್ರಮುಖ ಶ್ರದ್ಧಾ ಕೇಂದ್ರ, ಕೋಟಿ,ಕೋಟಿ ಭಕ್ತರ ಆರಾಧ್ಯ ದೈವ ಶ್ರೀ ಅಯ್ಯಪ್ಪ ಸ್ವಾಮಿ ನೆಲಸಿರುವ ಶಬರಿಮೈಲೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಧಾರ್ಮಿಕ, ಪೌರಾಣಿಕ ಹಿನ್ನೆಲೆಯುಳ್ಳ ಶ್ರೀ ಪರಶುರಾಮ ಪೂಜಿತ ಧಾರ್ಮಿಕ ಶ್ರದ್ದಾ ಕೇಂದ್ರವಾಗಿದೆ. ಇತ್ತೀಚಿಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶ, ಸುಮಾರು ಎಂಟು ನೂರು ವರ್ಷಗಳ ಶ್ರದ್ಧ-ಭಕ್ತಿ, ಸಂಪ್ರದಾಯ, ಆಚರಣೆಗೆ ಕುಂದು ಉಂಟಾಗುವ ಸನ್ನಿವೇಶ ಎದುರಾಗಿದೆ. ಅನಾಧಿ ಕಾಲದಿಂದಲೂ ಶಬರಿಮೈಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10 ವರ್ಷ ಮೇಲ್ಪಟ್ಟ ಹಾಗೂ 50 ವರ್ಷ ಒಳಗಿನ ಮಹಿಳೆಯರಿಗೆ ಪ್ರವೇಶವಿಲ್ಲದೇ ಇರುವುದು. ನೂರಾರು ವರ್ಷಗಳ ಸಂಪ್ರದಾಯ, ಆಚರಣೆಯಾಗಿದೆ. ಆದರೆ, ಸುಪ್ರೀಂಕೋರ್ಟ್ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವುದು ಇಲ್ಲಿನ ಧಾರ್ಮಿಕ ಆಚರಣೆ, ಸಂಪ್ರದಾಯಕ್ಕೆ ಧಕ್ಕೆಯುಂಟಾಗುತ್ತಿದೆ.
ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಕಮ್ಯೂನಿಸ್ಟ್ ಸರ್ಕಾರ, ಶಬರಿಮೈಲೆಯಲ್ಲಿ ಭಕ್ತರಿಗೆ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಶಬರಿಮೈಲೆಯಲ್ಲಿ 144 ಸೆಕ್ಷನ್ ಜಾರಿ ಮಾಡುವ ಮೂಲಕ ಬೆಟ್ಟದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ವಸತಿ, ಉಟ,ಉಪಹಾರ, ಶೌಚಾಲಯ, ಬೀದಿ ದೀಪಗಳ ಸಂಪರ್ಕ ಕಡಿತಗೊಳಿಸಿ, ಭಕ್ತರಿಗೆ ತೊಂದರೆ ನೀಡಿದೆ.ಕೇರಳ ಸರ್ಕಾರ ಶಬರಿಮೈಲೆ ಧಾರ್ಮಿಕ ಆಚಾರ-ವಿಚಾರ, ಆಚರಣೆಗೆ ವಿರುದ್ಧ ಕಾನೂನು ರೂಪಿಸಿ, ಭಕ್ತಿ-ಶ್ರದ್ದೆ, ಸಂಪ್ರದಾಯಕ್ಕೆ ಮಾರಕವಾಗಿ ವರ್ತಿಸುತ್ತದೆ.
ಸರ್ಕಾರದ ವರ್ತನೆಗೆ ಕಡಿವಾಣ ಹಾಕುವ ಮೂಲಕ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಮರುಪರಿಶೀಲನೆ ನಡೆಸಲು ನಿದರ್ಶನ ನೀಡಬೇಕು ಎಂದು ತಹಶಿಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ರಾಧಾಕೃಷ್ಣ, ಚಂದ್ರಕಾಂತ್ ಕಾಮತ್, ಗುದ್ಲಿ ಪರಶುರಾಮ, ಕಿಶೋರ್ ಪತ್ತಿಕೊಂಡ, ಅನಂತಪದ್ಮನಾಭ, ನರಸಿಂಹ ಮೂರ್ತಿ,ಪಿ.ವೆಂಕಟೇಶ್,ಅನಿಲ್ ಜೋಷಿ, ನೂಕ್ ರಾಜ್, ಕಾಸಿಟ್ಟಿ ಉಮಾಪತಿ, ಸಾವಿತ್ರಮ್ಮ, ಕೇಶವ, ಶ್ರೀನಿವಾಸ, ಬಸವರಾಜ ಸ್ವಾಮಿ, ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ಗಣೇಶ ಸ್ವಾಮಿ, ಖಜಾಂಚಿ ರವೀಂದ್ರನಾಥ ಗುಪ್ತ, ಸದಸ್ಯರಾದ ವೆಂಕಟೇಶ ,ಶಿವಪ್ರಸಾದ್, ನಾರಾಯಣ ಭರಾಡೆ, ಮಹಾಂತೇಶ್, ರಾಜೇಶ್, ರಾಘವೇಂದ್ರ ಹಾಗೂ ಸಂತೋಷ್ ಸೇರಿದಂತೆ ನೂರಾರು ಅಯ್ಯಪ್ಪ ಮಾಲಾಧಾರಿಗಳು ಹಾಗೂ ಭಕ್ತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








