ಉಪಸಭಾಪತಿ ಸ್ಥಾನಕ್ಕೆ ಜೆಡಿಎಸ್ ನ ಧರ್ಮೇಗೌಡ ನಾಮಪತ್ರ

ಬೆಳಗಾವಿ

             ಉಪಸಭಾಪತಿ ಸ್ಥಾನಕ್ಕೆ ಜೆಡಿಎಸ್ ನ ಶ್ರೀಕಂಠೇಗೌಡರ ಬದಲಾಗಿ ಧರ್ಮೇಗೌಡ ನಾಮಪತ್ರ ಸಲ್ಲಿಸಿದ್ದಾರೆ. ಸಭಾಪತಿ ಹುದ್ದೆಗೆ ಕಾಂಗ್ರೆಸ್ ನಲ್ಲಿ ಎಸ್.ಆರ್. ಪಾಟೀಲ್ ಬದಲಿಗೆ ಪ್ರತಾಪ್ ಚಂದ್ರ ಶೆಟ್ಟಿ ಕೊನೆ ಕ್ಷಣದಲ್ಲಿ ನಾಮಪತ್ರ ಸಲ್ಲಿಸಿದ್ದರು. ಇದೇ ರೀತಿಯ ಬದಲಾವಣೆ ಜೆಡಿಎಸ್ ನಲ್ಲೂ ಆಗಿದೆ.

              ಶ್ರೀಕಂಠೇಗೌಡರೇ ಬಹುತೇಕ ಉಪ ಸಭಾಪತಿಯಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಧರ್ಮೇಗೌಡರು ನಾಮಪತ್ರ ಸಲ್ಲಿಸಿರುವುದು ಜೆಡಿಎಸ್ ಅಷ್ಟೇ ಅಲ್ಲದೇ ಕಾಂಗ್ರೆಸ್ ಪಾಳಯದಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

              ಸುವರ್ಣಸೌಧದಲ್ಲಿಂದು ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ ಅವರಿಗೆ ಧರ್ಮೇಗೌಡ ನಾಮಪತ್ರ ಸಲ್ಲಿಸಿದರು. ಶ್ರೀಕಂಠೇಗೌಡರಿಗೆ ನಾಮಪತ್ರ ಸಲ್ಲಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿನ್ನೆ ಒಪ್ಪಿಗೆ ಸೂಚಿಸಿದ್ದರು. ಆದರೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಕೊನೆಯ ಕ್ಷಣದ ಬದಲಾವಣೆ ಎನ್ನುವಂತೆ ಧರ್ಮೇಗೌಡ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

             ನಾಳೆ ಡಿ.19 ರಂದು ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈಗಾಗಲೇ ಉಪಸಭಾಪತಿ ಹುದ್ದೆಯನ್ನು ಕಾಂಗ್ರೆಸ್ ಜೆಡಿಎಸ್‍ಗೆ ಬಿಟ್ಟುಕೊಟ್ಟಿದೆ.

             ಜೆಡಿಎಸ್ ನ ಹಠಾತ್ ಬದಲಾವಣೆಗೆ ಮಾಜಿ ಸಭಾಪತಿ ಹಾಗೂ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಜೆಡಿಎಸ್ ರಾಜಕಾರಣದಲ್ಲಿ ಏನು ಬೇಕಾದರೂ ಬದಲಾಗುತ್ತದೆ ಎಂದು ವ್ಯಂಗ್ಯವಾಗಿ ಪ್ರತಿಕ್ರಯಿಸಿದ್ದಾರೆ.

            ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಕಾರಣವೇ ಹೀಗೆ. ಕೊನೆಕ್ಷಣದಲ್ಲಿ ಏನು ಬೇಕಾದರೂ ಬದಲಾವಣೆಯಾಗುತ್ತದೆ. ಮಂತ್ರಿಯಾಗಬೇಕೆನ್ನುವ, ಸಭಾಪತಿಯಾಗಬೇಕೆನ್ನುವ ತಮ್ಮ ಆಸೆಗಳು ಯಾವುವು ಈಡೇರಲಿಲ್ಲ. ಮೊನ್ನೆ ಉಪಸಭಾಪತಿ ಸ್ಥಾನಕ್ಕೆ ಶ್ರೀಕಂಠೇಗೌಡರ ಹೆಸರಿತ್ತು. ನಿನ್ನೆ ಸಂಜೆ ಅಪ್ಪಾಜಿಗೌಡರ ಹೆಸರು ಚಾಲ್ತಿಗೆ ಬಂತು. ಇಂದು ಅಂತಿಮವಾಗಿ ಧರ್ಮೇಗೌಡರ ಹೆಸರು ಬಂದಿದೆ. ಕೊನೆಗೆ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಬೇಕು ಎಂದು ಸ್ವಪಕ್ಷದ ನಡೆಯ ವಿರುದ್ಧ ಬೇಸರ ವ್ಯಕ್ತಪಡಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link