ಹಾನಗಲ್ಲ :
ದೇಶದ ಬೆನ್ನೆಲುಬಾದ ರೈತನ ಸಮಸ್ಯೆಗಳಿಗೆ ಸ್ಪಂದಿಸದ ಸರಕಾರ ನಮಗೆ ಬೇಕಾಗಿಲ್ಲ. ರೈತರು ತಮ್ಮ ಬೇಡಿಕೆಗಾಗಿ ಧರಣಿ ಹೂಡುವ ಪ್ರಸಂಗ ತಂದೊಡ್ಡುತ್ತಿರುವ ಸರಕಾರ ರೈತರನ್ನು ಕಡೆಗಣಿಸಿರುವುದರ ಪ್ರತೀಕ. ಇದನ್ನು ಪ್ರತಿಭಟಿಸುತ್ತೇವೆ ಎಂದು ಅಕ್ಕಿಆಲೂರು ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ತಿಳಿಸಿದರು.
ಬುಧವಾರ ಹಾನಗಲ್ಲಿನ ತಹಶೀಲ್ದಾರ ಕಛೇರಿ ಎದುರು ಬಾಳಂಬೀಡ ಏತ ನೀರಾವರಿಗೆ ಹಣ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿಯ ಮೂರನೇ ದಿನ ಧರಣಿ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿ ಮಾತನಾಡಿದ ಅವರು, ರೈತರ ಸಂಕಷ್ಟಗಳನ್ನು ಪರಿಹರಿಸುವ ಸರಕಾರಗಳಿರಬೇಕು. ಹತ್ತಾರು ವರ್ಷಗಳಿಂದ ಬಾಳಂಬೀಡ ಏತ ನೀರಾವರಿಗಾಗಿ ಒತ್ತಾಯವಿದ್ದರೂ ಈ ವರೆಗೂ ಜಾರಿಗೆ ಬರದೇ ಇರುವುದು ಹಾನಗಲ್ಲ ತಾಲೂಕಿನ ಉತ್ತರ ಭಾಗದ ರೈತರ ದುರಾದೃಷ್ಟವಾಗಿದೆ.
ಈಗಲಾದರೂ ಸರಕಾರ ಎಚ್ಚೆತ್ತು ಕೂಡಲೇ ಹಣ ಬಿಡುಗಡೆಗೊಳಿಸಿ ರೈತರ ಸಂಕಷ್ಟವನ್ನು ಪರಿಹರಿಸಬೇಕು. ತಾಲೂಕಿನಲ್ಲಿ ಹರಿದಿರುವ ಎರಡು ನದಿಗಳ ಸದುಪಯೋಗದೊಂದಿಗೆ ರೈತರ ಭೂಮಿಗೆ ನೀರು ಕೊಡುವ ಹೋರಾಟಕ್ಕೆ ನಾವು ರೈತರೊಂದಿಗಿದ್ದೇವೆ ಎಂದರು.
ಅಕ್ಕಿಆಲೂರು ಮುತ್ತಿನಕಂತಿ ಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಈ ನೀರಾವರಿ ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ಯಾವುದೇ ರಾಜಕೀಯ ಬೆರೆಸದೆ ರೈತರಿಗಾಗಿ ಬಾಳಂಬೀಡ ಏತ ನೀರಾವರಿ ಯೋಜನೆ ಜಾರಿಯಾಗಬೇಕು. ಈ ಭಾಗದ ನೂರಕ್ಕೂ ಅಧಿಕ ನೀರಾವರಿ ಕೆರೆಗಳಿಗೆ ನೀರು ತುಂಬಿಸುವುದರಿಂದ ರೈತರ ಬಾಳು ಹಸನಾಗಬಲ್ಲದು. ಈ ಯೋಜನೆ ಬಗೆಗೆ ಸರಕಾರ ನಿರ್ಲಕ್ಷ್ಯ ತೋರಿದ್ದು ಇದು ಸರಿಯಲ್ಲ.
ಮತಕ್ಕಾಗಿ ರೈತರನ್ನು ಭರವಸೆಗಳ ಮೂಲಕ ದುರ್ಬಳಕೆ ಮಾಡಿಕೊಂಡು, ಚುನಾವಣೆ ನಂತರ ರೈತರ ಹಿತಾಸಕ್ತಿಯನ್ನು ಕಡೆಗಣಿಸುವ ಜನಪ್ರತಿನಿಧಿಗಳ ಬಗೆಗೆ ರೈತರು ಇನ್ನುಮುಂದೆ ಎಚ್ಚರಿಕೆಯಿಂದಿರಿ. ಚುನಾವಣಾ ಸಂದರ್ಭದಲ್ಲಿ ತೋರುವ ರಾಜಕಾರಣಿಗಳ ಪ್ರೀತಿ ಗೆದ್ದ ಮೇಲೆ ಏನಾಗುತ್ತದೆ ಎಂದು ತಿಳಿಯುತ್ತಿಲ್ಲ. ರಾಜ್ಯ ಹಾಗೂ ಕೇಂಧ್ರ ಸರಕಾರವನ್ನು ಪ್ರತಿನಿಧಿಸು ಜನಪ್ರತಿನಿಧಿಗಳು ಕೂಡಲೇ ಈ ಯೋಜನೆ ಜಾರಿಯಾಗುವಂತೆ ಸರಕಾರದೊಂದಿಗೆ ಮಾತನಾಡಿ ಇತ್ಯರ್ಥ ಮಾಡಬೇಕು ಎಂದರು.
ರೈತ ಮುಖಂಡರಾದ ಅಡಿವೆಪ್ಪ ಆಲದಕಟ್ಟಿ, ಮಲ್ಲೇಶಪ್ಪ ಪರಪ್ಪನವರ, ಮಹೇಶ ವಿರುಪಣ್ಣನವರ, ಎಂ.ಎಸ್.ಪಾಟೀಲ, ಖಾದರಮೋಹಿದ್ದೀನ ಶೇಖ, ಚಂದ್ರಶೇಖರ ಬೈಲವಾಳ, ಜಗದೀಶ ಪಾಟೀಲ, ಮಹಲಿಂಗಪ್ಪ ಬಿದರಮಳ್ಳಿ, ಮಲ್ಲನಗೌಡ ಪಾಟೀಲ, ಶಿವಾನಂದ ಬೈಲಣ್ಣನವರ, ಸಿದ್ದನಗೌಡ ಕಾಲ್ವೆಕಲ್ಲಾಪೂರ, ಶಿವಪುತ್ರಪ್ಪ ಮನ್ನಂಗಿ, ಜಗದೀಶ ನರೇಗಲ್, ಪಿ.ಸಿ.ದಾನಪ್ಪನವರ, ರಾಮೂ ಯಳ್ಳೂರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ