ಹಾವೇರಿ
ಮಕ್ಕಳ ಹಕ್ಕುಗಳು ಮಾನವ ಹಕ್ಕುಗಳು. ಭಾರತ ಸಂವಿಧಾನ ಬಹಳ ಸ್ಪಷ್ಟವಾಗಿ ಹೇಳಿದೆ ಭಾರತ ಒಂದು ಕಲ್ಯಾಣ ರಾಷ್ಟ್ರ. ಹಾಗಾಗಿ ಪ್ರಜೆಗಳಿಗೆ ಶಿಕ್ಷಣ, ಆರೋಗ್ಯ ಸೌಲಭ್ಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ ಅವರು ಹೇಳಿದರು.
ಇಂದು ನಗರದ ಜಿಲ್ಲಾಗುರುಭವನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಶಿಕ್ಷಣ ಇಲಾಖೆ, ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, ಹಾವೇರಿ ಮತ್ತು ಸ್ಫೂರ್ತಿ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ರಾಣೇಬೆನ್ನೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮಕ್ಕಳ ಹಕ್ಕುಗಳು ಮತ್ತು ಸಮಸ್ಯೆ ಕುರಿತು ಅಹವಾಲು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಜತೆಗೆ ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸಿ ಬದ್ಧತೆಯಿಂದ ಕೆಲಸಮಾಡಿದಾಗ ಮಾತ್ರ ನ್ಯಾಯ ಒದಗಿಸಲು ಸಾಧ್ಯ. ಈ ಕೆಲಸ ದೇಶ ಕಟ್ಟುವ ಕೆಲಸವಾಗಿದೆ. ರಸ್ತೆ, ಸೇತುವೆ, ಕಟ್ಟಡ, ಕೈಗಾರಿಕೆ ನಿರ್ಮಾಣಡುವುದಲ್ಲ. ಬದಲಾಗಿ ಈ ದೇಶದ ಸಂಪತ್ತು ಹಾಗೂ ಶಕ್ತಿಯಾದ ಮಕ್ಕಳಿಗೆ ಶಿಕ್ಷಣ ನೀಡುವುದು, ಬಾಲ್ಯ ಕಾಪಾಡುವುದು ಹಾಗೂ ಕೌಶಲ್ಯ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಮಕ್ಕಳು ಧ್ವನಿ ಇಲ್ಲದವರು, ಅವರಿಗೆ ಹೆಚ್ಚು ಒತ್ತು ನೀಡುತ್ತಿಲ್ಲ, ಕುಟುಂಬದಿಂದ ಹಿಡಿದು ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಹಾಗೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಸ್ಯೆಗಳ ಪರಿಹಾರಕ್ಕೆ ರ್ಯಾಲಿ, ಪ್ರತಿಭಟನೆ, ಪತ್ರಿಕಾಗೋಷ್ಠಿ, ಹೋರಾಟ ಮಾಡಬಹುದು. ಆದರೆ ಎಲ್ಲಕ್ಕಿಂತ ವಿಶೇಷವಾಗಿ ಅಹವಾಲು ಸ್ವೀಕರಿಸುವುದಾಗಿದೆ ಎಂದರು.
ನೊಂದ ಜನರು ನ್ಯಾಯಾಲಕ್ಕೆ ಹೋಗುತ್ತಾರೆ, ನ್ಯಾಯಾಲದಲ್ಲಿ ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತದೆ. ಇದರಿಂದ ಸಮಯ ಹಾಗೂ ಹಣ ವ್ಯಯವಾಗುತ್ತದೆ ಮತ್ತು ನ್ಯಾಯ ಸಹಿತ ಸಿಗುವುದಿಲ್ಲ. ಅದಕ್ಕೆ ಬದಲಾಗಿ ಸಮಸ್ಯೆ ಇರುವ ಮಕ್ಕಳನ್ನು ಒಂದೆಡೆಗೆ ಸೇರಿಸಿ ಮುಖಾಮುಖಿ ಸಂವಾದದ ಮೂಲಕ ನ್ಯಾಯ ಒದಗಿಸಬಹುದು ಎಂದು ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸದಸ್ಯರಾದ ಕೆ.ಬಿ.ರೂಪನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಸಮಸ್ಯೆಗಳನ್ನು ಬಗೆಹರಿಸಲು ಆಯೋಗ ಇಂತಹ ಕಾರ್ಯಕ್ರಮ ಆಯೋಜನೆಮಾಡಿದೆ.
ಈಗಾಗಲೇ ಐದು ಜಿಲ್ಲೆಗಳಲ್ಲಿ ಕಾರ್ಯಕ್ರಮ ಯೋಜಿಸಲಾಗಿದೆ ಇದು ಆರನೇ ಜಿಲ್ಲೆಯಾಗಿದೆ. ಚಳ್ಳಕೆರೆ ತಾಲೂಕಿನ ಒಂದು ಗ್ರಾಮಕ್ಕೆ ನಿನ್ನೆ ಭೇಟಿ ನೀಡಲಾಗಿತ್ತು. ಅಲ್ಲಿ ನೂರಾರು ವರ್ಷಗಳಿಂದ ವಾಸವಾಗಿದ್ದಾರೆ ಅವರಿಗೆ ವಾಸಕ್ಕೆ ಮನೆ ಇಲ್ಲ, ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ ಇದು ವಿಪರ್ಯಾಸದ ಸಂಗತಿ. ಅಂತವರಿಗೆ ಹಕ್ಕು ಪಡೆಯಲು ಆಯೋಗ ವೇದಿಕೆ ಒದಗಿಸುವ ಕೆಲಸಮಾಡುತ್ತಿದೆ. ಸಣ್ಣಪುಟ್ಟ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗುವುದು. ಕೆಲವು ಸಮಸ್ಯೆಗಳು ವಾರ ಅಥವಾ 15 ದೊಳಗಾಗಿ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಜಗದೀಶ ಹೆಬ್ಬಳ್ಳಿ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸಹಾಯಕ ಕಾರ್ಯದರ್ಶಿ ಜಾಫರ ಸುತಾರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಜಗದೀಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೀರಜಾದೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಣ್ಣ, ಕಾಣೆಯಾದ ಮಕ್ಕಳ ಬ್ಯೂರೋದ ಮುತ್ತುರಾಜ ಮಾದರ ಇತರರು ಉಪಸ್ಥಿತರಿದ್ದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಠದ ಸ್ವಾಗತಿಸಿದರು. ಸ್ಪೂರ್ತಿ ಸಂಸ್ಥೆ ನಿರ್ದೇಶಕಿ ಶ್ರೀಮತಿ ಎಂ.ರೇಣುಕಾ ಕಾರ್ಯಕ್ರಮ ನಿರೂಪಿಸಿದರು.
ಸಂವಾದ: ನಗರದ ಜಿಲ್ಲಾ ಗುರುಭವನದಲ್ಲಿ ಆಯೋಜಿಸಲಾದ ಮಕ್ಕಳ ಹಕ್ಕುಗಳು ಮತ್ತು ಸಮಸ್ಯೆ ಕುರಿತು ಅಹವಾಲು ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳ ಸ್ಥಿತಿ ಹಾಗೂ ಪೋಷಕರ ಅಳಲು ಮನಕಲಕುವಂತಿತ್ತು. ಒಂದೊಂದು ಮಕ್ಕಳದು ಕರುಣಾಜನಕ ಜೀವನ.
ಶಿಗ್ಗಾಂವ ತಾಲೂಕು ರಾಜೀಪುರದ ಹನುಮವ್ವಳ ತಂದೆ ಗುರುಶಾಂತಪ್ಪ ಅವರು ತಮ್ಮಗಳು ಹೆಣ್ಣು- ಗಂಡು ಎರಡೂ ಜನಾನಂಗ ಹೊಂದಿದ್ದಾಳೆ. ಅವಳು ಗಂಡ- ಅಥವಾ ಹೆಣ್ಣು ಎರಡಲ್ಲಿ ಒಂದಾಗಬೇಕು. ಈ ಕುರಿತು ದೊಡ್ಡ ದೊಡ್ಡ ನಗರಗಳಿಗೆ ತೆರಳಿ ಪರೀಕ್ಷಿದಾಗಲೂ ಖ್ಯಾತ ವೈದ್ಯರು ಇದೊಂದು ವಿಚಿತ್ರ ಜನನ ನಮ್ಮಿಂದ ಸಾಧ್ಯವಿಲ್ಲ ಎಂದು ತಿಳಿಸಿದು. ಈಗ ಅವಳಿಗೆ ಮೂತ್ರ ವಿಸರ್ಜನೆಗೆ ತುಂಬಾ ಸಮಸ್ಯೆಯಾಗಿದೆ. ಶಸ್ತ್ರ ಚಿಕಿತ್ಸೆಗೆ ಬೆಂಗಳೂರಿಗೆ ಹೋದರೆ ಐದರಿಂದ ಆರು ಲಕ್ಷ ರೂ. ಖರ್ಚಾಗುತ್ತದೆ ಎಂದು ಹೇಳಿದರು. ನಾವು ಬಡವರು ಕೂಲಿನಾಲಿ ಮಾಡಿಕೊಂಡು ಬದುಕು ಸಾಗಿಸುತ್ತೇವೆ. ದಯಮಾಡಿ ಸಹಾಯಮಾಡಿ ಎಂದು ಬೇಡಿಕೊಂಡರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ ಅವರು ಮಾತನಾಡಿ, ಮಲ್ಟಿ ಸೂಪರ್‍ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಮಾಡಿಸಲು ಜಿಲ್ಲಾ ಶಸ್ತ್ರ ಚಿಕಿತ್ಸಕರಿಂದ ಪತ್ರ ಕೊಡಿಸಲಾಗುವುದು ಎಂದು ಭರಸವೆ ನೀಡಿದರು.
ರಾಣೇಬೆನ್ನೂರ ತಾಲೂಕು ಐರಣಿ ಗ್ರಾಮದ ಬಾಲಕ ಪ್ರಮೋದನ ತಂದೆ ಮಂಜಪ್ಪ ಮಾತನಾಡಿ, ತಮ್ಮ ಮಗನಿಗೆ ತಲಿಸಿಮಾ ಕಾಯಿಲೆ ಇದ್ದು, ಈಗಾಗಲೇ ಎರಡರಿಂದ ಮೂರು ಲಕ್ಷ ಹಣ ವೆಚ್ಚ ಮಾಡಲಾಗಿದೆ. ಪ್ರತಿ ತಿಂಗಳು ಮಣಿಪಾಲ್ ಕೆಎಂಎಲ್‍ಗೆ ತೆರಳಿ ರಕ್ತ ಹಾಕಿಸಲಾಗುತ್ತಿದೆ 8 ರಿಂದ 10 ಸಾವಿರ ವೆಚ್ಚಮಾಡಲಾಗುತ್ತಿದೆ. ನಾವು ಬಡವರು ಕಾರಣ ತಾವು ಪರಿಹಾರ ನೀಡಬೇಕು ಎಂದು ಕೇಳಿಕೊಂಡರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ ಅವರು ಅಷ್ಟು ದೂರು ಹೋಗುವ ಬದಲು ಸಮೀಪದ ದಾವಣಗೆರೆಗೆ ತೆರಳಿ ಚಿಕಿತ್ಸೆ ಕೊಡಿಸಿ, ಉಚಿತ ರಕ್ತ ಒದಗಿಸಲು ನಾನು ಸಿಫಾರಸ್ಸು ಮಾಡುತ್ತೇನೆ ಎಂದು ತಿಳಿಸಿದರು.
ರಾಣೇಬೆನ್ನೂರಿನ ಶಿವರಂಜನಿ ಅವರು ಮಾತನಾಡಿ, ನಾನು ಅಂಧಳಾಗಿದ್ದು, ನಾವು ಐದಾರು ಜನ ಸಹಪಾಠಿಗಳು ಕಾರ್ಯಕ್ರಮ ನೀಡಲು ಬಸ್‍ನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಕೆಲವು ಬಸ್‍ಗಳಲ್ಲಿ ಇಬ್ಬರಿಗೆ ಮಾತ್ರ ಪರವಾನಿಗೆ ಇದೆ. ಉಳಿದವರು ಬೇರೆ ಬಸ್‍ಗೆ ಬರುವಂತೆ ತಿಳಿಸುತ್ತಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಅದರಂತೆ ಬ್ಯಾಂಕ್‍ಗಳಲ್ಲಿ ಎ.ಟಿ.ಎಂ. ಕಾರ್ಡ್ ನೀಡುತ್ತಿಲ್ಲ ಎಂದು ತಿಳಿಸಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸದಸ್ಯರಾದ ಕೆ.ಬಿ.ರೂಪನಾಯ್ಕ ಅವರು ಮಾತನಾಡಿ, ಈ ಕುರಿತು ಸಾರಿಗೆ ಅಧಿಕಾರಿಗಳಿಗೆ ಆಯೋಗದಿಂದ ನಿರ್ದೇಶಕರಿಗೆ ಸೂಚನೆ ನೀಡಲಾಗುವುದು ಹಾಗೂ ಸ್ಥಳೀಯ ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದಿನ ಕಾಲದಲ್ಲಿ ಸಾಮಾನ್ಯರಿಗೆ ಎಟಿಎಂನಿಂದ ಮೋಸವಾಗುತ್ತಿದೆ. ಇನ್ನು ನಿಮ್ಮಂತವರಿಗೆ ಮೋಸವಾಗಲ್ವಾ? ನೀವು ಎ.ಟಿ.ಎಂ. ಪಡೆದರೆ ನಿಮ್ಮ ಹಣವನ್ನು ಯಾರಾದರೂ ಡ್ರಾಮಾಡಿದರೆ ನಿಮಗೆ ಅನ್ಯಾಯವಾಗುತ್ತದೆ ಎಂದು ತಿಳಿಸಿದರು.
ಕಲವು ಮಕ್ಕಳಿಗೆ ಮಾಶಾಸನ ಬಂದಿಲ್ಲ ಹಾಗೂ ಕೆಲವು ಮಕ್ಕಳಿಗೆ ಬುದ್ದಿಮಾಂಧ್ಯ ಮಕ್ಕಳೆಂದು ಸಾಮಾನ್ಯ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ನೀಡುತ್ತಿಲ್ಲ ಎಂದು ಮಕ್ಕಳ ಪಾಲಕರು ದೂರು ಹೇಳಿದರೆ, ಗುತ್ತಲ ತಾಂಡಾದಲ್ಲಿ ಇಟ್ಟಗಿ ಭಟ್ಟಿಯಲ್ಲಿ ಮಕ್ಕಳು ಕೆಲಸಮಾಡುತ್ತಿದ್ದಾರೆ, ಕಂಚಿನೆಗಳೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶೌಚಾಲಯವಿಲ್ಲ ಹಾಗೂ ಗ್ರಾಮ ಸಭೆ ನಡೆಸಿಲ್ಲ ಎಂದು ಶಾಲಾ ಮಕ್ಕಳಿಂದ ದೂರುಗಳು ಕೇಳಿಬಂದವು.
ಈ ಕುರಿತಂತೆ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ, ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸದಸ್ಯರಾದ ಕೆ.ಬಿ.ರೂಪನಾಯ್ಕ ಅವರು ಸೂಚನೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ