ಕಾಮಗಾರಿ ಆರಂಭಿಸಲು ಆಗ್ರಹಿಸಿ ಪ್ರತಿಭಟನೆ

ಚಿತ್ರದುರ್ಗ:

          ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಸಮಿತಿ, ಅಖಿಲ ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.

           ಚಿತ್ರದುರ್ಗದಲ್ಲಿ ಕೆ.ಎಸ್.ಆರ್.ಟಿ.ಸಿ.ಹೈಟೆಕ್ ಬಸ್‍ನಿಲ್ದಾಣ ಆಗಲೇಬೇಕು. ಪ್ರಯಾಣದ ಸಮಯ ಹಾಗೂ ದರ ಉಳಿತಾಯವಾಗ ಬೇಕಾದರೆ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ತುರ್ತಾಗಿ ಆಗಬೇಕು. ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಗಿದ್ದರೂ ಕಾಮಗಾರಿಯನ್ನು ವಿಳಂಬ ಮಾಡುತ್ತಿರುವ ಸರ್ಕಾರ ನಿಗಧಿತ ಅವಧಿಯೊಳಗೆ ಕಟ್ಟಡ ನಿರ್ಮಾಣ ಮಾಡಿ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಿ ಜಿಲ್ಲೆಯ ಬಡವರಿಗೆ ಉಚಿತ ಆರೋಗ್ಯ ಸಿಗುವಂತಾಗಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದರು.

            ಬಿ.ಪಿ.ಎಲ್.ಕಾರ್ಡ್ ಹೊಂದಿರುವ ನಗರ ಹಾಗೂ ಗ್ರಾಮೀಣ ಪ್ರದೇಶದ ವಸತಿರಹಿತರಿಗೆ ಕೂಡಲೆ ನಿವೇಶಗಳನ್ನುವಿಂಗಡಿಸಿ ಮನೆಗಳನ್ನು ಕಟ್ಟಿಸಿಕೊಡಬೇಕು. ಪ್ರತಿ ಇಲಾಖೆಯಲ್ಲಿ ಪರಿಶಿಷ್ಟರಿಗಾಗಿ ಮೀಸಲಿರುವ ಹಣವನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಗಳಿಗೆ ಬಳಸಬಾರದು. ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆಯ ಏರಿಕೆಯನ್ನು ಕೂಡಲೆ ಇಳಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ನೌಕರರ ಹಿಂಬಡ್ತಿ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂಬಡ್ತಿಯನ್ನು ಯಥಾವತ್ತಾಗಿ ಕಾಪಾಡಿಕೊಂಡು ಹೋಗಬೇಕು.

            ಜಿಲ್ಲೆಯ ಬಡ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್, ಬೆಂಗಳೂರು, ದಾವಣಗೆರೆಗೆ ಹೋಗುವುದು ಕಷ್ಟಕರವಾಗಿದೆ. ಕೆಲವೊಮ್ಮೆ ತುರ್ತು ಸಂದರ್ಭಗಳಲ್ಲಿ ಬೇರೆ ಕಡೆ ಕರೆದೊಯ್ಯುವಾಗ ರೋಗಿ ಮೃತಪಟ್ಟಿರುವ ಘಟನೆಗಳು ಸಾಕಷ್ಟು ಬಾರಿ ನಡೆದಿದೆ. ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಕೂಡಲೆ ಮೆಡಿಕಲ್ ಕಾಲೇಜು ಆರಂಭಿಸಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾಡನಾಯಕನಹಳ್ಳಿ ರಂಗಪ್ಪ ಒತ್ತಾಯಿಸಿದರು.

           ಅಖಿಲ ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ ಜಿಲ್ಲಾಧ್ಯಕ್ಷ ಕೆ.ಜಿ.ಅನಂತಮೂರ್ತಿ ನಾಯಕ್, ಸೇವಾಲಾಲ್ ಸರ್ದಾರ್‍ಸ್ವಾಮೀಜಿ, ಕನ್ನಡ ಸೇನೆ ಕರ್ನಾಟಕ ಜಿಲ್ಲಾಧ್ಯಕ್ಷ ರಮೇಶ್, ಎಸ್.ತಿಪ್ಪೇಸ್ವಾಮಿ, ಬಿ.ಇ.ಕೃಷ್ಣಯ್ಯ, ಮಹಂತೇಶ್, ಯಶವಂತ್, ಫಜಲ್‍ರೆಹಮಾನ್, ಎಂ.ಪಿ.ಮಲ್ಲೇಶ್, ಇ.ರಾಜಪ್ಪ, ಚಿತ್ತಪ್ಪ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link