ಬ್ಯಾಡಗಿ:
ಕಾವೇರಿ ಮುಗಿಯಿತು ಇದೀಗ ಮೇಕೆದಾಟು ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ, ಹೀಗಾಗಿ ರಾಜ್ಯದ ನೆಲ-ಜಲ-ಭಾಷೆಗಳ ವಿಚಾರವಾಗಿ ವಿಧಾನಸೌಧ ದಲ್ಲೇ ಸೂಕ್ತ ಬೆಂಬಲ ಸಿಗುತ್ತಿಲ್ಲ ರಾಜ್ಯಕ್ಕೆ ಹೊಂದಿಕೊಂಡಿರುವ ಎಲ್ಲ ಅನ್ಯ ಭಾಷಿಕರು ರಾಜ್ಯವನ್ನು ಹರಿದು ತಿನ್ನುತ್ತಿದ್ದರೂ ರಾಜಕಾರಣಿಗಳು ಗಟ್ಟಿ ನಿಲುವು ತೆಗೆದುಕೊಳ್ಳದೇ ತಮ್ಮ ಅಸಹಾಯಕತೆಯನ್ನು ತೋರುತ್ತಿರುವುದು ವಿಪರ್ಯಾಸದ ಸಂಗತಿ ಎಂದು ವರ್ತಕ ಕುಮಾರಗೌಡ ಪಾಟೀಲ ಖೇದ ವ್ಯಕ್ತಪಡಿಸಿದರು.
ತಾಲ್ಲೂಕಿನ ಮಾಸಣಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು, ಕನ್ನಡ ಭಾಷೆ ಕೇವಲ ರಾಜ್ಯಕ್ಕೆ ಸೀಮಿತವಲ್ಲ ಇದೊಂದು ಸಂಸ್ಕøತಿ ಕಳೆದ ಆರೇಳು ಶತನಾನಗಳಿಂದಲೂ ದಬ್ಬಾಳಿಕೆಗಳು ನಡೆಯುತ್ತಾ ಬಂದಿದೆ, ಮೊಘಲರಿಂದ ಆದಿಯಾಗಿ, ತೆಲುಗಿನ ಗಂಗರು, ಮೌರ್ಯರ ಕಾಲದವರೆಗೂ ಕನ್ನಡ ಭಾಷೆ ಮತ್ತು ಸಂಸ್ಕøತಿಯ ಮೇಲೆ ದಬ್ಬಾಳಿಕೆ ನಡೆಯುತ್ತಾ ಬಂದಿದ್ದರೂ ಕನ್ನಡತನವನ್ನು ಉಳಿಸಿಕೊಳ್ಳಲಾಗಿದೆ ಎಂದರು.
ರಾಜ್ಯಗಳ ಸರದಿ:ರಾಜಪ್ರಭುತ್ವ ವ್ಯವಸ್ಥೆಯ ಬಳಿಕ ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಕನ್ನಡದ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ, ಬೆಳಗಾವಿ ಉಳಿಸಿಕೊಳ್ಳಲು ಸುಪ್ರೀಂಕೋರ್ಟ ಮೆಟ್ಟಿಲೇರಬೇಕಾಯಿತು, ಕಾಸರಗೋಡು ಸಮಸ್ಯೆ ಇಂದಿಗೂ ಜೀವಂತವಾಗಿದೆ, ನಮ್ಮದೇ ಜಿಲ್ಲೆಗಳಾದ ಸೊಲ್ಲಾಪುರ ಮತ್ತು ಕೊಲ್ಲಾಪುರ ಕೈತಪ್ಪಿ ಹೋಗಿವೆ, ರಾಜಧಾನಿ ಬೆಂಗಳೂರು ತಮಿಳುನಾಡಿನ ಒಂದು ಭಾಗವಾಗುತ್ತಿದೆ, ಗೋವಾದಲ್ಲಿ ಕನ್ನಡಿಗರನ್ನು ಒಕ್ಕೆಲೆಬ್ಬಿಸಲಾಗು ತ್ತಿದೆ, ಹೀಗೆ ಹತ್ತು ಹಲವು ರೀತಿಯಲ್ಲಿ ಕರ್ನಾಟಕ ಸಂಸ್ಕøತಿಗಳ ಮೇಲೆ ಸವಾರಿ ನಡೆಯುತ್ತಿದೆ ಎಂದರು.
ಕೇವಲ ಭಾಷೆಯಲ್ಲ ಶೈಕ್ಷಣಿಕ ಅಧಃಪತನ:ಉಪನ್ಯಾಸ ನೀಡಿದ ಶಿಕ್ಷಕಿ ಇಂದಿರಾ ಕೊಪ್ಪದ, ಕಂಗ್ಲೀಷ್ ಶಾಲೆಗಳ ಹಾವಳಿಗೆ ಕೇವಲ ಭಾಷೆಯಷ್ಟೇ ಅಲ್ಲ, ಕನ್ನಡ ಭಾಷಾ ಮಾದ್ಯಮದ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು ಶೈಕ್ಷಣಿಕ ಅಧಃಪತನವಾಗುತ್ತಿದೆ, ಬೆಂಗಳೂರು ನಗರವೊಂದರಲ್ಲೇ ಸುಮಾರು 6 ಸಾವಿರಕ್ಕೂ ಹೆಚ್ಚು ಇಂಗ್ಲೀಷ್ ಮಾದ್ಯಮದ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು ಇನ್ನೆಲ್ಲಿಯ ಕನ್ನಡ ಎನ್ನುವಂತಾಗಿದೆ ಎಂದರು.
ರಾಜ್ಯ ಭಾಷೆಯಾಗಲಿ: ಮಾತೃಭಾಷೆಯಲ್ಲಿ ಮಾದ್ಯಮಿಕ ಶಿಕ್ಷಣವೆಂಬ ನಿಯಮಕ್ಕೆ ಇಂದಿಗೂ ತಿದ್ದುಪಡಿ ತರಲಾಗುತ್ತಿಲ್ಲ, ಕೂಡಲೇ ಸರ್ಕಾರ ಕನ್ನಡವನ್ನು ರಾಜ್ಯ ಭಾಷೆಯಾಗಿ ಘೋಷಣೆ ಮಾಡಬೇಕು, ಕನ್ನಡ ಹೊರತುಪಡಿಸಿ ಅನ್ಯ ಭಾಷೆ ಪ್ರಥಮವಾಗಿದ್ದಲ್ಲಿ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಡ್ಡಾಯ ಗೊಳಿಸಬೇಕು ಇಲ್ಲದೇ ಹೋದರೆ ರಾಜ್ಯದಲ್ಲೇ ಕನ್ನಡ ಭಾಷೆಗೆ ಕೊಡಲಿಪೆಟ್ಟು ಬೀಳಲಿದೆ ಎಂದರು.
ಇದಕ್ಕೂ ಮುನ್ನ ತಾ.ಪಂ.ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು, ಕಸಾಪ ತಾಲೂಕಾಧ್ಯಕ್ಷ ಬಿ.ಎಮ್.ಜಗಾಪುರ ಅಧ್ಯಕ್ಷತೆ ವಹಿಸಿದ್ದರು, ಎಸ್ಡಿಎಮ್ಸಿ ಉಪಾದ್ಯಕ್ಷ ಬಸಪ್ಪ ಕೆಂಪಲಿಂಗಣ್ಣನವರ, ಸದಸ್ಯ ನಿಂಗಪ್ಪ ಹೆಗ್ಗಣ್ಣನವರ, ಮುಖ್ಯಶಿಕ್ಷಕ ಎಚ್.ಟಿ.ಭರಮಗೌಡ್ರ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜೀವರಾಜ ಛತ್ರದ, ಎಮ್.ಎಸ್.ಶಶಿಧರ ಎಸ್.ಎಚ್.ಕುರುಕುಂದಿ ಜಿ.ಟಿ.ಮುಲ್ಲಾ, ಬಿ.ಡಿ.ಗುದಗಿ, ಜಿ.ಟಿ.ಅಂಬಿಗೇರ, ರಾಜೇಂದ್ರಸ್ವಾಮಿ ಹಿರೇಮಠ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಕ ಐ.ಬಿ.ಮುದಿಗೌಡ್ರ ಸ್ವಾಗತಿಸಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ