
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಸರಣಿ ಅಂತ್ಯಕಂಡಿದ್ದು ಇದೀಗ ಏಕದಿನ ಸರಣಿಗೆ ಸಜ್ಜಾಗುತ್ತಿದೆ. 1-2 ಅಂತರದಿಂದ ಟೀಮ್ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಸೋಲು ಕಂಡಿದ್ದು, ಐತಿಹಾಸಿಕ ಗೆಲುವು ಸಾಧಿಸುವಲ್ಲಿ ಎಡವಿತು. ಬುಧವಾರದಂದು ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ ಮೊದಲ ಮ್ಯಾಚ್ ಶುರುವಾಗಲಿದೆ.
ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸುತ್ತಿದ್ದಾರೆ. ಜಸ್‌ಪ್ರೀತ್ ಬುಮ್ರಾ ಉಪ ನಾಯಕನಾಗಿದ್ದಾರೆ. ಹೀಗಿರುವಾಗ ಭಾರತಕ್ಕೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಟೆಸ್ಟ್ ಸರಣಿ ವೇಳೆ ಇಂಜುರಿಗೆ ತುತ್ತಾಗಿ ತಂಡದಿಂದ ಹೊರಬಿದ್ದ ಸ್ಟಾರ್ ಬೌಲರ್ ಇದೀಗಏಕದಿನ ಸರಣಿಗೆ ಲಭ್ಯರಿದ್ದಾರೆ. ಈ ಬಗ್ಗೆ ಜಸ್‌ಪ್ರೀತ್ ಬುಮ್ರಾ ( ಖಚಿತ ಮಾಹಿತಿ ನೀಡಿದ್ದಾರೆ.
ಹೌದು, ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ವೇಳೆ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇದರಿಂದಾಗಿ ಮೂರನೇ ಟೆಸ್ಟ್ಗೆ ಅಲಭ್ಯರಾಗಿದ್ದರು.
ಅಲ್ಲದೆ ಸಿರಾಜ್ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೀಸಲು ಆಟಗಾರನಾಗಿ ವೇಗದ ಬೌಲರ್ ನವದೀಪ್ ಸೈನಿ ಏಕದಿನ ತಂಡಕ್ಕೆ ಬಿಸಿಸಿಐ ಹೆಸರಿಸಿತ್ತು. ಆದರೀಗ ಸಿರಾಜ್ ಸಂಪೂರ್ಣ ಗುಣಮುಖರಾಗಿದ್ದು, ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಬುಮ್ರಾ ಮಾಹಿತಿ ನೀಡಿದ್ದಾರೆ.
ಸೋಮವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಬೂಮ್ರಾ ಅವರು ಸಿರಾಜ್ ಚೇತರಿಸಿಕೊಂಡಿದ್ದು ತಂಡದ ಜೊತೆಗೆ ಅಭ್ಯಾಸದಲ್ಲಿ ತೊಡಗಿದ್ದಾರೆ ಎಂಬುದಾಗಿ ತಿಳಿಸಿದರು. “ಸಿರಾಜ್ ಚೇತರಿಕೆಯನ್ನು ಕಂಡಿದ್ದಾರೆ. ಆತ ನಮ್ಮೊಂದಿಗೆ ಅಭ್ಯಾಸ ಕೂಡ ಮಾಡುತ್ತಿದ್ದಾರೆ. ಅವರು ಸಮರ್ಥರಾಗಿರುವಂತೆ ಕಾಣಿಸುತ್ತಾರೆ” ಎಂದಿ ಬೂಮ್ರಾ ಮಾಹಿತಿ ನೀಡಿದ್ದಾರೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಜನವರಿ 19 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಪಾರ್ಲ್ನ ಬೋಲ್ಯಾಂಡ್ ಪಾರ್ಕ್ನಲ್ಲಿ ನಡೆಯಲಿದೆ. ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ. ಎರಡನೇ ಏಕದಿನ ಪಂದ್ಯ ಇದೇ ಮೈದಾನದಲ್ಲಿ ಜನವರಿ 21 ರಂದು ಆಯೋಜಿಸಲಾಗಿದೆ.
ಇದುಕೂಡ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಅಂತಿಮ ಮೂರನೇ ಏಕದಿನ ಪಂದ್ಯ ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಜನವರಿ 23 ರಂದು ನಡೆಯಲಿದೆ. ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.
ಏಕದಿನ ಸರಣಿಗೆ ಭಾರತ ತಂಡ:
ಕೆ.ಎಲ್.ರಾಹುಲ್ (ನಾಯಕ), ಜಸ್‌ಪ್ರೀತ್ ಬುಮ್ರಾ (ಉಪ-ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್),
ಇಶಾನ್ ಕಿಶನ್ (ವಿಕೆಟ್‌ಕೀಪರ್), ಯುಜ್ವೇಂದ್ರ ಚಹಾಲ್, ಆರ್. ಅಶ್ವಿನ್, ಭುವನೇಶ್ವರ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್ ಹಾಗೂ ನವದೀಪ್ ಸೈನಿ.
ನೇರಪ್ರಸಾರ:
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎಲ್ಲ ಏಕದಿನ ಪಂದ್ಯಗಳು ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ನಲ್ಲಿ ನೇರಪ್ರಸಾರ ಕಾಣಲಿದೆ. ಡಿಸ್ನಿ+ ಹಾಟ್ಸ್ಟಾರ್ನಲ್ಲೂ ಲೈವ್ ಸ್ಟ್ರೀಮ್ ಆಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
