ಹೊಸಪೇಟೆ :
ಅಸ್ಪಶ್ಯತೆ ಮುರಿಯುವ ಆಶಯ ಹಾಗು ವಾಸ್ತವ ಮೀರುವ ಆದರ್ಶ ಡಾ.ಅಮರೇಶ ನುಗಡೋಣಿ ಅವರ ಕಥೆ ಆಧಾರಿತ “ನೀರು ತಂದವರು” ಸಿನಿಮಾದಲ್ಲಿದೆ ಎಂದು ಕನ್ನಡ ವಿವಿ ಪ್ರಾಧ್ಯಾಪಕ ಡಾ.ರಹಮತ್ ತರಿಕೆರೆ ಹೇಳಿದರು.
ಇಲ್ಲಿನ ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ನಮ್ಮ ನೋಟ-3 ವೇದಿಕೆಯಡಿ ಅತ್ಯುತ್ತಮ ಕಥೆ ರಾಜ್ಯ ಪ್ರಶಸ್ತಿ(2017) ಪಡೆದ ಡಾ.ಅಮರೇಶ ನುಗಡೋಣಿ ಅವರ ಕಥೆ ಆಧಾರಿತ “ನೀರು ತಂದವರು” ಚಲನಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ವಿವಿ ಪ್ರಾಧ್ಯಾಪಕರು ಸಂಶೋಧನೆ ಆಚೆಯೂ ಕ್ರಿಯಾಶೀಲರಾಗಿರುತ್ತಾರೆ ಎಂಬುದನ್ನು ಈ ಚಿತ್ರವು ಪ್ರತಿನಿಧಿಸುತ್ತಿದೆ. ಚಲನಚಿತ್ರವು ಅತ್ಯಂತ ಲವಲವಿಕೆಯಿಂದ ಸಾಗುತ್ತದೆ. ಮಹಿಳೆಯ ಪಾತ್ರ, ಪುರುಷರ ಅಹಂಕಾರ, ರಾಜಕೀಯ, ಜಾತಿ ಸಂಘರ್ಷಗಳ ನಡುವೆ ಮಹಿಳೆಯರು ತಮ್ಮ ವಿವೇಕ ಮೆರೆಯುತ್ತಾರೆ. ನೀರು ಕರ್ನಾಟಕದ ಊರು ಕೇರಿಗಳ ಸಮಸ್ಯೆ ಮಾತ್ರವಲ್ಲ. ಕರ್ನಾಟಕ ತಮಿಳುನಾಡು, ಭಾರತ ಪಾಕಿಸ್ತಾನ, ಭಾರತ ನೇಪಾಳ ನಡುವೆ ಇರುವ ಜಾಗತಿಕ ಸಮಸ್ಯೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಕುಲಪತಿ ಡಾ.ಮಲ್ಲಿಕಾ ಎಸ್.ಘಂಟಿ ಮಾತನಾಡಿ, ಮೂಲಕೃತಿಯ ಆಶಯಕ್ಕೆ ಧಕ್ಕೆ ಬರದಂತೆ ಪ್ರೇಕ್ಷಕನ ಬಯಕೆಗೆ ತಕ್ಕಂತೆ ಕೃತಿಯನ್ನು ಬಗ್ಗಿಸುವುದು ನಿರ್ದೇಶಕನಿಗೆ ಸವಾಲಾಗಿದೆ. ಸಾಮಾಜಿಕ ಅಪಮಾನಗಳಿಗೆ ದೃಶ್ಯ ಮಾಧ್ಯಮ ಹಾಗು ಪ್ರೇಕ್ಷಕ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದು ಮುಖ್ಯ. 1970ರಿಂದ ಓದಿದ ದಲಿತ, ಓದಲಾರದ ಜಮೀನ್ದಾರರ ನಡುವೆ ತಿಕ್ಕಾಟಗಳಿವೆ. ಇಂದಿಗೂ ನೀರು ಮತ್ತು ಜಾತಿಯ ಭಯಾನಕತೆಯನ್ನು ಹಳ್ಳಿಗಳಲ್ಲಿ ಕಾಣಬಹುದು. ಊರು ಕೇರಿಗೆ, ಕೇರಿ ಊರಿಗೆ ನೀರು ತರಲು ಹೋದಾಗ ಮಾತ್ರ ನೀರು ತಂದವರು ಸಿನಿಮಾ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಕಥೆಗಾರ ಹಾಗು ಕನ್ನಡ ವಿವಿ ಪ್ರಾಧ್ಯಾಪಕ ಡಾ.ಅಮರೇಶ ನುಗಡೋಣಿ, ಪ್ರಕಾಶಕರ ಸಂಘದ ಅಧ್ಯಕ್ಷ ಪುಟ್ಟಸ್ವಾಮಯ್ಯ ಮಾತನಾಡಿದರು.ಇದೇ ವೇಳೆ ಚಿಗುರು ಕ್ರಿಯೇಷನ್ ತಂಡ ಡಾ.ಅಮರೇಶ ನುಗಡೋಣಿಯವರನ್ನು ಸನ್ಮಾನಿಸಿತು.ನಂತರ ಕಸ್ತುರಬಾ ಶಾಲೆಯ ವಿದ್ಯಾರ್ಥಿಗಳು ಹಾಗು ಪ್ರಾಧ್ಯಾಪಕರು ಚಲನಚಿತ್ರವನ್ನು ವೀಕ್ಷಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
